ಹಾಸನ ಜಿಲ್ಲೆಯ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನ ಇನ್ನೊಂದು ದಿನವಾದ್ರೆ ಕೊನೆಗೊಳ್ಳಲಿದೆ. ದೇವಿ ದರ್ಶನ ಸೇರಿದಂತೆ ಭಕ್ತರ ಸೌಲಭ್ಯ ಸೌಕರ್ಯಗಳು ಎಲ್ಲವು ಸುಸೂತ್ರವಾಗಿ ನೆರವೇರಿದೆ. ಅಲ್ಲದೆ 20 ಕೋಟಿ ಕಾಣಿಕೆ ಹರಿದು ಬಂದಿದೆ. ಹಾಸನಾಂಬೆಯ ದಾಖಲೆ ಬ್ರೇಕ್ ಆಗಿದೆ.
ಹಿಗಿರೋವಾಗ ಹಾಸನಾಂಬೆ ದೇವಾಲಯದಲ್ಲಿ ಭಕ್ತಿಯೊಂದಿಗೆ ಮಾನವೀಯ ಘಟನೆ ಕಂಡುಬಂದಿದೆ. ದರ್ಶನಕ್ಕಾಗಿ ಆಗಮಿಸಿದ್ದ ಮೈಸೂರಿನ ಮಹಿಳೆಯೊಬ್ಬರು ತಮ್ಮ ಮಾಂಗಲ್ಯ ಸರವನ್ನು ದೇವಾಲಯ ಆವರಣದಲ್ಲಿ ಕಳೆದುಕೊಂಡಿದ್ದರು.
ದೇವಾಲಯದ ಆವರಣದಲ್ಲಿ ಚಿನ್ನದ ಸರವೊಂದನ್ನು ಸ್ಕೌಟ್ ಮತ್ತು ಗೈಡ್ ಮಕ್ಕಳು ಹಾಗೂ ಒಬ್ಬ ಪ್ರಾಮಾಣಿಕ ಭಕ್ತರು ಪತ್ತೆಹಚ್ಚಿದ್ದಾರೆ. ತಕ್ಷಣವೇ ದೇವಾಲಯದ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಬಳಿಕ ದೇವಾಲಯದ ಆಡಳಿತ ಮಂಡಳಿಯು ಈ ಕುರಿತಂತೆ ಮೈಕ್ ಮೂಲಕ ಘೋಷಣೆ ಮಾಡಿದೆ.
ಘೋಷಣೆಯನ್ನು ಕೇಳಿ ಬಂದ ಮಹಿಳೆ, ಕಳೆದುಹೋದ ಮಾಂಗಲ್ಯ ಸರದ ನಿಖರವಾದ ಲಕ್ಷಣಗಳನ್ನು ವಿವರಿಸಿದ್ದಾರೆ. ಅವರ ವಿವರಗಳು ಸರಿಹೊಂದುತ್ತದೆ ಎಂಬುದನ್ನು ದೃಢಪಡಿಸಿದ ದೇವಾಲಯದ ಸಿಬ್ಬಂದಿ, ಮಾಂಗಲ್ಯ ಸರವನ್ನು ಅವರಿಗೆ ಸುರಕ್ಷಿತವಾಗಿ ಹಿಂತಿರುಗಿಸಿದ್ದಾರೆ.
ಈ ಸಂದರ್ಭದಲ್ಲಿ ದೇವಾಲಯ ಆಡಳಿತ ಮಂಡಳಿ ಮತ್ತು ಭಕ್ತರು, ಸರವನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿದ ಸ್ಕೌಟ್ ಮತ್ತು ಭಕ್ತರ ನಡೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸರವನ್ನು ಪಡೆದ ಮಹಿಳೆ, ದೇವಾಲಯದ ಪರಿಸರದಲ್ಲಿ ಎಚ್ಚರಿಕೆಯಿಂದ ಇರುವಂತೆ ಇತರ ಭಕ್ತರಿಗೆ ಸಲಹೆ ನೀಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ

