Friday, March 29, 2024

Latest Posts

ಯಾರು ಈ ಡಿ.ಕೆ ಶಿವಕುಮಾರ್..? ಗೊತ್ತಾ ಇವರ ಹಿಸ್ಟರಿ..?

- Advertisement -

ಕರ್ನಾಟಕ ಟಿವಿ : ಇಡೀ ದೇಶಾದ್ಯಂತ ಸದ್ಯ ಚರ್ಚೆಯಾಗ್ತಿರುವ ಏಕೈಕ ರಾಜಕಾರಣಿ ಅಂದ್ರೆ ಅದು ಡಿಕೆ ಶಿವಕುಮಾರ್.. ಡಿಕೆ ಶಿವಕುಮಾರ್ ರಾಜಕಾರಣಕ್ಕೆ ಬಂದಿದ್ದೇಗೆ..? ಇಷ್ಟೊಂದು ಪ್ರಭಾವಿಯಾಗಿ ಬೆಳೆದಿದ್ದು ಹೇಗೆ ಅಂತ ತಿರುಗಿ ನೋಡಿದ್ರೆ ಕಾಣ್ಸೋದು ಥೇಟ್ ರಾಯಲಸೀಮಾ ರಾಜಕೀಯ ಮೀರಿಸುವ ಪೊಲಿಟಿಕಲ್ ಹಿಸ್ಟರಿ.. ಹೌದು ತೊಂಬತ್ತರ ದಶಕದಲ್ಲೇ ದೇವೇಗೌಡರ ಫ್ಯಾಮಿಲಿಯನ್ನ ಮಕಾಡೆ ಮಲಗಿಸಿದ್ದ ಸಾತನೂರ್ ಗಂಡು.. ಪತ್ರಕರ್ತೆಯನ್ನಅಖಾಡಕ್ಕಿಳಿಸಿ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಸೋಲಿನ ರುಚಿ ತೋರಿಸಿ ಮಾಜಿ ಪ್ರಧಾನಿಯನ್ನೇ ಮನೆಗೆ ಕಳುಹಿಸಿದ್ದ ಚಾಣಕ್ಯ ಈ ಡಿ.ಕೆ ಶಿವಕುಮಾರ್.. ಸಾತನೂರಿನಲ್ಲಿ ಕುಮಾರಸ್ವಾಮಿಯನ್ನ ಸೋಲಿಸಿದ ಸದ್ದಡಗಿಸಿದ್ದ ಶಿವಕುಮಾರ್, 2013ರಲ್ಲಿ ಅನಿತಾ ಕುಮಾರಸ್ವಾಮಿಯನ್ನ ಲೋಕಸಭಾ ಉಪ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿ ಸಹೋದರ ಡಿ.ಕೆ ಸುರೇಶ್ ನನ್ನ ಸಂಸತ್ತಿಗೆ ಕಳುಹಿಸಿದ ಗಂಡೆದೆಯ ರಾಜಕಾರಣಿ.

ಡಿಕೆಶಿ ಜೊತೆ ರಾಜಕಾರಣದಲ್ಲಿ ಹೊಡೆದಾಡಲು ಆಗದ ಗೌಡರ ಕುಟುಂಬ ಸಾಕುಸಾಕಾಗಿ ಹೋಗಿ ಕಳೆದೊಂದು ದಶಕದಿಂದ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಮಾಡಿಕೊಂಡು ಬಂದಿತ್ತು.. ಈ ಮೂಲಕ ಕನಕಪುರದ ಬಂಡೆಯನ್ನ ಯಾರೂ ಏನೂ ಮಾಡೋಕೆ ಆಗಲ್ಲ ಅನ್ನೋದನ್ನ ಡಿ.ಕೆ ಶಿವಕುಮಾರ್ ಸಾಬೀತು ಮಾಡಿದ್ರು..

