ಬೆಂಗಳೂರು: ಇಂದು ಸಂಜೆ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುತ್ತೆ. ರಾಜಭವನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖಾಕಿ ಕಟ್ಟೆಚ್ಚರ ವಹಿಸಲಿದ್ದು ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆಯಿದೆ.
ರಾಜಭವನದ ಆವರಣದಲ್ಲಿ ನಡೆಯಲಿರುವ ಬಿ.ಎಸ್ ಯಡಿಯೂರಪ್ಪ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಟೈಟ್ ಸೆಕ್ಯೂರಿಟಿ ಇರಲಿದೆ. ಈ ಕುರಿತು ನಿಯೋಜಿತ ಸಿಎಂ ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಚರ್ಚೆ ನಡೆಸಿದ್ರು. ಚರ್ಚೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಇಂದು ಸಂಜೆ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಇಬ್ಬರು ಉಪ ಪೊಲೀಸ್ ಆಯುಕ್ತರು, ಇಬ್ಬರು ಟ್ರಾಫಿಕ್ ಡಿಸಿಪಿ, 20 ಇನ್ಸ್ ಪೆಕ್ಟರ್, ಸುಮಾರು 2 ಸಾವಿರ ಪೊಲೀಸ್ ಕಾನ್ಸ್ ಟೇಬಲ್ ಗಳು ಸೇರಿದಂತೆ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗುತ್ತೆ ಅಂತ ಮಾಹಿತಿ ನೀಡಿದ್ರು.
ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಮಾರು 3 ಸಾವಿರ ಪಾಸ್ ಗಳನ್ನು ವಿತರಣೆ ಮಾಡಲಾಗಲಿದ್ದು, 3 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಅಂತ ಹೇಳಿದ ಅಲೋಕ್ ಕುಮಾರ್, ಪ್ರತಿಜ್ಞಾನಿಧಿ ಕಾರ್ಯಕ್ರಮವನ್ನು ದೂರದಿಂಲೇ ಕಣ್ತುಂಬಿಕೊಳ್ಳಲು ಅಲ್ಲಲ್ಲಿ ಎಲ್ ಇಡಿ ಅಳವಡಿಸಲಾಗುತ್ತೆ ಎಂದರು. ಇನ್ನು ಪೊಲೀಸ್ ಇಲಾಖೆ ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧರಿದ್ದು ಅಗತ್ಯಬಿದ್ದರೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಿದ್ದೇವೆ ಅಂತ ಇದೇ ವೇಳೆ ಮಾಹಿತಿ ನೀಡಿದ್ರು.