Tollywood News: ಪುಷ್ಪ 2 ರಿಲೀಸ್ ಕ್ರೇಜ್ ಎಲ್ಲೆಡೆ ಜೋರಾಗಿದೆ. ಚಿತ್ರತಂಡಕ್ಕೆ ಇದು ಸಹಜವಾಗಿ ಖುಷಿಯೂ ಹೌದು. ಹಾಗೆ ಕೊಂಚ ಬೇಸರವೂ ಕೂಡ. ಬೇಸರಕ್ಕೆ ಕಾರಣ, ಪೇಯ್ಡ್ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿತ್ತು. ಈ ಸಂಬಂಧ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಇದಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಡಿ.4ರ ರಾತ್ರಿ ‘ಪುಷ್ಪ 2’ ಸಿನಿಮಾ ಪೇಯ್ಡ್ ಪ್ರೀಮಿಯರ್ ಶೋ ವೇಳೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಆಗ ನೂಕು ನುಗ್ಗಲಾಗಿತ್ತು. ಆ ವೇಳೆ ಓಡಾಡುವ ಭರದಲ್ಲಿ ಕಾಲ್ತುಳಿತ ಆಗಿತ್ತು. ಈ ಘಟನೆ ಬಗ್ಗೆ ವಿವರ ಪಡೆದ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರ ಕೇಳಿ ವಿಷಾದವಾಯ್ತು ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಕೂಡ ಈ ಸಂಬಂಧ ಪ್ರತಿಕ್ರಿಯೆ ನೀಡಿದೆ. ಕಳೆದ ರಾತ್ರಿಯ ಸ್ಕ್ರೀನಿಂಗ್ ವೇಳೆ ನಡೆದ ದುರಂತದಿಮದ ನಮಗೆ ದುಃಖವಾಗಿದೆ. ಈ ಘಟನೆಯಿಂದ ದುಃಖಿತರಾಗಿರುವ ಕುಟುಂಬಕ್ಕೆ ಶಕ್ತಿ ಕೊಡಲಿ.ಗಂಭೀರ ಸ್ಥಿತಿಯಲ್ಲಿರುವ ಚಿಕ್ಕ ಮಗು ಚಿಕಿತ್ಸೆ ಪಡೆಯುತ್ತಿದೆ. ಈ ಕಷ್ಟದ ಸಮಯದಲ್ಲಿ ಅವರ ಜೊತೆ ನಾವಿದ್ದು, ಎಲ್ಲಾ ಬೆಂಬಲ ನೀಡುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನಿರ್ಮಾಣ ಸಂಸ್ಥೆ ಕೂಡ ಹೇಳಿಕೊಂಡಿದೆ.
ಅಷ್ಟಕ್ಕೂ ಆಗಿದ್ದೇನು?
ಡಿ.4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಪೇಯ್ಡ್ ಪ್ರೀಮೀಯರ್ ಶೋ ಇತ್ತು. ರಾತ್ರಿ 10.30ರ ಸಮಯವದು. ಆ ವೇಳೆ ಅಭಿಮಾನಿಗಳು ಜಮಾವಣೆಗೊಂಡಿದ್ದರು. ಫ್ಯಾನ್ಸ್ ಹೆಚ್ಚಾದ್ದರಿಂದ ಕಾಲ್ತುಳಿತ ನಡೆದಿದೆ. ಈ ವೇಳೆ ದಿಲ್ ಸುಖ್‌ನಗರದ 39 ವರ್ಷದ ರೇವತಿ ಅನ್ನುವವರು ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ. ರೇವತಿ ಅವರು ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇನ್ನು, ಆ ಸ್ಕ್ರೀನಿಂಗ್ ವೇಳೆ ನಟ ಅಲ್ಲು ಅರ್ಜುನ್ ಕೂಡ ಹಾಜರಿದ್ದರು. ಈ ವೇಳೆ ತಮ್ಮ ಪ್ರೀತಿಯ ನಟನನ್ನು ನೋಡೋಕೆ ಬಂದಿದ್ದ ಫ್ಯಾನ್ಸ್ ನೂಕುನುಗ್ಗಲು ಮಾಡಿದ್ದಾರೆ. ಹಾಗಾಗಿ ಕಾಲ್ತುಳಿತ ನಡೆದಿದೆ. ಸದ್ಯ ರೇವತಿ ಅವರ ಚಿಕ್ಕ ಮಗನ ಸ್ಥಿತಿ ಗಂಭೀರವಾಗಿದೆ. ಜನರ ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ. ಈ ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ.
