ಸೋಶಿಯಲ್ ಮೀಡಿಯಾ ಸ್ಟಾರ್, ಸುಶ್ಮಿತಾ ಶೇಷಗಿರಿ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಾವು ಗರ್ಭಿಣಿಯಾಗಿದ್ದಾಗ, ಕೆಲವರು ಹೇಗೆ ಅವರನ್ನು ಹಂಗಿಸಿದ್ದರು, ಬಾಡಿ ಶೇಮಿಂಗ್ ಮಾಡಿದ್ದರು ಅನ್ನೋ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ತಾವು ಗರ್ಭಿಣಿಯಾಗಿದ್ದಾಗ, ಸಿಕ್ಕಾಪಟ್ಟೆ ದಪ್ಪವಾಗಿಬಿಟ್ಟಿದ್ದೆ. ಪ್ರತೀ ಹೆಣ್ಣು ತಾಯಿಯಾದಾಗ ದೇಹದಲ್ಲಿ ಹಾರ್ಮೋನ್ಗಳ ಬದಲಾವಣೆಯಾಗುತ್ತದೆ. ಈ ವೇಳೆ ದಪ್ಪಗಾಗುವುದು ಸಹಜ. ಆದ್ರೆ ನಾನೋರ್ವ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ, ಆ ಸಮಯದಲ್ಲಿ ನಾನು ಪಟ್ಟ ಪಾಡು ಅಷ್ಟಿಷ್ಟಲ್ಲ. ಪ್ರೆಗ್ನೆಂಟ್ ಇದ್ದಾಗ, ಮುಖವೆಲ್ಲ ಊದಿತ್ತು. ಅಷ್ಟು ದಪ್ಪಗಿದ್ದೆ. ಕ್ಲೀನ್ ಆಗಿದ್ದ ಸ್ಕಿನ್ ಮೇಲೆ ರಾಶಿ ರಾಶಿ ಮೊಡವೆಗಳು ಆಗೋಕ್ಕೆ ಶುರುವಾಯ್ತು. ಅಲ್ಲದೇ ಎಣಿಸಲಾಗದಷ್ಟು ಕೂದಲು ಉದುರಲು ಶುರುವಾಯ್ತು.
ಇದನ್ನೆಲ್ಲ ಕಂಡು ನಾನು ಹೆದರಿ ಅಳುತ್ತಿದ್ದೆ. ಅದೇ ಸಮಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ನನಗೆ ಬಾಡಿ ಶೇಮಿಂಗ್ ಮಾಡಲು ಶುರು ಮಾಡಿದ್ರು. ಹೂ ಇದ್ದಂಗಿದ್ಲು, ಹೋಕೋಸಾದಂಗಾಗ್ಬಿಟ್ಲು ಅಂತಿದ್ರು. ಹೀಗೆ ಹಂಗಿಸೋಕ್ಕೆ ಶುರು ಮಾಡಿದಾಗ, ನನಗೆ ತುಂಬಾ ಬೇಸರವಾಗುತ್ತಿತ್ತು. ತಾಯಿಯಾದರೆ ಇಷ್ಟೆಲ್ಲ ಅನುಭವಿಸಬೇಕಾ ಅನ್ನಿಸುತ್ತಿತ್ತು. ಆಗ ನಾನು ಇನ್ಸ್ಟಾಗ್ರಾಮ್ನಲ್ಲಿ, ನಾನು ಹೇಗಿದ್ದಿನೋ ಹಾಗೆ ಖುಷಿಯಾಗಿದ್ದೀನಿ. ನೀವು ನನ್ನ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಬಾಡಿ ಶೇಮಿಂಗ್ ಮಾಡಿ ಹಂಗಿಸಬೇಡಿ. ನನಗೆ ಬೇಸರವಾಗತ್ತೆ. ನಿಮಗೆ ನಾನಿಷ್ಟವಾಗದಿದ್ದಲ್ಲಿ, ನನ್ನನ್ನು ಬ್ಲಾಕ್ ಮಾಡಿ. ಇಲ್ಲವಾದಲ್ಲಿ, ನನ್ನನ್ನು ಫಾಲೋ ಮಾಡಲೇಬೇಡಿ. ಅದನ್ನು ಬಿಟ್ಟು ಹೀಗೆ ಹಂಗಿಸಿ, ಬೇಸರ ಮಾಡಬೇಡಿ ಎಂದು ನಾನು ಸ್ಟೇಟಸ್ ಹಾಕಿದ್ದೆ ಎಂದು ಸುಶ್ಮಿತಾ ಹೇಳಿದ್ದಾರೆ.
ಆದ್ರೆ ಮಗು ಹುಟ್ಟಿದ ಬಳಿಕ, ಬಾಣಂತನವಾದ ಬಳಿಕ 72 ಕೆಜಿ ಇದ್ದ ಸುಶ್ಮಿತಾ 52 ಕೆಜಿ ಆಗಿದ್ದಾರೆ. ಪ್ರೋಟಿನ್ ಭರಿತವಾದ ಫುಡ್ ತಿಂದು ಆರೋಗ್ಯವಾಗಿದ್ದರಂತೆ. ಮಗುವಿಗೆ ನಾನು ಫೀಡ್ ಮಾಡಬೇಕಾದ ಕಾರಣ, ಹಾಲು, ಮೊಟ್ಟೆ, ತರಕಾರಿ, ಸೊಪ್ಪನ್ನೆಲ್ಲ ಚೆನ್ನಾಗಿ ತಿನ್ನುತ್ತಿದ್ದೇನೆ. ಸದ್ಯ ನನಗೆ ಪಿಂಪಲ್ ಸಮಸ್ಯೆ, ಕೂದಲು ಉದುರುವ ಸಮಸ್ಯೆ ಮತ್ತು ವೇಟ್ ಗೇನಿಂಗ್ ಸಮಸ್ಯೆ ಕಡಿಮೆಯಾಗಿದೆ ಎಂದಿದ್ದಾರೆ.