ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಪ್ರದೇಶಗಳ ವೀಕ್ಷಣೆಗೆ ಕಾಂಗ್ರೆಸ್ ಮುಂದಾಗಿದೆ. ಪ್ರವಾಹ ಪೀಡಿತ ಪ್ರದೇಶಗಳ ವಾಸ್ತವತೆಯ ಅಧ್ಯಯನ, ಪರಿಹಾರ ಕಾರ್ಯಗಳ ಪರಿಶೀಲನೆ ಹಾಗೂ ಅಗತ್ಯ ನೆರವು ನೀಡುವ ಸಲುವಾಗಿ ಕೆಪಿಸಿಸಿಯಿಂದ 2 ತಂಡಗಳನ್ನು ರಚಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಪ್ರಮುಖ ನಾಯಕರುಗಳನ್ನು ವೀಕ್ಷಕರನ್ನಾಗಿ ನೇಮಿಸಿ ಆದೇಶ ಮಾಡಿದ್ದಾರೆ .
ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಬೆಳಗಾವಿ, ಬಾಗಲಕೋಟೆ, ರಾಯಚೂರು, ಯಾದಗಿರಿ, ಧಾರವಾಡ ಜಿಲ್ಲೆಗಳಲ್ಲಿ, ಬೆಳೆದು ನಿಂತ ಬೆಳೆ ಹಾಗೂ ಅಪಾರ ಆಸ್ತಿಪಾಸ್ತಿ ನಷ್ಟವಾಗಿದ್ದು, ಜನ ಜಾನುವಾರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಗಮನ ನೀಡುವ ಜೊತೆಗೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ.
ಆಡಳಿತ ಯಂತ್ರ ಸುಗಮವಾಗಿ ನಡೆಯಬೇಕು. ಅದಕ್ಕೆ ಅಗತ್ಯ ಸಹಕಾರ ನೀಡುವುದರ ಜೊತೆಗೆ ಸರ್ಕಾರಕ್ಕೆ ಸಲಹೆ, ಸೂಚನೆ ನೀಡುವುದು ಪ್ರತಿಪಕ್ಷವಾಗಿ ನಮ್ಮ ಜವಾಬ್ದಾರಿ. ನಮ್ಮ ಜವಾಬ್ದಾರಿಯನ್ನ ನಾವು ಮಾಡುತ್ತೇವೆ. ಇದು ರಾಜಕಾರಣ ಮಾಡುವಂತಹ ಸಮಯವಲ್ಲ. ಪ್ರವಾಹ ಪೀಡಿತ ಪ್ರದೇಶಗಳ ಸಂಕಷ್ಟ ಪರಿಹಾರಕ್ಕೆ ಧಾವಿಸುವುದು ನಮ್ಮ ಜವಾಬ್ದಾರಿ. ಅದನ್ನು ನಮ್ಮ ತಂಡಗಳು ಮಾಡಲಿವೆ ಅಂತ ಹೇಳಿದ್ದಾರೆ. ಹೆಚ್. ಕೆ ಪಾಟೀಲ ನೇತೃತ್ವದ ತಂಡ ಬೆಳಗಾವಿ ವಲಯದಲ್ಲೂ, ಈಶ್ವರ್ ಖಂಡ್ರೆ ನೇತೃತ್ವದ ತಂಡ ಕಲಬುರ್ಗಿ ವಲಯದಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿವೆ ಎಂದು ತಿಳಿದು ಬಂದಿದೆ.