ಗೌಡರ ಫ್ಯಾಮಿಲಿ ವಿರುದ್ಧ ದಿಗ್ವಿಜಯ ಸಾಧಿಸಿದ್ದ ಡಿಕೆ ಶಿವಕುಮಾರ್ ಕಳೆದ ವರ್ಷ ಬಿಜೆಪಿಯ ಚಾಣಕ್ಯನಿಗೆ ಮಣ್ಣುಮುಕ್ಕಿಸಿದ್ರು. ಅಮಿತ್ ಶಾ ಸಿಎಂ ಸ್ಥಾನದ ಆಮಿಷವನ್ನೂ ಎಡಗಾಲಲ್ಲಿ ಒದ್ದಿದ್ರು.. ಅದರ ಪರಿಣಾವೇ ಇಂದು ಡಿಕೆಶಿ ಇಡಿ ಮುಂದೆ ಗಳಗಳ ಕಣ್ಣೀರು ಹಾಕುವಂತೆ ಮಾಡಿದೆ ಅಂತ ಹೇಳಲಾಗ್ತಿದೆ.. ಹಾಗೆಂದ ಮಾತ್ರಕ್ಕೆ ಡಿಕೆಶಿ ವ್ಯವಹಾರವೆಲ್ಲಾ ಪಕ್ಕಾ.. ಇವರು ಕಂಪ್ಲೀಟ್ ಕ್ಲೀನ್ ಕೃಷ್ಣಪ್ಪ ಅಂತ ಏನಲ್ಲ.. ಅಟ್ ದಿ ಸೇಮ್ ಟೈಂ ಮೋದಿ-ಅಮಿತ್ ಶಾ  ಡಿಕೆಶಿಗೆ ಕಿರುಕುಳ ಕೊಡ್ತಾನೇ ಇಲ್ಲ ಅಂತ ಹೇಳುವ ಆಗೂ ಇಲ್ಲ.. ಇದೊಂದು ರೀತಿ ಚಾಲಕಿ ಕಳ್ಳನೊಬ್ಬ ಭ್ರಷ್ಟ ಪೊಲೀಸರಿಗೆ ಲಂಚಕೊಡದೇ ಸಿಕ್ಕಿಬಿದ್ದ ಸನ್ನಿವೇಶ ಅಂತ  ಹೇಳಬಹುದೇನೋ..

1962ರಲ್ಲಿ ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆ ಈಗಿನ ರಾಮನಗರ ಜಿಲ್ಲೆಯ ದೊಡ್ಡಾಲದಹಳ್ಳಿ ಕೆಂಪೇಗೌಡರ ಪುತ್ರನಾಗಿ ಜನಿಸಿದ ಡಿಕೆ ಶಿವಕುಮಾರ್ ಶಾಲಾ ದಿನಗಳಿಂದಲೂ ಲೀಡರ್ ಶಿಫ್ ಕ್ವಾಲಿಟಿ ಇದ್ದ ಮನುಷ್ಯ. ಕಾಲೇಜು ದಿನಗಳಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ಒಂದಷ್ಟು ಕಾಲ ಆರ್ ಎಸ್ ಎಸ್ ಶಾಖೆಯಲ್ಲಿ ಭಾಗಿಯಾಗಿದ್ದ ಬಿಸಿ ರಕ್ತದ ಯುವಕ.. ಆ ಕಾಲದ ಬೆಂಗಳೂರಿನ ಭೂಗತ ನಾಯಕರು, ರಾಜಕಾರಣಿಗಳ ಒಡನಾಟ ಬೆಳೆಸಿಕೊಂಡ ಡಿಕೆಶಿ ನಂತರ ಯೂತ್ ಕಾಂಗ್ರೆಸ್ ನಲ್ಲಿ ಸಕ್ರಿಯರಾಗ್ತಾರೆ..

1985ರಲ್ಲಿ ದೇವೇಗೌಡರ ವಿರುದ್ಧ ಅಖಾಡಕ್ಕೆ ಧುಮುಕಿದ ಡಿಕೆಶಿ

 1985ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ದೇವೇಗೌಡರ ವಿರುದ್ಧ ಮೊದಲ ಬಾರಿಗೆ ಸ್ಪರ್ಧೆ ಮಾಡುವ ಮೂಲಕ ಇಳಿಯುವ ಮೂಲಕ ರಾಜಕೀಯ ಎಂಟ್ರಿಯಾಗ್ತಾರೆ.. ದೇವೇಗೌಡರು 45612 ಮತ ಪಡೆದ್ರೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಿಕೆ ಶಿವಕುಮಾರ್ 29809 ಮತಗಳನ್ನ ಪಡೆದು ಎರಡನೇ ಸ್ಥಾನ ಪಡೀತಾರೆ..

