Sports News: ಅವು ಬಾಳಿ ಬದುಕಬೇಕಾಗಿದ್ದ ಎಳೆಯ ಜೀವಗಳು, ಸಂತಸದಿಂದ ಬದುಕು ಕಳೆದು ಬೆಳೆದು ನಿಲ್ಲಬೇಕಾಗಿದ್ದ ಮುಗ್ಧ ಮನಸ್ಸುಗಳು, ಆದರೆ ಅದೊಂದು ಅನಾಹುತದಿಂದ ಇದೀಗ ಜೀವವನ್ನೇ ಕಳೆದುಕೊಳ್ಳುವಂತಾಗಿದೆ. ಹೌದು.. ಈ ಅಭಿಮಾನ ಅಂದ್ರೆ ಕೇವಲ ಅದೊಂದು ಪದ ಅಂತ ಹೇಳಬಹುದು, ಆದರೆ ಆರ್ಸಿಬಿಯ ವಿಚಾರದಲ್ಲಿ ಅದೊಂದು ಭಾವನೆಯೇ ಆಗಿದೆ ಪ್ರೀತಿ ಮೇಲಾಗಿ ಜೀವನವೇ ಆದಂತಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಭೀಕರ ಕಾಲ್ತುಳಿತದಲ್ಲಿ ಬಲಿಯಾದ ಯುವ ಜನತೆಯ ವಿಚಾರದಲ್ಲಿ ಅಕ್ಷರಶಃ ಆರ್‌ಸಿಬಿ ಉಸಿರೇ ಆಗಿತ್ತು ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಇನ್ನೂ ಸತತ 18 ವರ್ಷಗಳ ಕಾಲ ನಿರಂತರ ಹೋರಾಟದ ಫಲವಾಗಿ ಐಪಿಎಲ್ನ 18ನೇ ಆವೃತ್ತಿಯಲ್ಲಿ ಚೊಚ್ಚಲ ಟ್ರೋಫಿಯನ್ನು ಗೆದ್ದು ಕನ್ನಡಿಗರ ಹಾಗೂ ಅಭಿಮಾನಿಗಳ ಸಂಭ್ರಮವನ್ನು ಆರ್‌ಸಿಬಿ ತಂಡವು ದುಪ್ಪಟ್ಟು ಮಾಡಿತ್ತು. ಯಾವಾಗ ಐಪಿಎಲ್ ಕಪ್ ಅನ್ನು ಆರ್‌ಸಿಬಿ ಗೆದ್ದಿತೋ ಆಗಿನಿಂದಲೇ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ರಾತ್ರಿಯಿಂದ ನಿರಂತರವಾಗಿ ಇಡೀ ದಿನ ಲಕ್ಷಾಂತರ ಅಭಿಮಾನಿಗಳು ಸಂಭ್ರಮದಲ್ಲಿ ಮೊಳಗಿದ್ದರು.
ಆರ್‌ಸಿಬಿ ಫೈನಲ್ ಪಂದ್ಯ ಗೆದ್ದ ಬಳಿಕ ಮರುದಿನವೇ ಬೆಂಗಳೂರಿಗೆ ಆಟಗಾರರು ಬರುವ ಸುದ್ದಿ ತಿಳಿದ ಲಕ್ಷಾಂತರ ಅಭಿಮಾನಿಗಳು ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಬಂದಿದ್ದರು. ವಿಧಾನಸೌಧದ ಎದುರು ಕೆಂಪು ಸಮುದ್ರವೇ ಹರಿದು ಬಂದಂತಾಗಿತ್ತು, ಒಂದೆಡೆ ಆರ್‌ಸಿಬಿ ಆರ್‌ಸಿಬಿ ಅಂತ ಉದ್ಘಾರ, ಜಯಘೋಷಗಳು ಜೋರಾಗಿದ್ದವು. ಆದರೆ ಇನ್ನೊಂದೆಡೆ ನೂಕಾಟ, ತಳ್ಳಾಟ ಕಣ್ಣೀರ ಕೋಡಿಯೆ ಹರಿಯುತ್ತಿತ್ತು.
ಸಂತಸದಲ್ಲಿರಬೇಕಾಗಿದ್ದ ಜೀವಗಳು ಸಾವಿನ ಮನೆ ಸೇರಿದ್ದು ದುರಂತ..!
