Tuesday, November 18, 2025

Latest Posts

ಟನ್ ಗಟ್ಟಲೆ ದಾಖಲೆಗಳಿವೆ. ನನ್ನನ್ನ ಕೆಣಕಬೇಡಿ : ಬಂಡೆ ವಿರುದ್ಧ ತೊಡೆ ತಟ್ಟಿದ ದಳಪತಿ

- Advertisement -

Political News: ಬಿಡದಿಯ ಕೇತಗಾನಹಳ್ಳಿಯ ಜಮೀನು ಒತ್ತುವರಿ ಆರೋಪದ ವಿಚಾರದಲ್ಲಿ ಇಷ್ಟು ದಿನ ಮೌನವಾಗಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇದೀಗ ದಿಢೀರ್‌ ಆಗಿ ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬ್ಬ ಮಾಜಿ ಪ್ರಧಾನಿಯ ಮಗನಾಗಿ ಜಮೀನು ಒತ್ತುವರಿ ಮಾಡ್ತೀನಾ..? ರಾಜ್ಯದ ಕಾಂಗ್ರೆಸ್‌ ಸರ್ಕಾರದಲ್ಲಿ ಅಕ್ರಮ, ದರೋಡೆ ಮಾಡುವ ಕೆಲಸ ನಡೆಯುತ್ತಿವೆ. ಇಂತವರ ಬಗ್ಗೆ ಮಾತನಾಡುವುದು ಕೂಡ ನನಗೆ ನಿರಾಸೆ ತರಿಸುತ್ತಿದೆ. ಸದನದಲ್ಲಿ ಹನಿಟ್ರ್ಯಾಪ್‌, ಕೊಲೆ ಸುಪಾರಿ ಬಗ್ಗೆ ಚರ್ಚೆಯಾಗುತ್ತದೆ ಅಂದ್ರೆ ಇವರೆಲ್ಲ ಎಂತಹ ಸ್ಥಿತಿಗೆ ತಲುಪಿದ್ದಾರೆ. ಈ ಸರ್ಕಾರಕ್ಕೆ ಚಾಲೇಂಜ್ ಹಾಕುವುದಕ್ಕೆ ನಾನು ಸಿದ್ಧವಾಗಿದ್ದೇನೆ. ಇಂದಿನಿಂದಲೇ ನನ್ನ ಯುದ್ಧ ಪ್ರಾರಂಭ ಎಂದು ಗುಡುಗಿದ್ದಾರೆ.

ಇನ್ನೂ ಜಮೀನು ವಿಚಾರದಲ್ಲಿ ನೋಟಿಸ್‌ ಕೊಟ್ಟಿರುವ ಕೆಳಹಂತದ ಅಧಿಕಾರಿಗಳನ್ನು ನಾನು ಪ್ರಶ್ನಿಸುವುದಿಲ್ಲ. ಇದಕ್ಕಾಗಿಯೇ ಎಸ್‌ಐಟಿ ರಚನೆ ಮಾಡಿರುವುದು ಇತಿಹಾಸದಲ್ಲೇ ಇದೇ ಮೊದಲು. ನಾನು ಕೇತಗಾನಹಳ್ಳಿಯ ಜಮೀನನ್ನು 40 ವರ್ಷಗಳ ಹಿಂದೆ ಖರೀದಿ ಮಾಡಿದ್ದೇನೆ. ಆದರೆ ಈಗ ಅದೇ ಜಮೀನಿನ ಮೇಲೆ ಇವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಇವರು ಸರ್ಕಾರ ನಡೆಸುತ್ತಿದ್ದಾರೆ. ಅದು ಯಾರೇ ಆಗಲಿ ಸಿದ್ದರಾಮಯ್ಯ ಅಥವಾ ಡಿಕೆ ಶಿವಕುಮಾರ್‌ ಇರಲಿ ಅವರ ವಿರುದ್ಧ ಇಂದಿನಿಂದಲೇ ನನ್ನ ವಾರ್‌ ಪ್ರಾರಂಭಿಸುತ್ತೇನೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ‌ ವಿಧಾನಸೌಧದ ಮೂರನೇ ಮಹಡಿಯಲ್ಲಿ ಘೋರಿ ಮೊಹಮ್ಮದ್, ಘಜ್ನಿ ಮೊಹಮ್ಮದ್‌ ಹಾಗೂ ಮಲ್ಲಿಕಾ ಕಪೂರ್‌ ಕುಳಿತು ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ. ಕುಮಾರಸ್ವಾಮಿ ಕೇಂದ್ರಕ್ಕೆ ಹೋಗಿದ್ದಾರೆ, ಅವರು ರಾಜ್ಯಕ್ಕೆ ಬರಬೇಕು ಎಂಬ ಜನರ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ ಎಂದು ಸರ್ಕಾರವನ್ನು ತರಾಟೆಗೆ ತೆಗದುಕೊಂಡಿದ್ದಾರೆ.