1989ರಲ್ಲಿ ಮೊದಲ ಬಾರಿ ವಿಧಾನಸಭೆ ಪ್ರವೇಶ, ಬಂಗಾರಪ್ಪ ಸಂಪುಟದಲ್ಲಿ ಸಚಿವ

 1989ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗುವ ಡಿ.ಕೆ ಶಿವಕುಮಾರ್ ಜನತಾಪಕ್ಷ ಹಾಗೂ ಜನತಾದಳದ ಅಭ್ಯರ್ಥಿಗಳ ವಿರುದ್ಧ ಶೇಕಡಾ 50% ಮತ ಪಡೆಯುವ ಮೂಲಕ ಮೊದಲ ಬಾರಿ ವಿಧಾನಸಭೆ ಪ್ರವೇಶ ಮಾಡ್ತಾರೆ.. ಡಿಕೆ ಶಿವಕುಮಾರ್ ಲಕ್ ಎಂಥದ್ದು ಅಂದ್ರೆ ಮೊದಲ ಬಾರಿ ಶಾಸಕ ಆದಾಗಲೇ ಸಚಿವನಾಗೋ ಯೋಗ ಬಂತು.. ಬಂಗಾರಪ್ಪ ಸಿಎಂ ಆಗಿದ್ದಾಗ ಡಿಕೆ ಶಿವಕುಮಾರ್ ಬಂದಿಖಾನೆ ಸಚಿವರಾಗಿ ಕಾರ್ಯನಿರತವಹಿಸ್ತಾರೆ.

1994ರಲ್ಲಿ ಎರಡನೇ ಬಾರಿ ಸಾತನೂರು ಸಾಮ್ರಾಜ್ಯದಲ್ಲಿ ಗೆಲುವು

 ನಂತರ 1994ರ ವಿಧಾನಸಭಾ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಜನತಾದಳದ ಯುಕೆ ಸ್ವಾಮಿ ವಿರುದ್ಧ 568 ಮತಗಳ ಅಂತರದಿಂದ ಜಯಗಳಿಸಿ ಎರಡನೇ ಬಾರಿ ವಿಧಾನಸಭೆ ಪ್ರವೇಶ ಮಾಡ್ತಾರೆ..

1999ರಲ್ಲಿ ಕುಮಾರಸ್ವಾಮಿ ವಿರುದ್ಧ ಡಿಕೆಶಿ ದಿಗ್ವಿಜಯ

ನಂತರ 1999ರ ವಿಧಾನಸಭಾ ಚುನಾವಣೆಯಲ್ಲಿ ಪ್ರಸ್ತುತ ರಾಜಕಾರಣದಲ್ಲಿ ಜೋಡೆತ್ತು ಅಂತ ಕರೆಸಿಕೊಳ್ಳುವ ಡಿಕೆಶಿವಕುಮಾರ್ ಕುಮಾರಸ್ವಾಮಿ ನಡುವೆಯೇ ಕಾಳಗ ನಡೆಯುತ್ತೆ.. ಡಿಕೆ ಶಿವಕುಮಾರ್ ಕುಮಾರಸ್ವಾಮಿಯನ್ನ ಮಕಾಡೆ ಮಲಗಿಸಿ ಮೂರನೇ ಬಾರಿ ವಿಧಾನಸಭೆ ಪ್ರವೇಶ ಮಾಡಿ ಎಸ್.ಎಂ ಕೃಷ್ಣ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗ್ತಾರೆ.. ಎಸ್.ಎಂ ಕೃಷ್ಣ ದತ್ತು ಪುತ್ರನ ರೀತಿ ಡಿಕೆ ಶಿವಕುಮಾರ್ ಕಾಂಗ್ರೆಸ್ ನಲ್ಲಿ ಹೊಸ ಸಾಮ್ರಾಜ್ಯ ಸ್ಥಾಪನೆ ಮಾಡ್ತಾರೆ.

2004ರಲ್ಲಿ ದೇವೇಗೌಡರಿಗೆ ಸೋಲಿನ ರುಚಿ ತೋರಿಸಿದ್ದ ಸಾಮ್ರಾಟ ಡಿಕೆಶಿ

ಇನ್ನು 2004ರ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಉದಯ ಟಿವಿ ನಿರೂಪಕಿ ಮುಖಾಮುಖಿ ಖ್ಯಾತಿಯ ತೇಜಸ್ವಿನಿಯನ್ನ ದೇವೇಗೌಡರ ವಿರುದ್ಧ ಅಖಾಡಕ್ಕೆ ಇಳಿಸುವ ಡಿಕೆಶಿ ದೇವೇಗೌಡರಿಗೆ ಹೀನಾಯ ಸೋಲು ಕಾಣುವಂತೆ ಮಾಡ್ತಾರೆ.. 5 ವರ್ಷದ ಅಂತರಲ್ಲಿ ಕುಮಾರಸ್ವಾಮಿ-ದೇವೇಗೌಡರಗೆ ಸೋಲಿನ ರುಚಿ ತೋರಿಸಿದ್ದ ಸರದಾರ  ಈ ಡಿ ಕೆ ಶಿವಕುಮಾರ್.. ರಾಜಕೀಯದಲ್ಲಿ ದೇವೇಗೌಡರ ಫ್ಯಾಮಿಲಿಗೆ ಹೆಚ್ಚು ಸೋಲಿನಪಾಠ ಮಾಡಿದ್ರೆ ಅದು ಬೇರ್ಯಾರು ಅಲ್ಲ ಒನ್ ಅಂಡ್ ಓನ್ಲಿ ಡಿಕೆ ಶಿವಕುಮಾರ್..