ಇನ್ನೂ ಸಂಭ್ರಮದಲ್ಲಿ ಭಾಗಿಯಾಗಲು ಬಂದವರು ಚೆಲ್ಲಾಪಿಲ್ಲಿಯಾಗಿ ಓಡಿ ಪ್ರಾಣ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಒಬ್ಬರ ಮೇಲೊಬ್ಬರು ಬಿದ್ದು ಕಾಲ್ತುಳಿತ ಸಂಭವಿಸಿ, ಉಸಿರಾಟಕ್ಕೆ ಪರದಾಡುತ್ತಿದ್ದವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಉಸಿರನ್ನೇ ಚೆಲ್ಲಿದ್ದರು. ಹೀಗೆ ಸಂತಸದಲ್ಲಿರಬೇಕಾಗಿದ್ದವರು ಒಬ್ಬೊಬ್ಬರಾಗಿಯೇ ಒಟ್ಟು 11 ಜನರು ಹುಚ್ಚು ಅಭಿಮಾನಕ್ಕೆ ಸೋತು ಸಾವಿನ ಕದ ತಟ್ಟಿದ್ದಾರೆ. ಅಲ್ಲದೆ 47ಕ್ಕೂ ಅಧಿಕರ ಜನರು ಗಾಯಗೊಂಡಿದ್ದು, ಐಪಿಎಲ್ ಇತಿಹಾಸದಲ್ಲಿಯೇ ಇದೊಂದು ಕಪ್ಪು ಚುಕ್ಕೆಯಾಗಿದೆ. ಅಲ್ಲದೆ ಚೊಚ್ಚಲ ಕಪ್ ಗೆದ್ದಿರುವ ಕೊಹ್ಲಿ ಪಡಗೂ ಇದು ಅರಗಿಸಿಕೊಳ್ಳಲಾಗದ ನೋವಾಗಿದೆ ಎನ್ನುವುದು ಸುಳ್ಳಲ್ಲ.
ಅಲ್ಲದೆ ಶೋಚನೀಯ ವಿಷಯವೆಂದರೆ ಈ ಭೀಕರ ಕಾಲ್ತುಳಿತ ದುರಂತದಲ್ಲಿ ಜೀವ ಬಿಟ್ಟವರಲ್ಲಿ ಎಲ್ಲರೂ ಯುವ ಸಮೂಹಕ್ಕೆ ಸೇರಿದವರಾಗಿದ್ದಾರೆ ಎನ್ನುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಜೀವನದಲ್ಲಿ ಚೆನ್ನಾಗಿ ಓದಿ ಸುಂದರ ಸುಮಧುರ ಬದುಕನ್ನು ಅನುಭವಿಸಬೇಕಿದ್ದ ಅಮಾಯಕ ಜೀವಗಳು ಮಾಡದ ತಪ್ಪಿಗೆ ಮಸಣ ಸೇರುವಂತಾಗಿದೆ.
ಇನ್ನೂ ನನ್ನ ಮೊಮ್ಮಗಳ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಲ್ಲಿ ಮೃತಪಟ್ಟ ಯಲಹಂಕದ ದಿವ್ಯಾಂಶಿಯ ಅಜ್ಜ ಕಿಡಿಕಾರಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಬುಧವಾರ ಮಧ್ಯಾಹ್ನ 4:30ಕ್ಕೆ ಕರೆ ಮಾಡಿ ದಿವ್ಯಾಂಶಿ ಮೃತಪಟ್ಟ ಮಾಹಿತಿ ನೀಡಿದರು. ಆಂಧ್ರದ ಅನ್ನಮಯ ಜಿಲ್ಲೆಗೆ ಮೃತದೇಹ ಶಿಫ್ಟ್ ಮಾಡುತ್ತೇವೆ. ನನ್ನ ಮೊಮ್ಮಗಳ ಸಾವಿಗೆ ಸರ್ಕಾರವೇ ನೇರ ಹೊಣೆ. ಸ್ಥಳದಲ್ಲಿ ಯಾವುದೇ ಪೋಲಿಸ್ ವ್ಯವಸ್ಥೆ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
9ನೇ ತರಗತಿ ಓದುತ್ತಿದ್ದ ಬಾಲಕಿ ಅಸ್ವಸ್ಥ, ಉಸಿರು ಬಿಟ್ಟ ದಿವ್ಯಾಂಶಿ..
