ನವದೆಹಲಿ : ಭಾರತದೊಂದಿಗಿನ ಸಂಘರ್ಷದಲ್ಲಿ ಸೋತು ಸುಣ್ಣವಾಗಿರುವ ಪಾಕಿಸ್ತಾನದಲ್ಲಿ ಎಲ್ಲವೂ ಸರಿಯಿಲ್ಲ. ಒಂದೆಡೆ ಆಂತರಿಕ ಕಲಹ, ಪ್ರಾಂತೀಯತೆ ಹೀಗೆ ಹಲವು ಸಮಸ್ಯೆಗಳಿಂದ ಭಯೋತ್ಪಾದಕ ರಾಷ್ಟ್ರ ಬಳಲುತ್ತಿದೆ. ಈ ನಡುವೆ ಮೂರ್ಖ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್‌ನಿಗೆ ಫೀಲ್ಡ್ ಮಾರ್ಷಲ್ ಬಡ್ತಿ ನೀಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದಕ್ಕೆ ಖುದ್ದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಮರ್ಥನೆ ನೀಡಿ, ನನ್ನ ವಿವೇಚನೆಯಿಂದ ಮುನೀರ್‌ಗೆ ಪ್ರಮೋಷನ್ ನೀಡಿದ್ದೆನೆ ಎಂದು ಹೇಳಿದ್ದಾರೆ.
ಆದರೆ ಹಾಲಿ ಪ್ರಧಾನಿ ನಿರ್ಧಾರಕ್ಕೆ ಮಾಜಿ ಪಿಎಂ ಜೈಲಿನಿಂದಲೇ ಬೆಂಕಿಯುಗುಳಿದ್ದಾರೆ. ಇನ್ನೂ ಪಾಕಿಸ್ತಾನ ಈಗ ಕಾಡಿನ ಕಾನೂನಿನ ನಿಯಂತ್ರಣದಲ್ಲಿದೆ, ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಫೀಲ್ಡ್ ಮಾರ್ಷಲ್ ಬದಲಿಗೆ ರಾಜ ಎಂಬ ಬಿರುದನ್ನು ನೀಡಬೇಕಾಗಿತ್ತು ಎಂದು ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕಿಡಿ ಕಾರಿದ್ದಾರೆ.
ಪಾಕ್‌ನಲ್ಲಿ ಕಾಡಿನ ಆಳ್ವಿಕೆ ಜಾರಿಯಲ್ಲಿದೆ..
ಭಾರತದೊಂದಿಗಿನ ಇತ್ತೀಚಿನ ಸಂಘರ್ಷದಲ್ಲಿ ಅವರ ಪಾತ್ರಕ್ಕಾಗಿ ಜನರಲ್ ಮುನೀರ್ ಅವರನ್ನು ಮಂಗಳವಾರ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡಲಾಯಿತು, ದೇಶದ ಇತಿಹಾಸದಲ್ಲಿ ಈ ಹುದ್ದೆಗೆ ಬಡ್ತಿ ಪಡೆದ ಎರಡನೇ ಉನ್ನತ ಮಿಲಿಟರಿ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮಾಶಾ ಅಲ್ಲಾಹ್, ಜನರಲ್ ಅಸಿಮ್ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಆಗಿ ನೇಮಿಸಲಾಗಿದೆ. ನಿಜ ಹೇಳಬೇಕೆಂದರೆ, ಅವರಿಗೆ ರಾಜ ಎಂಬ ಬಿರುದನ್ನು ನೀಡುವುದು ಹೆಚ್ಚು ಸೂಕ್ತವಾಗಿತ್ತು ಏಕೆಂದರೆ ಪ್ರಸ್ತುತ ದೇಶವನ್ನು ಕಾಡಿನ ಕಾನೂನು ಆಳುತ್ತಿದೆ, ಅಲ್ಲದೆ ಕಾಡಿನಲ್ಲಿ ಒಬ್ಬನೇ ರಾಜನಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದುವರೆಗೆ ನನಗಾಗಿ ಏನನ್ನೂ ಬೇಡಿಕೊಂಡಿಲ್ಲ, ಈಗಲೂ ಕೇಳಲ್ಲ..
