Saturday, July 12, 2025

Latest Posts

ಪಾಕ್‌ಗೆ ಪೀಕಲಾಟ, ಭಾರತದ ಏಟಿಗೆ ವಿಲ ವಿಲ : ಐಎಮ್‌ಎಫ್‌ನಿಂದ ಭಯೋತ್ಪಾದಕ ರಾಷ್ಟ್ರಕ್ಕೆ ಬಿಗ್‌ ಶಾಕ್‌..!

- Advertisement -

ನವದೆಹಲಿ : ಭಾರತದ ಜೊತೆಗಿನ ಸಂಘರ್ಷದಲ್ಲಿ ಮಣ್ಣು ಮುಕ್ಕಿದರೂ ಮುಖವೇನು ಮಣ್ಣಾಗಲಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಪಾಕಿಸ್ತಾನಕ್ಕೆ ವಿಶ್ವ ಹಣಕಾಸು ನಿಧಿ ಐಎಂಎಫ್​ ದೊಡ್ಡ ಆಘಾತ ನೀಡಿದೆ. ಪಾಕಿಸ್ತಾನಕ್ಕೆ ಮಂಜೂರಾಗಿರುವ ಸಾಲದ ಕಂತು ಬಿಡುಗಡೆ ಮಾಡಬೇಕಾದರೆ, ಇದೀಗ ವಿಶ್ವ ಹಣಕಾಸು ನಿಧಿಯ 11 ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ಷರತ್ತು ವಿಧಿಸಿದೆ. ಹೀಗಾಗಿ ಸಾಲ ಪಡೆದು ಉಗ್ರರನ್ನು ಪೋಷಿಸುತ್ತಿದ್ದ ರಣಹೇಡಿ ರಾಷ್ಟ್ರಕ್ಕೆ ಐಎಂಎಫ್‌ ಬಿಗ್‌ ಶಾಕ್‌ ನೀಡಿದೆ

ಸಾಲ ನೀಡಲು ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು..

ಮೊದಲೇ ತನ್ನಲ್ಲಿಯ ಆಂತರಿಕ ಸಂಘರ್ಷ, ಬಡತನ ಹಾಗೂ ಉಗ್ರವಾದದ ಸುಳಿಯಿಂದ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ವಿಶ್ವ ಹಣಕಾಸು ನಿಧಿ ಬಿಡುಗಡೆ ಮಾಡುವ ಹಣವನ್ನು ಅದು ಭಯೋತ್ಪಾದನೆಗೆ ಬಳಸುತ್ತಿದೆ ಎಂದು ಭಾರತ ಆರೋಪಿಸಿ, ಸಾಲ ಮಂಜೂರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೂ ಸಹ ಐಎಂಎಫ್​ 19 ಸಾವಿರ ಕೋಟಿ ರೂಪಾಯಿ ಸಾಲ ನೀಡಲು ಮುಂದಾಗಿತ್ತು.

ಭಾರತದ ಮನವಿ ಪರಿಗಣಿಸಿದ ಐಎಂಎಫ್..

ಇನ್ನೂ ಪ್ರಮುಖವಾಗಿ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತವು ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿತ್ತು. ತನ್ನದೇ ಆದ ವಿಶೇಷ ಆಪರೇಷನ್​ ಸಿಂಧೂರ್‌ ಹೆಸರಿನಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿ ಉಗ್ರರ ಅಡಗುತಾಣಗಳು, ವಾಯು ನೆಲೆಗಳನ್ನು ಗುರಿಯಾಗಿಸಿ ಏರ್‌ಸ್ಟ್ರೈಕ್ ನಡೆಸಿ ಧ್ವಂಸ ಮಾಡಿತ್ತು. ಇದರಿಂದ ಉಭಯ ರಾಷ್ಟ್ರಗಳ ಮಧ್ಯೆ ಉದ್ವಿಗ್ನತೆ ಹೆಚ್ಚಿದೆ. ಇದು ತಾನು ಕೊಡುವ ಸಾಲದ ಮೇಲೆ ಪರಿಣಾಮ ಬೀರಲಿದೆ ಎಂದು ಐಎಂಎಫ್​ಗೆ ಈಗ ಮನವರಿಕೆಯಾಗಿದೆ. ಹೀಗಾಗಿ ಭಾರತದ ಮನವಿಯನ್ನು ಪರಿಗಣಿಸಿ ಪಾಕಿಸ್ತಾನಕ್ಕೆ ಕಠಿಣ ಷರತ್ತು ವಿಧಿಸಿದೆ.