ಅತ್ತ ಘಟನೆ ಸಂಬಂಧ ನಟ ಅಲ್ಲು ಅರ್ಜುನ್ ವಿರುದ್ಧ ದೂರುಗಳು ಕೂಡ ದಾಖಲಾಗುತ್ತಿವೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಜೊತೆ ಸೇರಿ ಬಕ್ಕ ಜಾಡ್ಸನ್ ಎಂಬುವವರು ಅಲ್ಲಿನ ಕಮೀಷನರ್ ಗೆ ದೂರು ನೀಡಿದ್ದಾರೆ. ಈ ಘಟನೆಗೆ ಅಲ್ಲು ಅರ್ಜುನ್, ಚಿತ್ರದ ನಿರ್ಮಾಪಕರು ಹಾಗೂ ಪೊಲೀಸರು ಕಾರಣ. ರಾತ್ರಿ ವೇಳೆ ಅಲ್ಲು ಅರ್ಜುನ್ ಯಾಕೆ ಬರಬೇಕಿತ್ತು. ಕೂಡಲೇ ಆತನನ್ನು ಬಂಧಿಸಿ ಎಂದು ಆಗ್ರಹಿಸಿದ್ದಾರೆ.
ಇನ್ನು, ಪ್ರಗತಿಶೀಲ ಪ್ರಜಾಪ್ರಭುತ್ವ ವಿದ್ಯಾರ್ಥಿ ಸಂಘ ಕೂಡ ಈ ಘಟನೆಯನ್ನು ಖಂಡಿಸಿದೆ. ನಟ ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಯಾಕೆ ಬಂದರು. ತಮ್ಮ ಲಾಭಕ್ಕಾಗಿ ಅವರು ಬಂದಿದ್ದಾರೆ. ಮೃತ ರೇವತಿ ಕುಟುಂಬಕ್ಕೆ ನ್ಯಾಯ ಸಿಗಬೇಕು, ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು ಎಂದು ಎಸ್ಎಫ್ಐ , ಡಿವೈಎಫ್ಐ, ವಿದ್ಯಾರ್ಥಿ ಸಂಘಗಳು ಒತ್ತಾಯಿಸಿವೆ.
ಅದೇನೆ ಇರಲಿ, 3 ವರ್ಷಗಳ ಹಿಂದೆ ‘ಪುಷ್ಪ’ ಸಿನಿಮಾ ತೆರೆಗೆ ಬಂದು ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ ಸೀಕ್ವೆಲ್ ಬಗ್ಗೆ ನಿರೀಕ್ಷೆ ಇತ್ತು. ಅದನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಪ್ರೀಮಿಯರ್ ಶೋಗಳ ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಲಾಗಿತ್ತು. 5 ಪಟ್ಟು 10 ಪಟ್ಟು ಟಿಕೆಟ್ ದರ ಹೆಚ್ಚಿಸಿದ್ದು ಆಕ್ರೋಶಕ್ಕೂ ಕಾರಣವಾಗಿತ್ತು. ಕರ್ನಾಟಕದಲ್ಲಿ ಕೂಡ ಟಿಕೆಟ್ ದರ ಹೆಚ್ಚಿದೆ. ಟಿಕೆಟ್ ದರ ಹೆಚ್ಚಾದ ಕಾರಣ ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಟಿಕೆಟ್ ಬುಕ್ಕಿಂಗ್ ನಡೆಯಲಿಲ್ಲ. ಆಂಧ್ರ, ತೆಲಂಗಾಣದಲ್ಲಿ ಕೂಡ ಟಿಕೆಟ್ ದರ ಹೆಚ್ಚಾಗಿತ್ತು. ಮಧ್ಯಮವರ್ಗದ ಪ್ರೇಕ್ಷಕರು ಇಷ್ಟು ಹಣ ಕೊಟ್ಟು ಸಿನಿಮಾ ನೋಡಲು ಸಾಧ್ಯವೇ ಎಂದು ಅಸಮಾಧಾನ ಹೊರ ಹಾಕಿದ್ದರು. ಆದರೆ ಚಿತ್ರತಂಡ ಮಾತ್ರ ಬಜೆಟ್ ಜಾಸ್ತಿ ಎಂದು ಹೇಳಿ ಅದನ್ನು ಮರಳಿ ಪಡೆಯಲು ಟಿಕೆಟ್ ದರ ಹೆಚ್ಚಿಸಿದೆ. ಸದ್ಯಕ್ಕೆ ಪುಷ್ಪ2ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ವಿಜಯ್ ಭರಮಸಾಗರ, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