ಬೆಡ್‌ ರೂಂಗೂ ಟ್ಯಾಕ್ಸ್..!

ಈ ಬೆಂಗಳೂರಿನಲ್ಲಿ ಒಂದು ಟನ್ ಕಸ ಸಾಗಾಣಿಕೆಗೆ 6 ಸಾವಿರ ರೂಪಾಯಿ ವೆಚ್ಚದಂತೆ ಟೆಂಡರ್ ಕರೆಯಲಾಗಿತ್ತು. ನಾನು ಇದನ್ನು ಪ್ರಶ್ನಿಸಿದಾಗ ಅಧಿಕಾರಿಗಳು ತಡಬಡಾಯಿಸಿದರು. ಟೆಂಡ‌ರ್ ದರವನ್ನು 3 ಸಾವಿರ ರೂಪಾಯಿಗೆ ಇಳಿಸಿದ್ದಾರೆ. ಹಿಂದೆ ನಾನು ಕಸತೆಗೆಯುವ ಗುತ್ತಿಗೆ ಮಾಡಿದ್ದೆ. ಈಗ ರಾಜ್ಯ ಸರ್ಕಾರದ ಕಸವನ್ನು ತೆಗೆಯುವ ಗುತ್ತಿಗೆ ಪಡೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಗರಣಗಳನ್ನು ಬಯಲಿಗೆ ತರುತ್ತೇನೆ. ತಮಿಳುನಾಡಿನ ಗುತ್ತಿಗೆದಾರರಿಗೆ ಪ್ಯಾಕೇಜ್ ಲೆಕ್ಕದಲ್ಲಿ ಗುತ್ತಿಗೆ ನೀಡಿ ಕೋಟ್ಯಂತರ ರೂಪಾಯಿ ಲೂಟಿ ಹೊಡೆದು ಇಲ್ಲಿ ವಿವಿಧ ಸಮಾಜಗಳಿಗೆ ಗುತ್ತಿಗೆ ಮೀಸಲಾತಿ ನೀಡುತ್ತೇವೆ ಎಂದು ಹೇಳಿಕೊಳ್ಳುತ್ತಾರೆ ಎಂದು ಸರ್ಕಾರದ ವಿರುದ್ಧ ಲೇವಡಿ ಮಾಡಿದ್ದಾರೆ.

ಅಲ್ಲದೆ ಈ ಕಸ ವಿಲೇವಾರಿಯಲ್ಲಿ ದೊಡ್ಡ ಕರ್ಮಕಾಂಡವಿದೆ. ಭಾರೀ ಪ್ರಮಾಣದಲ್ಲಿ ಇದು ನಡೆದಿದ್ದು, ಇವರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ರಾಜ್ಯ ಸಂಪದ್ಭರಿತವಾಗಿದ್ದು, ಇವರು ಲೂಟಿ ಮಾಡಿ ಬರಿದು ಮಾಡುತ್ತಿದ್ದಾರೆ. 2-3 ಟ್ರಿಪ್ ಸುಳ್ಳು ಲೆಕ್ಕ ಬರೆದರೆ ಸುಲಭವಾಗಿ ಮನೆ ಬಾಗಿಲಿಗೆ ನಾಲೈದು ಲಕ್ಷ ಸಂಪಾದನೆಯಾಗುತ್ತದೆ. ಅಡ್ಡ ವಸೂಲಿಯಾಗುತ್ತದೆ ಎಂದು ಆರೋಪಿಸಿದ್ದಾರೆ.