50 ಷರತ್ತುಗಳಿಂದ ಪಾಕ್‌ ವಿಲ ವಿಲ..

ಭಾರತದೊಂದಿಗಿನ ಉದ್ವಿಗ್ನತೆಯು ದೇಶದ ಹಣಕಾಸು ವ್ಯವಸ್ಥೆ, ಆಂತರಿಕ ಮತ್ತು ಬಾಹ್ಯ ಸುಧಾರಣಾ ಯೋಜನೆಗಳಿಗೆ ಅಪಾಯ ತರಬಹುದು ಎಂದು ಅಂದಾಜಿಸಿರುವ ವಿಶ್ವ ಹಣಕಾಸು ನಿಧಿ, ತನ್ನಿಂದ ಸಾಲ ಬೇಕಾದಲ್ಲಿ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಹೊಸ 11 ಷರತ್ತುಗಳನ್ನು ವಿಧಿಸಿದೆ. ಈ ಮೂಲಕ ಹಣಕ್ಕಾಗಿ ಅಂಗಲಾಚುತ್ತಿರುವ ಪಾಕಿಸ್ತಾನಕ್ಕೆ ಮೊದಲ 39 ಷರತ್ತುಗಳನ್ನು ಸೇರಿ ಒಟ್ಟು 50 ಮಾನದಂಡಗಳನ್ನು ವಿಧಿಸುವ ಮೂಲಕ ಭಯೋತ್ಪಾದಕ ರಾಷ್ಟ್ರಕ್ಕೆ ನೀಡಿರುವ ಸಾಲದ ಮೇಲೆ ನಿಗಾವಹಿಸುವ ತೀರ್ಮಾನಕ್ಕೆ ಐಎಂಎಫ್‌ ಬಂದಿರುವುದು ಭಾರತದ ಮನವಿಗೆ ಮತ್ತಷ್ಟು ಮನ್ನಣೆ ದೊರಕಿದಂತಾಗಿದೆ.

ಪಾಕ್‌ಗೆ ಐಎಂಎಫ್‌ನ ಆಘಾತ ಏನು..?

ಇನ್ನೂ ಉಗ್ರ ಪೋಷಕ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಹಣಕಾಸು ನಿಧಿಯು ವಿಧಿಸಿರುವ ಷರತ್ತುಗಳನ್ನು ನಾವು ನೋಡಿದಾಗ, ಪಾಕಿಸ್ತಾನ ಉಗ್ರವಾದವನ್ನು ಉತ್ತೇಜಿಸಲು ಒದ್ದಾಡುವ ಸ್ಥಿತಿಯನ್ನು ತಲುಪುವ ಹಾಗೆ ಮಾಡಿದೆ. ಅದರಲ್ಲಿ ಮುಖ್ಯವಾಗಿ ಐಎಂಎಫ್‌ ಬಿಡುಗಡೆ ಮಾಡಲಿರುವ 17.6 ಟ್ರಿಲಿಯನ್​​ ಡಾಲರ್​ ಹಣದ ಕಂತಿಗೆ ಸಂಸತ್ತಿನಿಂದ ಅನುಮೋದನೆ ಪಡೆದುಕೊಳ್ಳಬೇಕು. ಮುಂದಿನ ಜುಲೈ 1ರೊಳಗೆ ವಾರ್ಷಿಕ ವಿದ್ಯುತ್​ ದರ ಪರಿಷ್ಕರಣೆಯ ಅಧಿಸೂಚನೆ ಹೊರಡಿಸಬೇಕು. ಮುಂದಿನ ಜೂನ್ ತಿಂಗಳ​ ಅಂತ್ಯದ ವೇಳೆಗೆ ಸಾಲ ಸೇವಾ ಸರ್​​ ಚಾರ್ಜ್​ನ ಪ್ರತಿ ಯೂನಿಟ್​​ ಗೆ 3.21 ರೂಪಾಯಿ ಮಿತಿಗೆ ವಿನಾಯಿತಿ ನೀಡಬೇಕು ಎಂದು ಷರತ್ತುಗಳನ್ನು ಹೇರಿದೆ.