ಗೇಟ್ ನಂಬರ್ 15ರ ಒಳಗೆ ಹೋದಾಗ ಈ ಘಟನೆ ನಡೆದಿದೆ. ಬಿದ್ದ ಮೊಮ್ಮಗಳನ್ನು ಜೊತೆಗೆ ಇದ್ದವರೇ ಆಟೋದಲ್ಲಿ ಕರೆದುಕೊಂಡು ಹೋದರು. ಸರ್ಕಾರ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ತಾಯಿ, ಚಿಕ್ಕಮ್ಮ ಜೊತೆಗೆ ಹೋಗಿದ್ದರು ಎಂದು ಅವರು ಕಣ್ಣೀರಾಗಿದ್ದಾರೆ. ಅಲ್ಲದೆ 9ನೇ ತರಗತಿ ಓದುತ್ತಿದ್ದ ದಿವ್ಯಾಂಶಿ ಕಾಲ್ತುಳಿತದ ವೇಳೆ ಅಸ್ವಸ್ಥಗೊಂಡು ಮೃತಪಟ್ಟಿದ್ದಳು ಎಂದು ತಿಳಿಸಿದ್ದಾರೆ. ಶಿವಕುಮಾರ್ ಹಾಗೂ ಅಶ್ವಿನಿ ದಂಪತಿಯ ಮಗಳಾದ ದಿವ್ಯಾಂಶಿ ಚಿಕ್ಕಮ್ಮ ರಚನಾ ಹಾಗೂ ಇನ್ನಿಬ್ಬರ ಜೊತೆ ಆರ್‌ಸಿಬಿ ಸಂಭ್ರಮಾಚರಣೆ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿದ್ದಳು. ನೂಕುನುಗ್ಗಲಿನಲ್ಲಿ ಕಾಲ್ತುಳಿತ ಉಂಟಾಗಿ ಉಸಿರಾಡಲು ಸಾಧ್ಯವಾಗದೆ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾಳೆ. ಮಗಳನ್ನು ಕಳೆದುಕೊಂಡ ಕುಟುಂಬಸ್ಥರು ಇದೀಗ ವಿಧಿಯನ್ನು ಶಪಿಸುತ್ತಾ ಕಾಲ ಕಳೆಯುವಂತಾಗಿದೆ.
ಮಗ ಇನ್ನಿಲ್ಲ ಎನ್ನುವುದನ್ನು ಕೇಳಿ ಹೆತ್ತವರಿಗೆ ಅಪ್ಪಳಿಸಿದ ಬರ ಸಿಡಿಲು..
ಅಲ್ಲದೆ ಕಾಲ್ತುಳಿತಕ್ಕೆ ಇಬ್ಬರು ವಿದ್ಯಾರ್ಥಿಗಳ ದುರಂತ ಅಂತ್ಯ ಕಂಡಿದ್ದಾರೆ. ಯಲಹಂಕ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ 17 ವರ್ಷದ ಶಿವು ಎಂಬ ಬಾಲಕ ಸಾವನ್ನಪ್ಪಿದ್ದಾನೆ. ಯಾದಗಿರಿ ಮೂಲದನಾಗಿದ್ದ ಈತನ ಕುಟುಂಬ ಕಣ್ಣೂರಿನಲ್ಲಿ ವಾಸವಾಗಿತ್ತು. ಈತನ ತಂದೆ ತಾಯಿ ಇಬ್ಬರು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಇದೀಗ ಮಗ ಇನ್ನಿಲ್ಲ ಎನ್ನುವುದನ್ನು ಕೇಳಿ ಹೆತ್ತವರಿಗೆ ಬರ ಸಿಡಿಲೇ ಅಪ್ಪಳಿಸಿದಂತಾಗಿದೆ.
ಈ ಭೀಕರ ಕಾಲ್ತುಳಿತ ದುರಂತದಲ್ಲಿ ಅಮೇಜಾನ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ 25 ವರ್ಷದ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ದೇವಿ ಎಂಬವರು ಪ್ರಾಣ ಕಳೆದುಕೊಂಡಿದ್ದಾರೆ. ಮೂಲತಃ ತಮಿಳುನಾಡಿನ ನಿವಾಸಿಯಾಗಿದ್ದ ಇವರು, ಮಾರತ್ ಹಳ್ಳಿ ಬಳಿ ಪಿಜಿಯಲ್ಲಿ ವಾಸವಾಗಿದ್ದರು. ಇವರು ತಂದೆ ತಾಯಿಗೆ ಒಬ್ಬಳೇ ಮಗಳಾಗಿದ್ದರು. ತಂದೆ, ತಾಯಿ ಇಬ್ಬರಿಗೂ ವಯಸ್ಸಾಗಿದ್ದು ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ ಈ ದುರಂತದಲ್ಲಿ ಮಗಳನ್ನು ಕಳೆದುಕೊಂಡ ಕುಟುಂಬಕ್ಕೆ ಆಧಾರವಿಲ್ಲದೆ ಹೆತ್ತ ಕರುಳುಗಳು ಕಂಗಾಲಾಗಿರುವುದು ಮಾತ್ರ ವಿಪರ್ಯಾಸದ ಸಂಗತಿಯಾಗಿದೆ.
ಇಂಜಿನಿಯರಿಂಗ್ ಓದಿ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭೂಮಿಕ್..