2008ರಲ್ಲಿ ಸಾತನೂರು ಕ್ಷೇತ್ರ ಕನಕಪುರದಲ್ಲಿ ವಿಲೀನ..!

2008ರ ಚುನಾವಣೆಯಲ್ಲಿ ಕ್ಷೇತ್ರ ಪುನರ್ ವಿಂಗಡನೆ ನಂತರ ಸಾತನೂರು ಕ್ಷೇತ್ರ ಕನಕಪುರ ಕ್ಷೇತ್ರದಲ್ಲಿ ವಿಲೀನವಾಗುತ್ತೆ.. ನಂತರ ಸಾತನೂರು ಸಾಮ್ರಾಜ್ಯವನ್ನ ಕನಕಪುರ ವಿಧಾಸನಭಾ ಕ್ಷೇತ್ರದಲ್ಲಿ ವಿಸ್ತಾರ ಮಾಡುವ ಡಿಕೆ ಶಿವಕುಮಾರ್ 4ನೇ ಬಾರಿ ಆಯ್ಕೆಯಾಗಿ ಸೋಲಿಲ್ಲದ ಸರದಾರನಾಗಿ ಮುಂದುವರೀತಾರೆ..

2013ರಲ್ಲಿ 5ನೇ ಬಾರಿ ಆಯ್ಕೆ, ಸಿದ್ದು ಕ್ಯಾಬಿನೆಟ್ ನಲ್ಲಿ ಪವರ್ ಮಿನಿಸ್ಟರ್

ಇನ್ನು 2013ರಲ್ಲಿ 5ನೇ ಬಾರಿ ಆಯ್ಕೆಯಾಗುವ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಸಂಪುಟದಲ್ಲಿ ತಡವಾಗಿ ಸಚಿವ ಸ್ಥಾನ ಪಡೆದು ಪವರ್ ಮಿನಿಸ್ಟರ್ ಆಗ್ತಾರೆ.. ಸಿದ್ದರಾಮಯ್ಯ ನಂತರ ನಾನೇ ಸಿಎಂ ಅಭ್ಯರ್ಥಿ ಅಂತ ಡಿಕೆಶಿ ಓಡಾಡ್ತಾರೆ. ಆ ವೇಳೆಗೆ ಡಿಕೆ ಯಾರು ಬ್ರೇಕ್ ಹಾಕುವವರು ಹುಟ್ಟೇ ಇಲ್ಲ ಅನ್ನುವ ಹಂತಕ್ಕೆ ರಾಜಕಾರಣ ಬಂದು ನಿಂತಿರುತ್ತೆ. ಯಾಕೆಂದರೆ ಎದುರಾಳು ದೇವೇಗೌಡರೇ ಡಿ.ಕೆ ಶಿವಕುಮಾರ್ ಸಹವಾಸ ಬಿಟ್ಟುಬಿಡ್ತಾರೆ.

2018ರಲ್ಲಿ ದೇವೇಗೌಡರ ಫ್ಯಾಮಿಲಿ ಜೊತೆಗಿನ ದ್ವೇಷ ಅಂತ್ಯ..!