ಅಲ್ಲದೆ ಪ್ರಾಂತಗಳ ವ್ಯಾಪ್ತಿಯಲ್ಲಿ ಕೃಷಿ ಆದಾಯ ತೆರಿಗೆ ಸುಧಾರಣೆ, ಆಡಳಿತದಲ್ಲಿ ಬದಲಾವಣೆ ತರಬೇಕು. ಮುಂಬರುವ 2026ರ ವೇಳೆಗೆ ಅರ್ಧ ವಾರ್ಷಿಕ ಅನಿಲ ದರ ಹೊಂದಿಸಬೇಕು. ವಿದ್ಯುತ್​ ಸ್ಥಾವರಗಳ ಮೇಲೆ ವಿಧಿಸುವ ಶುಲ್ಕಕ್ಕೆ ಈ ವರ್ಷದ ಅಂತ್ಯದೊಳಗೆ ಸುಗ್ರೀವಾಜ್ಞೆ ಹೊರಡಿಸಬೇಕು. ವಿಶೇಷ ತಂತ್ರಜ್ಞಾನ ವಲಯಗಳ ಪ್ರೋತ್ಸಾಹಕ್ಕಾಗಿ ಹಂತ- ಹಂತದ ಯೋಜನೆ ಜಾರಿ ಮಾಡಬೇಕು. ಬಳಸಿದ ಕಾರುಗಳ ಆಮದಿನ ಮೇಲಿನ ನಿರ್ಬಂಧ ತೆಗೆದು ಹಾಕಬೇಕು. ಹಣಕಾಸು ವಲಯದ ಉತ್ತೇಜನಕ್ಕೆ ದೀರ್ಘಕಾಲೀನ ಯೋಜನೆಗಳನ್ನು ಸಿದ್ದಪಡಿಸಬೇಕು. ಅಭಿವೃದ್ಧಿ ವೆಚ್ಚದಲ್ಲಿ ಬದ್ಧತೆ ಕಾಪಾಡಿಕೊಳ್ಳಬೇಕು. 6 ಟ್ರಿಲಿಯನ್​ ಬಜೆಟ್​ನಲ್ಲಿ 1.07 ಟ್ರಿಲಿಯನ್​ ಹಣವನ್ನು ಅಭಿವೃದ್ಧಿ ವೆಚ್ಚಕ್ಕೆಂದೇ ಮೀಸಲಿಡಬೇಕು ಎಂಬ ಮಾನದಂಡಗಳನ್ನು ಐಎಂಎಫ್‌ ವಿಧಿಸಿದ್ದು, ಇವುಗಳಿಂದ ಅಕ್ಷರಶಃ ಪಾಕಿಸ್ತಾನ ಕಂಗಾಲಾಗಿ ಹೋಗಿದೆ.

ಭಾರತದ ಮನವಿ ಏನಾಗಿತ್ತು..?

ಇನ್ನೂ ಪ್ರಮುಖವಾಗಿ ಪಾಕಿಸ್ತಾನಕ್ಕೆ ಐಎಂಎಫ್‌ ನೀಡಿರುವ ಸಾಲದ ವಿಚಾರದಲ್ಲಿ ಭಾರತ ತನ್ನ ಕಳವಳ ವ್ಯಕ್ತಪಡಿಸಿತ್ತು. ಅದರಲ್ಲಿಯೂ ಸಾಲ ತಂದು ಭಯೋತ್ಪಾದಕರನ್ನು ಪೋಷಿಸುತ್ತಿರುವ ಪಾಕಿಸ್ತಾನದ ಮೇಲೆ ಅಂತರಾಷ್ಟ್ರೀಯ ಸಮುದಾಯ ಗಮನ ಹರಿಸಬೇಕು. ಪಾಕ್‌ಗೆ ನೀಡುವ ಸಾಲ ಭಯೋತ್ಪಾದನೆಗೆ ಉತ್ತೇಜನ ನೀಡಿದಂತಗುತ್ತದೆ ಎಂದು ಕಳೆದ ವಾರವಷ್ಟೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ ಭೇಟಿ ನೀಡಿದ್ದ ವೇಳೆ ಎಚ್ಚರಿಸಿದ್ದರು. ಅದರಲ್ಲೂ ಉಗ್ರ ಮಸೂದ್‌ ಅಜರ್‌ ಕುಟುಂಬಕ್ಕೆ ಪಾಕ್‌ 14 ಕೋಟಿ ರೂಪಾಯಿ ಪರಿಹಾರವನ್ನು ನೀಡಿರುವುದನ್ನು ಅವರು ಖಂಡಿಸಿದ್ದರು. ಹೀಗಾಗಿ ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಸಿಂಗ್‌ ಮನವಿ ಮಾಡಿದ್ದರು.

- Advertisement -

Latest Posts

Don't Miss