ನಮ್ಮ ನಡುವೆ ಯಾವುದೇ ಒಪ್ಪಂದ ನಡೆದಿಲ್ಲ, ಯಾವುದೇ ಮಾತುಕತೆ ನಡೆದಿಲ್ಲ. ಇವು ಆಧಾರರಹಿತ ಸುಳ್ಳುಗಳಾಗಿವೆ. ಆದರೂ ಪಾಕಿಸ್ತಾನದ ಹಿತಾಸಕ್ತಿಗಳು ಮತ್ತು ಭವಿಷ್ಯದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಸೇನೆಯು ತಮ್ಮೊಂದಿಗೆ ಚರ್ಚಿಸಬೇಕೆಂದು. ದೇಶವು ಹೊರಗಿನ ಬೆದರಿಕೆಗಳು, ಭಯೋತ್ಪಾದನೆಯ ಉಲ್ಬಣ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಾವು ಒಂದಾಗಬೇಕು. ನಾನು ಇದುವರೆಗೆ ನನಗಾಗಿ ಏನನ್ನೂ ಬೇಡಿಕೊಂಡಿಲ್ಲ, ಈಗಲೂ ಬೇಡಿಕೊಳ್ಳುವುದಿಲ್ಲ ಎಂದು ಅಂಗಲಾಚಿಕೊಂಡಿದ್ದಾರೆ.
ನೀವು ನ್ಯಾಯದ ಸಮಾಧಿ ಮಾಡುತ್ತಿದ್ದೀರಿ
ಭಾರತದಿಂದ ಮತ್ತೊಂದು ದಾಳಿ ನಡೆಯುವ ಸಾಧ್ಯತೆಯ ಬಗ್ಗೆ ಖಾನ್ ಶೆಹಬಾಜ್ ಷರೀಫ್ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇನೆ. ಅಂತಹ ಯಾವುದೇ ಘಟನೆಗೆ ಸಿದ್ಧರಾಗಿರಬೇಕು. ಪಾಕಿಸ್ತಾನವು ದುರ್ಬಲರ ವಿರುದ್ಧ ಮಾತ್ರ ಕಾನೂನು ಜಾರಿಗೊಳಿಸುವ ದೇಶವಾಗಿ ಮಾರ್ಪಟ್ಟಿದೆ, ಆದರೆ ಬಲಿಷ್ಠರು ಅದಕ್ಕಿಂತ ಮೇಲಿರುತ್ತಾರೆ. ಈಗ ನಡೆಯುತ್ತಿರುವ ಪರಿಸ್ಥಿತಿಯು ಪ್ರಜಾಪ್ರಭುತ್ವದ ಶಕ್ತಿಯನ್ನು ಪುಡಿಪುಡಿ ಮಾಡಲಾಗುತ್ತಿದೆ. ಕಳ್ಳ ದೊಡ್ಡವನಾದಷ್ಟು ಅವರು ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ ಎಂಬ ಸಂದೇಶ ನೀಡಿದ್ದೀರಿ, ನೀವು ನ್ಯಾಯದ ಸಮಾಧಿ ಮಾಡುತ್ತಿದ್ದೀರಿ ಎಂದು ಇಮ್ರಾನ್ ಖಾನ್ ಟೀಕಿಸಿದ್ದಾರೆ.
ಆರೋಪಿಯಾಗಿದ್ದವನು ಪ್ರಧಾನಿಯಾಗಿದ್ದಾನೆ..
ಉದ್ಯೋಗಿಗಳ ಹೆಸರಿನಲ್ಲಿ ನೋಂದಾಯಿಸಲಾದ ಐದು ಅಪಾರ್ಟ್‌ಮೆಂಟ್‌ಗಳಿಗೆ ಸಂಬಂಧಿಸಿದಂತೆ ಅಧ್ಯಕ್ಷ ಆಸಿಫ್ ಜರ್ದಾರಿ ಅವರ ಸಹೋದರಿಯ ವಿರುದ್ಧ ಎನ್‌ಎಬಿದಲ್ಲಿ ಇನ್ನೂ ಪ್ರಕರಣ ಬಾಕಿ ಇದೆ, ಆದರೆ ಅವರು ವಿದೇಶದಲ್ಲಿದ್ದಾರೆ. ಅಲ್ಲದೆ ಯಾರೂ ಅವರನ್ನು ಪ್ರಶ್ನಿಸುವ ಧೈರ್ಯ ಮಾಡುತ್ತಿಲ್ಲ. ಶೆಹಬಾಜ್ ಷರೀಫ್ ಪಿಕೆಆರ್ 22 ಬಿಲಿಯನ್ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿದ್ದರೂ, ಅವರನ್ನು ಪ್ರಧಾನಿಯನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ನ್ಯಾಯಾಲಯದ ಕಾನೂನು ಉಲ್ಲಂಘನೆಯಾಗುತ್ತಿದೆ..
ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನದ ನೈತಿಕ ಮತ್ತು ಸಾಂವಿಧಾನಿಕ ಚೌಕಟ್ಟನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ. ತೋಷಖಾನಾದ -2ನೇ ಪ್ರಕರಣದಲ್ಲಿ ಒಂದು ಹಾಸ್ಯಾಸ್ಪದ ವಿಚಾರಣೆಯನ್ನು ಪುನರಾರಂಭಿಸಲಾಗಿದೆ. ಜೈಲಿನಲ್ಲಿರುವಂತೆಯೇ, ನ್ಯಾಯಾಲಯದ ವಿಚಾರಣೆಗಳನ್ನು ಒಬ್ಬ ಕರ್ನಲ್‌ನ ಇಚ್ಛೆಯಿಂದ ನಡೆಸಲಾಗುತ್ತಿದೆ. ನನ್ನ ಸಹೋದರಿಯರು ಮತ್ತು ವಕೀಲರನ್ನು ನ್ಯಾಯಾಲಯಕ್ಕೆ ಬರದಂತೆ ತಡೆಯಲಾಗುತ್ತಿದೆ; ನನ್ನ ಸಹಚರರಿಗೆ ನನ್ನನ್ನು ಭೇಟಿಯಾಗಲು ಅವಕಾಶವಿಲ್ಲ; ತಿಂಗಳುಗಟ್ಟಲೆ ನನ್ನ ಮಕ್ಕಳನ್ನು ಭೇಟಿಯಾಗಲು ಬಿಟ್ಟಿಲ್ಲ. ನನ್ನ ಪುಸ್ತಕಗಳನ್ನು ಸಹ ತಂದು ಕೊಟ್ಟಿಲ್ಲ, ಅಲ್ಲದೆ ನನ್ನ ವೈದ್ಯರನ್ನು ಸಂಪರ್ಕಿಸಲು ನನಗೆ ಅವಕಾಶ ನಿರಾಕರಿಸಲಾಗಿದೆ. ಇದು ನ್ಯಾಯಾಲಯದ ಆದೇಶಗಳು ಮತ್ತು ಕಾನೂನುಗಳ ನಿರಂತರ ಉಲ್ಲಂಘನೆಯಾಗಿದೆ ಎಂದು ಪಾಕ್ ಸರ್ಕಾರದ ವಿರುದ್ಧ ಖಾನ್ ಕಿಡಿಕಾರಿದ್ದಾರೆ.
ಅಮಾಯಕ ನಾಗರಿಕರನ್ನು ಕೊಲ್ಲುವುದರಿಂದ ಭಯೋತ್ಪಾದನೆ ಕಡಿಮೆಯಾಗಲ್ಲ..
ಇನ್ನೂ ಖೈಬರ್ ಪಂಖ್ತುಖ್ವಾದ ಕೆಲವು ಭಾಗಗಳಲ್ಲಿ ಡ್ರೋನ್ ದಾಳಿಯ ಬಗ್ಗೆ ತನಗೆ ಮಾಹಿತಿ ಬಂದಿದ್ದು, ಫೆಡರಲ್ ಸರ್ಕಾರಕ್ಕೆ ಔಪಚಾರಿಕವಾಗಿ ಪ್ರತಿಭಟನೆ ನಡೆಸುವಂತೆ ಮತ್ತು ಈ ಡ್ರೋನ್ ದಾಳಿಗಳನ್ನು ನಿಲ್ಲಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಪ್ರಾಂತೀಯ ಸರ್ಕಾರಕ್ಕೆ ಸೂಚನೆ ನೀಡಿದ್ದೇನೆ . ಡ್ರೋನ್ ದಾಳಿಯಲ್ಲಿ ಅಮಾಯಕ ನಾಗರಿಕರನ್ನು ಕೊಲ್ಲುವುದರಿಂದ ಭಯೋತ್ಪಾದನೆ ಕಡಿಮೆಯಾಗುವುದಿಲ್ಲ. ಏಕೆಂದರೆ ಅದು ಮತ್ತಷ್ಟು ಉಗ್ರವಾದವನ್ನು ಹೆಚ್ಚಿಸುತ್ತದೆ. ವರ್ಷಗಳ ಹೋರಾಟದ ನಂತರ, ಪಾಕಿಸ್ತಾನದಲ್ಲಿ ಅಮೆರಿಕದ ಡ್ರೋನ್ ಕಾರ್ಯಾಚರಣೆಗಳನ್ನು ನಿಲ್ಲಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನೀವು ಭಯೋತ್ಪಾದನೆಯ ವಿರುದ್ಧ ಎಂದು ಹೇಳಿಕೊಂಡರೆ, ನಿಮ್ಮ ಸ್ವಂತ ಜನರ ಮನೆಗಳ ಮೇಲೆ ಬಾಂಬ್‌ಗಳನ್ನು ಬೀಳಿಸಬೇಡಿ ಎಂದು ಇಮ್ರಾನ್ ಖಾನ್ ಶೆಹಬಾಜ್ ಷರೀಫ್ ಸರ್ಕಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗದುಕೊಂಡಿದ್ದಾರೆ.