2018ರ ವಿಧಾನಸಭಾ ಚುನಾವಣೆಯಲ್ಲಿ 6ನೇ ಬಾರಿ ವಿಧಾನಸಭೆ ಮೆಟ್ಟಿಲೇರ್ತಾರೆ.. ಆದ್ರೆ ಅತಂತ್ರ ಫಲಿತಾಂಶದಿಂದ ಕಾಂಗ್ರೆಸ್ ನಾಯಕರಿಗೆ ಶಾಕ್ ಆಗುತ್ತೆ.. ಆದ್ರೆ ಹೈಕಮಾಂಡ್ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡುವ ದೃಷ್ಟಿಯಿಂದ ಜೆಡಿಎಸ್ ಗೆ ಬೆಂಬಲ ಸೂಚಿಸುವಂತೆ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೇಳುತ್ತೆ.. ದೇವೇಗೌಡರ ವಿರೋಧಿ ರಾಜಕಾರಣ ಮಾಡ್ತಿದ್ದ  ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ದೇವೇಗೌಡರ ಮುಂದೆ ಕೈಕಟ್ಟಿ ಬೆಂಬಲ ಸೂಚಿಸ್ತಾರೆ.. ಸಿದ್ದರಾಮಯ್ಯ ಹೈಕಮಾಂಡ್ ಹೇಳಿದ್ರು ಒಳಗೊಳಗೆ ಕುಮಾರಸ್ವಾಮಿ ಮಕಾಡೆ ಮಲಗಿಸಲು ಪ್ರಯತ್ನ ಪಡ್ತಾರೆ. ಆದ್ರೆ, ಡಿಕೆ ಶಿವಕುಮಾರ್ ಕುಮಾರಸ್ವಾಮಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವನಾಗಿ ಆಪರೇಷನ್ ಕಮಲದ ವಿರುದ್ಧ ಚೌಕಿದಾರನ ರೀತಿ ಕೆಲಸ ಮಾಡಿ 14 ತಿಂಗಳು ಕುಮಾರಸ್ವಾಮಿ ಸಿಎಂ ಆಗಿರೋ ಕಡೇ ಕ್ಷಣದ ವರೆಗೂ ನಿಯತ್ತಾಗಿ ಸರ್ಕಾರ ಬಚಾವ್ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡ್ತಾರೆ.. ಯಾಕಂದ್ರೆ ಕುಮಾರಸ್ವಾಮಿ ನಂತರ ನಾನೇ ಒಕ್ಜಲಿಗರ ನಾಯಕನಾಗಬೇಕು ಅನ್ನೋದು ಡಿಕೆ ಶಿವಕುಮಾರ್ ದೂರಾಲೋಚನೆಯಾಗಿತ್ತು. ಆದ್ರೆ, ದೇವೇಗೌಡರನ್ನ ಮಟ್ಟಹಾಕಿದ ರೀತಿ ಅಮಿತ್ ಶಾರನ್ನ ಹೈಕಾಂಡ್ ಮಾತು ಕೇಳಿಕೊಂಡು ಎದುರುಹಾಕಿಕೊಂಡ ಡಿಕೆಶಿ ಇದೀಗ ಕಣ್ಣೀರು ಹಾಕುವಂತೆ ಮಾಡಿದೆ..

ಒಟ್ಟಾರೆ ಡಿಕೆ ಶಿವಕುಮಾರ್ ವಿರುದ್ಧ ಮೋದಿ-ಅಮಿತ್ ಶಾ ಏನೇ ಸೇಡಿನ ರಾಜಕಾರಣ ಮಾಡಿದ್ರು ಕನಕಪುರದ ಬಂಡೆ ಪ್ರಾಮಾಣಿಕ ವ್ಯವಹಾರ ಮಾಡಿದ್ರೆ ನೋ ಪ್ರಾಬ್ಲಂ..  ಡಿ.ಕೆ ಶಿವಕುಮಾರ್ ಕ್ಲೀನ್ ಕೃಷ್ಣಪ್ಪ ಆಗಿದ್ರೆ ಒಂದಲ್ಲ ಒಂದು ದಿನ ಪರಿಶುದ್ಧವಾಗಿ ಹೊರ ಬರ್ತಾರೆ.. ಇಲ್ಲದಿದ್ರೆ ಮೋದಿ ಸರ್ಕಾರ ಮನೆಗೆ ಹೋಗುವ ವರೆಗೂ ಡಿಕೆ ಶಿವಕುಮಾರ್ ಗೆ ಇಡಿ, ಐಟಿ, ಸಿಬಿಐ ಕುಣಿಕೆ ತಪ್ಪಿದ್ದಲ್ಲ..

ನಿಮ್ಮ ಪ್ರಕಾರ ಡಿ.ಕೆ ಶಿವಕುಮಾರ್ ಪ್ರಮಾಣಿಕರಾ..? ಅಮಿತ್ ಶಾ- ಮೋದಿ ಸೇಡಿನ ರಾಜಕಾರಣ ಮಾಡ್ತಿದ್ದಾರೆ..? ಈ ಬಗ್ಗೆ ಕಾಮೆಂಟ್ ಮಾಡಿ..

- Advertisement -

Latest Posts

Don't Miss