ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ದೇಶವಲ್ಲದೆ, ಜಗತ್ತಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ದಾಳಿಗೆ ಪ್ರತೀಕಾರವಾಗಿ ಭಯೋತ್ಪಾದನೆಯ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ವಿಶ್ವದ ಹಲವಾರು ದೇಶಗಳು ಬೆಂಬಲ ನೀಡಿವೆ. ಅಲ್ಲದೆ ಜಾಗತಿಕ ಮಟ್ಟದ ದಿಗ್ಗಜ ನಾಯಕರು, ಬಲಿಷ್ಠ ದೇಶಗಳ ಪ್ರಮುಖರು ಒಕ್ಕೊರಲಿನಿಂದ ಭಾರತದ ಬೆನ್ನೆಲುಬಾಗಿ ನಿಲ್ಲಲು ಸಿದ್ಧವಾಗಿದ್ದಾರೆ. ಇಸ್ರೇಲ್, ರಷ್ಯಾ, ಜಪಾನ್ ಬಳಿಕ ಇದೀಗ ಅಮೆರಿಕವೂ ಭಾರತದ ಬೆಂಬಲಕ್ಕೆ ನಿಂತಿದೆ.
ಭಯೋತ್ಪಾದನೆಯ ವಿರುದ್ಧ ನಮ್ಮ ಮಿತ್ರ ರಾಷ್ಟ್ರ ಹೋರಾಡುತ್ತಿದೆ..
ಈ ಕುರಿತು ಖುದ್ದು ಅಮೆರಿಕದ ಸ್ಪೀಕರ್ ಮೈಕ್ ಜಾನ್ಸನ್ ಸಭೆಯೊಂದರಲ್ಲಿ ಮಾತನಾಡಿ, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನಾವು ಭಾರತವನ್ನು ಬೆಂಬಲಿಸುತ್ತೇವೆ. ಭಾರತ ನಮ್ಮ ಪ್ರಮುಖ ಪಾಲುದಾರ. ಭಯೋತ್ಪಾದನೆಯ ವಿರುದ್ಧ ಆ ದೇಶ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳನ್ನು ನಾವು ಬೆಂಬಲಿಸುತ್ತೇವೆ. ಭಾರತದಲ್ಲಿ ಏನಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಬಗ್ಗೆ ನಮಗೆ ಅಪಾರ ಸಹಾನುಭೂತಿ ಇದೆ. ನಮ್ಮ ಮಿತ್ರರಾಷ್ಟ್ರಗಳೊಂದಿಗೆ ನಿಲ್ಲಲು ಬಯಸುತ್ತೇವೆ. ಭಾರತವು ಹಲವು ಕ್ಷೇತ್ರಗಳಲ್ಲಿ ಪ್ರಮುಖ ಪಾಲುದಾರ ಎಂಬುದನ್ನು ಮರೆಯುವಂತಿಲ್ಲ. ಭಯೋತ್ಪಾದನೆಯ ವಿರುದ್ಧ ಆ ದೇಶ ಹೋರಾಡುತ್ತಿದೆ. ಇದಕ್ಕೆ ನಮ್ಮ ಬೆಂಬಲ ಇರಲಿದೆ ಎಂದು ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.
ಭಾರತದ ರಕ್ಷಣೆಗೆ ಸಿದ್ಧ..
ಟ್ರಂಪ್ ಸರ್ಕಾರ ಭಯೋತ್ಪಾದನಾ ಬೆದರಿಕೆಯ ಮಹತ್ವವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದೆ. ಆದ್ದರಿಂದ, ಭಾರತಕ್ಕೆ ಉಗ್ರರ ಬೆದರಿಕೆ ಹೆಚ್ಚಾದರೆ, ನಮ್ಮ ಆಡಳಿತ ಹೆಚ್ಚಿನ ಶಕ್ತಿ ಮತ್ತು ಸಂಪನ್ಮೂಲ ಹಾಗೂ ಸಮಯವನ್ನು ಅದರ ಮೇಲೆ ಕೇಂದ್ರೀಕರಿಸುತ್ತದೆ ಎನ್ನುವ ಮೂಲಕ ಭಾರತಕ್ಕೆ ಅಮೆರಿಕದಿಂದ ಎಲ್ಲ ರೀತಿಯಿಂದಲೂ ನೆರವು ನೀಡುವುದಾಗಿ ತಿಳಿಸಿದ್ದಾರೆ.