ಇನ್ನೂ ಕಾಲ್ತುಳಿತ ದುರ್ಘಟನೆಯಲ್ಲಿ ಬೆಂಗಳೂರಿನಲ್ಲಿ ಇಂಜಿನಿಯರ್ ಕೆಲಸ ಮಾಡುತ್ತಿದ್ದ ಕೋಲಾರದ 24 ವರ್ಷದ ಸಹನಾ ಎಂಬ ಯುವತಿ ದುರಂತ ಅಂತ್ಯವಾಗಿದ್ದಾರೆ. ಕೆಜಿಎಫ್ ತಾಲೂಕಿನ ಬಡಮಾಕನಹಳ್ಳಿ ಗ್ರಾಮದವರಾಗಿದ್ದ ಸಹನಾ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಶಿಕ್ಷಕ ದಂಪತಿಯಾದ ಸುರೇಶ ಬಾಬು ಮತ್ತು ಮಂಜುಳಾ ಅವರ ಪುತ್ರಿ ಎಂಬ ಮಾಹಿತಿ ಲಭ್ಯವಾಗಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ರಾಯಸಮುದ್ರದ ಪೂರ್ಣಚಂದ್ರ ಎಂಬವವರು ಜೀವ ಕಳೆದುಕೊಂಡಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಓದಿದ್ದ ಇವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ಲದೆ ಹಾಸನ ಜಿಲ್ಲೆಯ ಬೇಲೂರಿನ ಭೂಮಿಕ್ ಎಂಬಾತ ಸಹ ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಇವರು ಬೆಂಗಳೂರಿನ 8ನೇ ಮೈಲಿಯ ಸೌಂದರ್ಯ ಕಾಲೇಜಿನ ಬಳಿ ವಾಸವಾಗಿದ್ದರು. ಚಿನ್ನಸ್ವಾಮಿ ಸ್ಟೇಡಿಯಂ ಎದುರು ಸಂಭವಿಸಿದ್ದ ನೂಕುನುಗ್ಗಲಿನಲ್ಲಿ ಕಾಲ್ತುಳಿತದಲ್ಲಿ ಇವರೂ ಸಹ ಸಿಲುಕಿಕೊಂಡು ಉಸಿರು ನಿಲ್ಲಿಸಿದ್ದಾರೆ.
ಸಾವನ್ನಪ್ಪಿರುವವರು ಯಾರು..?
ಇನ್ನೂ ಈ ದುರ್ಘಟನೆಯಲ್ಲಿ ಮೃತಪಟ್ಟ ಯುವ ಅಭಿಮಾನಿಗಳಲ್ಲಿ ಎಲ್ಲರೂ ರಾಜ್ಯದ ವಿವಿಧ ಜೆಲ್ಲೆಗಳಿಗೆ ಸೇರಿದವರಾಗಿದ್ದಾರೆ. ಅದರಲ್ಲಿ 20 ವರ್ಷದ ಭೂಮಿಕ್ ಬೆಂಗಳೂರಿನ ನೆಲಮಂಗಲದ ನಿವಾಸಿಯಾಗಿದ್ದಾನೆ. 19 ವರ್ಷದ ಸಹನಾ ಕೋಲಾರದವರಾಗಿದ್ದಾರೆ, 32 ವರ್ಷದ ಪೂರ್ಣಚಂದ್ರ ಮಂಡ್ಯದವರಾಗಿದ್ದಾರೆ. 19 ವರ್ಷದ ಚಿನ್ಮಯಿ, 13 ದಿವ್ಯಾಂಶಿ ಯಲಹಂಕದವರು, ಚಿಕ್ಕಬಳ್ಳಾಪುರದ 20 ವರ್ಷದ ಶ್ರವಣ್, ತಮಿಳುನಾಡು ಮೂಲದ 29 ವರ್ಷದ ಯುವತಿ ದೇವಿ, ಯಾದಗಿರಿ ಮೂಲದ 17 ವರ್ಷದ ಶಿವು, 33 ವರ್ಷದ ತುಮಕೂರಿನ ಮನೋಜ್ ಹಾಗೂ ಹೆಸರು ಪತ್ತೆಯಾಗದ 20 ವರ್ಷದ ಇನ್ನೋರ್ವರು ಸೇರಿ ಒಟ್ಟು 11 ಮಂದಿ ಅಭಿಮಾನಿಗಳು ತಮ್ಮ ಅಭಿಮಾನದೊಂದಿಗೆ ಬದುಕಿನ ಅಂತಿಮಯಾತ್ರೆಯನ್ನು ಮುಗಿಸಿದ್ದು ಮಾತ್ರ ನಿಜಕ್ಕೂ ದುರಂತವೆ ಸರಿ..!