ಕಳೆದ ಕಥೆಯಲ್ಲಿ ನಾವು ಕರ್ಣನಿಗೆ ತಟ್ಟಿದ ಎರಡು ಶಾಪಗಳ ಬಗ್ಗೆ ಹೇಳಿದ್ದೆವು. ಅದರ ಮುಂದುವರಿದ ಭಾಗವಾಗಿ ಇನ್ನುಳಿದ ಶಾಪಗಳು ಯಾವವು..? ಯಾರು ಕರ್ಣನಿಗೆ ಶಾಪ ಕೊಟ್ಟರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಮ್ಮೆ ಕರ್ಣ ಧನುರ್ವಿದ್ಯೆಯನ್ನ ಅಭ್ಯಾಸ ಮಾಡುತ್ತಿರುವಾಗ, ಆ ಬಾಣ ಬ್ರಾಹ್ಮಣನ ಗೋವಿಗೆ ತಾಕಿತು. ಆ ಗೋವು ನರಳಿ ನರಳಿ ಸತ್ತು ಹೋಯ್ತು. ಇದನ್ನು ಕಂಡು ಕೋಪಗೊಂಡ ಬ್ರಾಹ್ಮಣ, ನನ್ನ ಗೋವು ಹೇಗೆ ನರಳಿ ನರಳಿ ಸತ್ತು ಹೋಯಿತೋ, ಆ ರೀತಿ ನೀನು ಸಹ ನರಳಿ ನರಳಿ ಪ್ರಾಣ ಬಿಡುವಂತಾಗಲಿ ಎಂದು ಶಾಪವಿತ್ತರು. ಮಹಾಭಾರತ ಯುದ್ಧ ಕಾಲದಲ್ಲಿ ಕರ್ಣ ಅರ್ಜುನನ ಬಾಣದ ಹೊಡೆತಕ್ಕೆ ಬಲಿಯಾಗಿ ನರಳಿ ನರಳಿ ಸತ್ತು ಹೋದ.
ಇನ್ನು ಕರ್ಣ ದಾನ ಮಾಡಲು ಯಾವಾಗಲೂ ಮುಂದಿರುತ್ತಿದ್ದ. ಹಾಗಾಗಿ ಆತನನ್ನು ದಾನ ಶೂರ ಕರ್ಣ ಅಂತಲೇ ಕರೆಯಲಾಗುತ್ತಿತ್ತು. ಆತ ಸೂರ್ಯ ದೇವನಿಂದ ಜನಿಸಿದ್ದ ಕಾರಣಕ್ಕೆ ಸೂರ್ಯ, ಕರ್ಣನಿಗೆ ವರವಾಗಿ ಕರ್ಣ ಕುಂಡಲವನ್ನು ಮತ್ತು ಕವಚವನ್ನು ನೀಡಿದ್ದ. ಇದು ಕರ್ಣನ ಬಳಿ ಇರುವ ತನಕ ಅವನಿಗೆ ಮರಣ ಬರುವುದಿಲ್ಲವೆಂದು ಹೇಳಿದ್ದ. ಅಲ್ಲದೇ ಮಹಾಭಾರತ ಯುದ್ಧಕ್ಕೂ ಮುಂಚೆ ಪ್ರತ್ಯಕ್ಷನಾಗಿದ್ದ ಸೂರ್ಯ, ಇಂದು ನಿನ್ನ ಬಳಿ ಇಂದ್ರ ವೇಷ ಮರೆಸಿಕೊಂಡು ಬರುತ್ತಾನೆ. ಮತ್ತು ತನ್ನ ಮಗ ಅರ್ಜುನನ ಒಳಿತಿಗಾಗಿ ನಿನ್ನ ಬಳಿ ನಿನ್ನ ಕರ್ಣ ಕುಂಡಲ ಮತ್ತು ಕವಚವನ್ನು ಕೇಳುತ್ತಾನೆ. ಯಾವುದೇ ಕಾರಣಕ್ಕೂ ಅದನ್ನು ಕೊಡಬೇಡ ಎನ್ನುತ್ತಾನೆ.