ನೀವು ಸುಮ್ಮನೇ ಇದ್ರೆ ನಿಮ್ಮ ಮನೆಯ ಬೆಡ್ ರೂಂಗೂ ರಾಜ್ಯ ಸರ್ಕಾರ ಟ್ಯಾಕ್ಸ್ ಹಾಕಲಿದೆ. ದಿನಕ್ಕೊಂದು ಸುಳ್ಳು! ತಿಂಗಳಿಗೊಂದು ದರ ಏರಿಕೆ!! ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿಯಂತೆ ಈ ಸರ್ಕಾರದ ಆಡಳಿತ ವೈಖರಿಯಾಗಿದೆ. ಹೀಗಾಗಿ ಈಗ ಕಾಂಗ್ರೆಸ್ ಕಂಪನಿ ಸರ್ಕಾರ ಕಸದ ಮೇಲೆಯೂ ಸೆಸ್ ವಿಧಿಸುತ್ತಿದೆ!! ಎಂದು ಅವರು ಕಿಡಿಕಾರಿದ್ದಾರೆ.

ಶ್ವೇತ ಪತ್ರ ಹೊರಡಿಸಲಿ..

ಇನ್ನೂ ಅಲ್ಪಸಂಖ್ಯಾತರಿಗೆ ಶೇಕಡಾ 4 ರಷ್ಟು ಮೀಸಲಾತಿ ನೀಡುವುದನ್ನು ದೊಡ್ಡದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದಾರೆ. ಆ ಸಮುದಾಯದ ಅಷ್ಟೂ ಮಂದಿ ಗುತ್ತಿಗೆ ಪಡೆದು ಉದ್ಧಾರವಾಗಿದ್ದಾರೆ ಎನ್ನುವುದನ್ನು ಶ್ವೇತಪತ್ರದ ಮೂಲಕ ಜನರ ಮುಂದೆ ಮಾಹಿತಿ ಇಡಿ ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಅಲ್ಲದೆ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಯಾವುದೇ ವಿಶ್ವಾಸದ ಕೊರತೆಯಿಲ್ಲ. ಪಕ್ಷ ಸಂಘಟನೆ ಸಲುವಾಗಿ ಬಿಜೆಪಿಯವರು ಅವರ ಪಕ್ಷಗಳಿಂದ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. ಜೆಡಿಎಸ್ ತನ್ನದೇ ಆದ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಇದರಲ್ಲಿ ಮೈತ್ರಿ ಧರ್ಮಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಬಿಬಿಎಂಪಿ ಚುನಾವಣೆಯಲ್ಲಿ ಬೆಂಗಳೂರಿನ ಜನ ನನ್ನ ಮೇಲೆ ವಿಶ್ವಾಸವಿಟ್ಟು ಈ ಬಾರಿ ಜೆಡಿಎಸ್‌ಗೆ ಅವಕಾಶ ನೀಡಬೇಕು. ನಮ್ಮ ಪಕ್ಷಕ್ಕೆ 198 ವಾರ್ಡ್‌ಗಳಲ್ಲಿ ಸ್ಪರ್ಧಿಸುವ ಕೊರತೆಯಿರಬಹುದು. ಆದರೆ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಜನ ಜೆಡಿಎಸ್ ಅನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ

ಕೆಣಕಬೇಡಿ, ಟನ್‌ ಗಟ್ಟಲೇ ದಾಖಲೆ ಇವೆ..