ನಮ್ಮ ವ್ಯಾಪಾರಗಳು ಉತ್ತಮವಾಗಿವೆ..
ಪ್ರಮುಖವಾಗಿ ಭಾರತ ಹಾಗೂ ಅಮೆರಿಕ ರಾಷ್ಟ್ರಗಳ ನಡುವೆ ಮುಂದುವರೆದಿರುವ ವ್ಯಾಪಾರ ಒಪ್ಪಂದದ ಮಾತುಕತೆಯ ಬಗ್ಗೆ ಮಾತನಾಡಿರುವ ಜಾನ್ಸನ್, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆಗಳು ಉತ್ತಮವಾಗಿ ನಡೆಯುತ್ತಿವೆ. ಸುಂಕಗಳ ಬಗ್ಗೆ ಚರ್ಚೆಗಳು ಮುಂದುವರೆದಿದ್ದು, ಇದು ಸಂತಸದ ವಿಚಾರ. ಮುಖ್ಯವಾಗಿ ಈ ಎಲ್ಲದಕ್ಕೂ ಮಿಗಿಲಾಗಿ ದೇಶದ ಸಂಬಂಧಗಳು ಮಹತ್ವದ್ದಾಗಿವೆ ಎಂದು ಅವರು ಒತ್ತಿ ಹೇಳಿದ್ದಾರೆ.
ಜಗತ್ತಿಗೆ ತಮ್ಮ ಗಟ್ಟಿ ನಿಲುವು ತಿಳಿಸಿದ್ದ ಭಾರತ..
ಇನ್ನೂ ಇದಕ್ಕೂ ಮುನ್ನ ಕಳೆದ ಏಪ್ರಿಲ್ 30ರಂದು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ನಡುವೆ ಮಾತುಕತೆ ನಡೆದಾಗಲೂ, ಭಯೋತ್ಪಾದನೆಯ ವಿರುದ್ಧ ಭಾರತಕ್ಕೆ ಸಪೋರ್ಟ್ ಮಾಡುವುದಾಗಿ ತಿಳಿಸಿದ್ದರು. ಪಹಲ್ಗಾಮ್‌ನಲ್ಲಿ ನಡೆದ ಹತ್ಯಾಕಾಂಡಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ರುಬಿಯೊ, ದಕ್ಷಿಣ ಏಷ್ಯಾದಲ್ಲಿ ಉದ್ವಿಗ್ನತೆ ತಗ್ಗಿಸಲು ಮತ್ತು ಶಾಂತಿ, ಭದ್ರತೆಯನ್ನು ಕಾಪಾಡಬೇಕಿದೆ ಎಂದಿದ್ದರು.
ಅಲ್ಲದೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ನಡುವಿನ ದೂರವಾಣಿಯಲ್ಲಿ ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಬಗ್ಗೆಯೂ ಚರ್ಚಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿದ ವಿಶ್ವ ನಾಯಕರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಒಬ್ಬರಾಗಿದ್ದರು. ಹೀಗಾಗಿ ಭಾರತಕ್ಕೆ ಯಾವುದೇ ತೆರನಾದ ಬೆಂಬಲ. ಸಹಾಯ, ನೈತಿಕ ಸ್ಥೈರ್ಯ ಸೇರಿದಂತೆ ಎಲ್ಲ ರೀತಿಯಲ್ಲೂ ಅಮೆರಿಕ ಸಿದ್ಧವಾಗಿದೆ ಎಂದು ಟ್ರಂಪ್ ಭರವಸೆ ನೀಡಿದ್ದರು.