ಅವಲಕ್ಕಿ ಚೂಡಾ, ಇದನ್ನ ಬೆಳಗ್ಗಿನ ಉಪಹಾರ ಜೊತೆಗೂ ತಿನ್ನಬಹುದು, ಟೀ ಟೈಮ್ ಸ್ನ್ಯಾಕ್ಸ್ ಆಗಿಯೂ ತಿನ್ನಬಹುದು.
ಉತ್ತರಕರ್ನಾಟಕದ ಜನ ಬೆಳಿಗ್ಗೆ ಉಪ್ಪಿಟ್ಟು- ಅವಲಕ್ಕಿ ಜೊತೆ ಚೂಡಾ ಇದ್ರೆನೇ ಮಜಾ ಅಂತಾರೆ. ಮದುವೆ ಮುಂಜಿ ಕಾರ್ಯಕ್ರಮದಲ್ಲಿ ಬೆಳಗ್ಗಿನ ಉಪಹಾರದ ಜೊತೆ ಅವಲಕ್ಕಿ ಅಥವಾ ಚುರ್ಮುರಿ ಚೂಡಾ ಇದ್ರೇನೆ ಕಾರ್ಯಕ್ರಮದ ತಿಂಡಿ ಕಂಪ್ಲೀಟ್ ಇದ್ದಂಗೆ. ಹಾಗಾದ್ರೆ ಇನ್ಯಾಕೆ ತಡ..? ಅವಲಕ್ಕಿ ಚೂಡಾ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ .
ಚೂಡಾ ಮಾಡಲು ಬೇಕಾಗುವ ಸಾಮಗ್ರಿ: ಒಂದು ಕಪ್ ಅವಲಕ್ಕಿ, ಒಂದು ಕಪ್ ಹುರಿದುಕೊಂಡ ಶೇಂಗಾ ಮತ್ತು ಹುರಿಗಡಲೆ ಮಿಕ್ಸ್, ಹುರಿಯಲು ಅಗತ್ಯವಿದ್ದಷ್ಟು ಎಣ್ಣೆ, 10ರಿಂದ 15 ಎಸಳು ಕರೀಬೇವು, ಒಂದು ಸ್ಪೂನ್ ಖಾರದ ಪುಡಿ,10ರಿಂದ 15 ಎಸಳು ಬೆಳ್ಳುಳ್ಳಿ, ಅರ್ಧ ಸ್ಪೂನ್ ಸಕ್ಕರೆ, ಚಿಟಿಕೆ ಖಾರದ ಪುಡಿ, ಚಿಟಿಕೆ ಅರಿಷಿನ, ಒಂದು ಸ್ಪೂನ್ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಹುರಿಯಲು ಅಗತ್ಯವಿದ್ದಷ್ಟು ಎಣ್ಣೆ ಹಾಕಿ, ಕರೀಬೇವು ಹಾಕಿ ಕೊಂಚ ಹುರಿಯಿರಿ.
ನಂತರ ಬೆಳ್ಳುಳ್ಳಿ ಎಸಳು ಹಾಕಿ ಕೊಂಚ ಕಂದು ಬಣ್ಣ ಬರುವವರೆಗೂ ಹುರಿಯಿರಿ.
ಬೆಳ್ಳುಳ್ಳಿ ಘಮ ಬರಲು ಶುರುವಾದ ಮೇಲೆ ಹುರಿದಿಟ್ಟುಕೊಂಡ ಶೇಂಗಾ, ಹುರಿಗಡಲೆ ಮಿಶ್ರಣ ಸೇರಿಸಿ ಮತ್ತೆ ಕೊಂಚ ಹುರಿಯಿರಿ. ಅಗತ್ಯವಿದ್ದಲ್ಲಿ ಒಣ ಕೊಬ್ಬರಿ ತುರಿ ಸೇರಿಸಿ, ಹುರಿಯಿರಿ.
ಈಗ ಸಕ್ಕರೆಪುಡಿ, ಖಾರದ ಪುಡಿ, ಅರಿಷಿನ, ಜೀರಿಗೆ, ಉಪ್ಪಿನ ಮಿಶ್ರಣ ಹಾಕಿ ಕೊಂಚ ಹುರಿದು ಅವಲಕ್ಕಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, 5 ನಿಮಿಷ ಹುರಿದರೆ ಅವಲಕ್ಕಿ ಚಿವ್ಡಾ ರೆಡಿ.
ಪಿಕ್‌ನಿಕ್ ಹೋಗುವಾಗ, ಸಂಜೆ ಟೀ ಟೈಮಲ್ಲಿ ಥಟ್ ಅಂತಾ ಸ್ನ್ಯಾಕ್ಸ್ ರೆಡಿ ಮಾಡ್ಬೇಕು ಅನ್ನಿಸಿದಾಗ, ಅಥವಾ ಬೆಳಿಗ್ಗೆ ಉಪ್ಪಿಟ್ಟು- ಅವಲಕ್ಕಿ ಜೊತೆ ಕರುಂ ಕುರುಂ ತಿಂಡಿ ಬೇಕು ಅನ್ನಿಸಿದಾಗೆಲ್ಲ ಈ ಚಿವ್ಡಾ ಮಾಡಿ ಸವಿಯಿರಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