ರಾಯಚೂರು : ಸರ್ಕಾರಿ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡ್ತಾರೆ. ಆ ಶಾಲೆಯ ಪುಟಾಣಿ ಮಕ್ಕಳು ಜೀವ ಅಂಗೈಯಲ್ಲಿಡಿದು ಶಾಲೆಗೆ ಬಂದು ಹೋಗ್ತಾರೆ. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕುತ್ತು ಬರುವ ಸ್ಥಿತಿ ಇದ್ದು, ನಿತ್ಯವೂ ಶಾಕ್ ನ ಭಯದಲ್ಲೇ ಶಾಲೆಗೆ ಹಾಜರಾಗ್ತಿದ್ದಾರೆ.
ಇದು ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಪಟೇಲ್ ಓಣಿಯ ಸರ್ಕಾರಿ ಶಾಲೆ. ಈ ಶಾಲೆ ಆರಂಭ ಆದಾಗಿನಿಂದಲೂ ಶಾಲೆಯ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ಫಾರ್ಮರ್ ಇದ್ದು, ನಿತ್ಯವೂ ಜೀವಭಯದಲ್ಲೇ ವಿದ್ಯಾರ್ಥಿಗಳು ತರಗತಿಗಳಿಗ ಹಾಜರಾಗ್ತಿದ್ದಾರೆ. ಶಾಲೆಯಲ್ಲಿ 120 ವಿದ್ಯಾರ್ಥಿಗಳಿದ್ದು, ಅವರೆಲ್ಲರೂ 1 ರಿಂದ 7ನೇ ತರಗತಿ ಓದ್ತಿರೋ ವಿದ್ಯಾರ್ಥಿಗಳು. ಶಾಲೆಯ ಪಕ್ಕದಲ್ಲೇ ಇರೋ ಟ್ರಾನ್ಸ್ಫಾರ್ಮರ್ ಕೈಗೆಟುಕುವ ಸ್ಥಿತಿಯಲ್ಲಿದ್ದು, ಮಕ್ಕಳು ನಿತ್ಯವೂ ಆಟ ಆಡೋಕೆ ಅದೇ ಟ್ರಾನ್ಸ್ಫಾರ್ಮರ್ ಪಕ್ಕಕ್ಕೇ ಹೋಗ್ತಾರೆ. ಇದೇ ವಿಚಾರ ಈಗ ಪೋಷಕರ ಆತಂಕವನ್ನ ಡಬಲ್ ಮಾಡಿದೆ.
ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತರೋ ರೀತಿಯಲ್ಲಿರೋ ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಥಳಾಂತರ ಮಾಡುವಂತೆ ಈಗಾಗಲೇ ಶಾಲೆಯಿಂದ ಹತ್ತಾರು ಬಾರಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ. ವಿದ್ಯುತ್ ತಂತಿಗಳು ಸಮೀಪದಲ್ಲೇ ಇದ್ದು, ಮಕ್ಕಳು ಊಟ ಹಾಗೂ ಆಟದ ಸಮಯದಲ್ಲಿ ಇದೇ ಟ್ರಾನ್ಸ್ಫಾರ್ಮರ್ ಸಮೀಪ ಹೋಗ್ತಿದ್ದಾರೆ. ಹೀಗಾಗಿ ಮಕ್ಕಳನ್ನ ಆ ಕಡೆ ಹೋಗದಂತೆ ಹಿಡಿದಿಟ್ಟುಕೊಳ್ಳೋದು ತುಂಬಾ ಕಷ್ಟವಾಗ್ತಿದೆ.
ಪ್ರಾಣಾಪಾಯದ ಭಯ ಇರೋದ್ರಿಂದ ಪುಟಾಣಿ ಮಕ್ಕಳ ಪೋಷಕರು ಆತಂಕಗೊಂಡಿದ್ದಾರೆ. ಮಕ್ಕಳಿಗೆ ಯಾವಾಗ ಏನಾಗುತ್ತೋ ಅನ್ನೋ ಭೀತಿಯಲ್ಲಿದ್ದಾರೆ. ಹೀಗಾಗಿ ಅಪಾಯದ ಮುನ್ಸೂಚನೆ ಇದ್ರೂ ಕೈ ಕಟ್ಟಿ, ಕಣ್ಮುಚ್ಚಿ ಕುಳಿತಿರುವ ಕೆಇಬಿ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಟ್ರಾನ್ಸ್ಫಾರ್ಮರ್ ಅನ್ನು ಸ್ಥಳಾಂತರಗೊಳಿಸಬೇಕಿದೆ.