ಅಲ್ಲದೆ ಸಾಯಿವೆಂಕಟೇಶ್ವರ ಕಂಪನಿ ವಿಚಾರದಲ್ಲಿ‌ಕೇಸ್ ಹಾಕಿ ನಮ್ಮ ಕುಟುಂಬದ್ದು ಏನಿದೆ ಅಂತ ಹುಡುಕಿದ್ರು, ಈ ಹಿಂದೆ ಯಡಿಯೂರಪ್ಪ ಅವರದು ಏನಿದೆ ಅಂತ ಸರ್ಚ್‌ ಮಾಡಿದ್ರು, ಆದರೆ ಏನೂ ಸಿಕ್ಕಿರಲಿಲ್ಲ. ನನ್ನ ಮೇಲೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಕೇಸ್ ಹಾಕಿದ್ರು‌, ಅದು ಇವತ್ತಿಗೆ 17 ವರ್ಷ ಆಗಿದೆ. ಅದರೂ ಒಂದು ತನಿಖೆ ನಡೆಸುವುದಕ್ಕೆ ಆಗಿಲ್ಲ. ಈಗ ಸ್ಪೈಸ್ ಜೆಟ್ ಸ್ಪೀಡ್ ನಲ್ಲಿ ತನಿಖೆ ಮಾಡಿದ್ರು. ನಾನು ವೈಯುಕ್ತಿಕ ದ್ವೇಷಕ್ಕಾಗಿ ಹೋರಾಟ ಮಾಡಿಲ್ಲ. ನನ್ನ‌ ಹೆಂಡತಿ ತಮ್ಮನ ಮೇಲೆ ಕೇಸ್ ಹಾಕಿಸಿದ್ರು ಅಂತ ಡೆಪ್ಯೂಟಿ ಸಿಎಂ ಅವರು ಹೇಳಿದ್ರು. ನನ್ನ ಹತ್ತಿರ ಟನ್ ಗಟ್ಟಲೆ ದಾಖಲೆಗಳಿವೆ. ನನ್ನನ್ನ ಕೆಣಕಬೇಡಿ. ಬಳ್ಳಾರಿಗೆ ಹೋಗಿಲ್ಲ ಎಂದು ಹೇಳುವ ನೀವು ಎಷ್ಟು ಕಂಪನಿಗಳನ್ನು ಇಟ್ಕೊಂಡಿದ್ದೀರಿ..? ಐರನ್ ಮಾರಬೇಕೆಂದು ಎಷ್ಟು ಅರ್ಜಿ ಬರೆದಿದ್ರಿ..? ಎಷ್ಟು ಐರನ್ ಲೂಟಿ ಹೊಡೆದ್ರಿ..? ಈ ಅಕ್ರಮ ಗಣಿಗಾರಿಕೆ ಮಾಡಿರುವ ಬಗ್ಗೆ ನನ್ನ ಬಳಿ ಟನ್‌ ಗಟ್ಟಲೆ ದಾಖಲೆಗಳು ಇವೆ ಎನ್ನುವ ಮೂಲಕ ಹೊಸ ಬಾಂಬ್‌ ಸಿಡಿಸಿದ್ದಾರೆ. ಸರ್ಕಾರ ಅನಗತ್ಯವಾಗಿ ನನ್ನನ್ನು ಕೆಣಕುವುದು ಒಳ್ಳೆಯದಲ್ಲ ಎಂದು ದಳಪತಿ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಎಚ್ಚರಿಕೆ ನೀಡಿದ್ದಾರೆ

ಕುಮಾರಸ್ವಾಮಿಗೆ ಹೆದರುವ ಮಗನಾನಲ್ಲ

ಇನ್ನೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್‌, ಕುಮಾರಸ್ವಾಮಿ ಬಳಿ ಟನ್‌ ಅಲ್ಲಾ ಈ ಭೂಲೋಕದಲ್ಲಿ ಎಷ್ಟು ವ್ಯವಹಾರ ಇದೆಯೋ ಅದೆಲ್ಲಾ ದಾಖಲೆ ಬಿಡುಗಡೆ ಮಾಡಲಿ. ಅವರು ನನ್ನ, ನನ್ನ ಮಕ್ಕಳ ಹಾಗೂ ಕುಟುಂಬದ ಆಸ್ತಿಯ ಮಾಹಿತಿಯನ್ನು ತಮ್ಮ ಬಳಿ ತರಿಸಿ ಇಟ್ಕೊಂಡಿದ್ದಾರೆ ಎನ್ನುವುದು ನನಗೂ ಗೊತ್ತಿದೆ. ಅದನ್ನೆಲ್ಲಾ ಅವರು ಬಹಿರಂಗಗೊಳಿಸಲಿ, ನಾನೇನಾದರೂ ತಪ್ಪು ಮಾಡಿದ್ದರೆ ಯಾವುದೇ ಶಿಕ್ಷೆಗೆ ಬೇಕಾದರೂ ಸಿದ್ಧವಾಗುತ್ತೇನೆ. ಕುಮಾರಸ್ವಾಮಿ ಇಂತವರಿಗೆ ಹೆದರುವ ಮಗ ನಾನಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಕೌಂಟರ್‌ ನೀಡಿದ್ದಾರೆ.

- Advertisement -

Latest Posts

Don't Miss