ಕೆಲ ಸಮಯದ ಬಳಿಕ ಇಂದ್ರ ಬ್ರಾಹ್ಮಣನ ವೇಷ ಧರಿಸಿ ಬರುತ್ತಾನೆ. ಕರ್ಣನ ಬಳಿ ಕುಂಡಲ ಮತ್ತು ಕವಚವನ್ನು ಕೇಳುತ್ತಾನೆ. ಆ ಬ್ರಾಹ್ಮಣ ವೇಷಧಾರಿ ಇಂದ್ರನೆಂದು ಗೊತ್ತಿದ್ದರೂ ಕೂಡ ಮಾತಿಗೆ ತಪ್ಪದ ಕರ್ಣ, ಕವಚ ಮತ್ತು ಕುಂಡಲ ನೀಡುತ್ತಾನೆ. ಕೊನೆಗೆ ಯುದ್ಧ ಸಮಯದಲ್ಲಿ ಅರ್ಜುನನ ಬಾಣಕ್ಕೆ ಗುರಿಯಾಗುತ್ತಾನೆ.
ಇನ್ನು ಕೊನೆಯದಾಗಿ ಕುಂತಿ ದೇವಿಗೆ ಕರ್ಣ ಮಾತು ಕೊಡುತ್ತಾನೆ. ಮಹಾಭಾರತ ಯುದ್ಧದ ಕೊನೆಯ ದಿನಕ್ಕೂ ಮುಂಚೆ ಕರ್ಣನ ಬಳಿ ಬರುವ ಕುಂತಿ, ನೀನು ಕೂಡ ನನ್ನ ಮಗ, ಅರ್ಜುನನೂ ಕೂಡ ನನ್ನ ಮಗ. ಆದರೆ ನಾನು ಅವಿವಾಹಿತೆಯಾಗಿದ್ದಾಗ, ಮುನಿಗಳ ವರವನ್ನು ಪರೀಕ್ಷಿಸಲು ಸೂರ್ಯನ ಬಳಿ ನಿನ್ನನ್ನು ಪಡೆದಿದ್ದೆ. ಈ ಮಾತು ಬೇರೆಯವರಿಗೆ ಗೊತ್ತಾದರೆ ನನಗೆ ಅವಮಾನವಾಗುತ್ತದೆ ಎಂದು, ನಿನ್ನನ್ನು ನೀರಿನಲ್ಲಿ ಬಿಟ್ಟಿದ್ದೆ. ಆದ್ರೆ ಅರ್ಜುನನ್ನು ಚಿಕ್ಕಂದಿನಿಂದ ಎದೆಗವಚಿಕೊಂಡು ಬೆಳೆಸಿದ್ದೇನೆ. ನಾಳೆ ಯುದ್ಧದಲ್ಲಿ ನನ್ನ ಮಗನ ಜೀವ ಭಿಕ್ಷೆ ಬೇಡುತ್ತಿದ್ದೇನೆ, ಎಂದು ಬೇಡುತ್ತಾಳೆ. ಆಗ ಕರ್ಣ, ಅರ್ಜುನನ ಜೀವಕ್ಕೆ ಯಾವುದೇ ತೊಡಕುಂಟಾಗದಂತೆ ನೋಡಿಕೊಳ್ಳುವೆ ಎಂದು ಮಾತು ಕೊಡುತ್ತಾನೆ.
ಗೊತ್ತಿದ್ದೋ, ಗೊತ್ತಿಲ್ಲದೇಯೋ ಕರ್ಣ ಮಾಡಿದ ತಪ್ಪಿಗೆ ಶಾಪ ಪಡೆದಿದ್ದ. ಅಲ್ಲದೇ ದಾನ ಶೂರನೆಂಬ ಹೆಸರಿಗೆ ತಕ್ಕಂತೆ ಒಮ್ಮೆ ಮಾತು ಕೊಟ್ಟರೆ ಅದನ್ನು ತಪ್ಪದೇ ನಡೆಸಿಕೊಡುತ್ತಿದ್ದ. ಹಾಗಾಗಿ ಆ ಮಾತೇ ಆತನಿಗೆ ಮುಳುವಾಯಿತು. ಇದೇ ಶಾಪ, ಮಾತುಗಳನ್ನೆಲ್ಲ ತಿಳಿದಿದ್ದ ಕೃಷ್ಣ, ಅರ್ಜುನನಿಗೆ ಯುದ್ಧ ತಂತ್ರಗಳನ್ನು ಹೇಳಿಕೊಟ್ಟು, ಷಡ್ಯಂತ್ರದಿಂದ ಕರ್ಣನನ್ನು ಸೋಲಿಸಿದ. ಅಲ್ಲಿಗೆ ಕರ್ಣನ ಯುಗಾಂತ್ಯವಾಯಿತು.