International News: ಪಾಕಿಸ್ತಾನದ ಕ್ವೆಟ್ಟಾದಿಂದ ಪೇಶಾವರದ ಕಡೆಗೆ ಹೊರಟ್ಟಿದ್ದ ಜಾಫರ್ ಎಕ್ಸ್‌ಪ್ರೆಸ್ ಮೇಲೆ ಬಲೂಚ್ ವಿಮೋಚನಾ ಪಡೆಯ ಬಂಡುಕೋರರು ದಾಳಿ ನಡೆಸಿ ರೈಲನ್ನೇ ಹೈಜಾಕ್ ಮಾಡಿರುವ ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲಿನ ಮೇಲೆ ಗುಂಡಿನ ದಾಳಿಯನ್ನು ನಡೆಸಿ 500 ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಇನ್ನೂ ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ ಸೇನಾಪಡೆಗಳು 80 ಜನರ ರಕ್ಷಣೆ ಮಾಡಿದ್ದಲ್ಲದೆ 13 ಬಂಡುಕೋರರನ್ನು ಹತ್ಯೆ ಮಾಡಿವೆ. ಇನ್ನುಳಿದ ಪ್ರಯಾಣಿಕರ ರಕ್ಷಣೆಗೆ ಸೇನೆಯು ಕಾರ್ಯಾಚರಣೆ ನಡೆಸಿದೆ.
ಅಲ್ಲದೆ ಸೇನೆಯು ಪ್ರಯಾಣಿಕರನ್ನು ಉಳಿಸುವಲ್ಲಿ ಕೈಗೊಂಡ ಕಾರ್ಯಾಚರಣೆಗೆ ಬಂಡು ಕೋರರು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸೇನೆಯು ನಮ್ಮ ವಿರುದ್ಧ ಕಾರ್ಯಾಚರಣೆ ಮುಂದುವರೆಸಬಾರದು. ಒಂದು ವೇಳೆ ನಮ್ಮ ವಿರುದ್ಧ ಹೆಜ್ಜೆ ಮುಂದಿಟ್ಟರೆ ಎಲ್ಲ ಪ್ರಯಾಣಿಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಇನ್ನೂ ಇದೇ ವಿಚಾರದಲ್ಲಿ ಮಾತನಾಡಿರುವ ಪಾಕಿಸ್ತಾನದ ಮಾಜಿ ಸಂಸದ ಖಾದಿರ್ ಬಲೂಚ್, ಬಂಡುಕೋರರು ತಮ್ಮ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದ 150 ಯೋಧರನ್ನು ಹೊಡೆದುರುಳಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಕುರಿತು ಯಾವುದೇ ಮಾಹಿತಿ ದೃಢಪಟ್ಟಿಲ್ಲ
155 ಒತ್ತೆಯಾಳುಗಳ ರಕ್ಷಣೆ..
ಅಂದಹಾಗೆ ಬಂಡುಕೋರರು ಇಟ್ಟುಕೊಂಡಿದ್ದ ಒತ್ತೆಯಾಳುಗಳಲ್ಲಿ 155 ಜನರನ್ನು ಭದ್ರತಾ ಪಡೆಗಳು ರಕ್ಷಿಸುವೆ. ಶಸ್ತ್ರಸಜ್ಜಿತ ದಾಳಿಕೋರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಭಾರೀ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿವೆ. ಈ ಕಾರ್ಯಾಚರಣೆ ವೇಳೆ 27 ಬಂಡುಕೋರರನ್ನು ಹೊಡೆದುರುಳಿಸಿವೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ರಕ್ಷಿಸಲಾದ ಪ್ರಯಾಣಿಕರನ್ನು ಹತ್ತಿರದ ಪಟ್ಟಣವಾದ ಮಾಚ್‌ಗೆ ಕರೆದೊಯ್ಯಲಾಗಿದೆ. ಅಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.
ಅಲ್ಲದೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ, ಬಿಎಲ್‌ಎ ಬಂಡುಕೋರರು ಮತ್ತು ಪಾಕಿಸ್ತಾನಿ ಪಡೆಗಳ ನಡುವಿನ ಗುಂಡಿನ ಚಕಮಕಿ ರಾತ್ರಿಯಿಡೀ ಮುಂದುವರಿದಿದೆ. ಜಾಫರ್ ಎಕ್ಸ್‌ಪ್ರೆಸ್‌ನಲ್ಲಿ ಎಷ್ಟು ಒತ್ತೆಯಾಳುಗಳು ಉಳಿದಿದ್ದಾರೆ ಎಂಬುದು ಇದುವರೆಗೂ ನಿಖರವಾಗಿ ತಿಳಿದುಬಂದಿಲ್ಲ. ಇನ್ನೂ ಬಂಡುಕೋರರು ಕೆಲ ಒತ್ತೆಯಾಳುಗಳನ್ನು ಪರ್ವತಗಳ ಮರೆಯಲ್ಲಿ ಬಚ್ಚಿಟ್ಟಿದ್ದಾರೆ, ಇದನ್ನು ಪತ್ತೆ ಹಚ್ಚಲು ಪಾಕಿಸ್ತಾನ ಸೇನಾ ಪಡೆಗಳು ಶೋಧ ನಡೆಸಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಪಾಕಿಸ್ತಾನದ ಸೇನೆಯು ಬಂಡುಕೊರರಿಂದ ಒತ್ತೆಯಾಳುಗಳನ್ನು ರಕ್ಷಣೆ ಮಾಡಲು ಪೂರ್ಣ ಪ್ರಮಾಣದ ಕಾರ್ಯಚರಣೆಯನ್ನು ಘೋಷಿಸಿದೆ. ಆದರೆ ಪರ್ವತ ಶ್ರೇಣಿಗಳಲ್ಲಿ ಶೋಧಕ್ಕೆ ಸೇನೆಯು ಅಡಚಣೆಯನ್ನು ಅನುಭವಿಸುತ್ತಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರದ ಸ್ಥಾಪನೆಗಾಗಿ ಬಲೂಚಿಸ್ತಾನದ ಬಿಎಲ್‌ಎ ಬಂಡುಕೋರರು ಹಲವು ದಿನಗಳಿಂದ ಸಂಘರ್ಷ ನಡೆಸುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿಯೇ ರೈಲನ್ನೇ ಹೈಜಾಕ್ ಮಾಡಿ ಅವರು ಆಕ್ರೋಶ ಹೊರಹಾಕಿದ್ದಾರೆ.