ನವದೆಹಲಿ: ಹೊಸ ಕರೊನಾ ರೂಪಾಂತರಿ ಒಮಿಕ್ರೋನ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಎರಡು ಗಂಟೆಗಳ ಕಾಲ ಉನ್ನತ ಅಧಿಕಾರಿಗಳ ಸಭೆ ನಡೆಯಿತು. ಹೊಸ ಸವಾಲನ್ನು ಎದುರಿಸಲು ಭಾರತ ಕ್ರಿಯಾಶೀಲವಾಗಿರಬೇಕು ಎಂದ ಮೋದಿ, ಈ ರೂಪಾಂತರಿಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧಗಳನ್ನು ಸಡಿಲೀಕರಿಸಿರುವ ನಿರ್ಧಾರವನ್ನು ಪುನರ್ಪರಿಶೀಲಿಸಬೇಕು ಎಂದಿದ್ದಾರೆ.
ನಿನ್ನೆಯಷ್ಟೇ ಕರೊನಾ ಕಾರಣದಿಂದಾಗಿ 20 ತಿಂಗಳುಗಳಿಂದ ಸ್ಥಗಿತಗೊಳಿಸಲಾಗಿದ್ದ ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ಡಿಸೆಂಬರ್ 15 ರಿಂದ ಪುನರಾರಂಭಿಸಲಾಗುವುದು ಎಂದು ಭಾರತ ಸರ್ಕಾರ ಘೋಷಿಸಿತ್ತು. ನಿನ್ನೆಯೇ ದಕ್ಷಿಣ ಆಫ್ರಿಕಾ, ಬೊಟ್ಸ್ವಾನ ಮತ್ತು ಹಾಂಗ್ಕಾಂಗ್ ಸೇರಿದಂತೆ ವಿವಿಧ ದೇಶಗಳಲ್ಲಿ ವರದಿಯಾಗಿರುವ ಒಮಿಕ್ರೋನ್ ಕರೊನಾ ರೂಪಾಂತರಿಯನ್ನು ವಿಶ್ವ ಆರೋಗ್ಯ ಸಂಸ್ಥೆ ‘ವೇರಿಯೆಂಟ್ ಆಫ್ ಕನ್ಸರ್ನ್’ ಎಂದು ಹೆಸರಿಸಿತು.
ಈ ಹಿನ್ನೆಲೆಯಲ್ಲಿ ಭಾರತ ಮತ್ತು ಇತರ ದೇಶಗಳ ಮೇಲೆ ಇದರಿಂದಾಗುವ ಪರಿಣಾಮ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ವಿಷದವಾಗಿ ಚರ್ಚಿಸಿದ ಪ್ರಧಾನಿ ಮೋದಿ, ‘ಈ ಸಂದರ್ಭದಲ್ಲಿ ಕ್ರಿಯಾಶೀಲರಾಗಿದ್ದು, ಅಂತರಾಷ್ಟ್ರೀಯ ಪ್ರಯಾಣ ನಿರ್ಬಂಧಗಳನ್ನು ಸಡಿಲೀಕರಿಸುವ ಯೋಜನೆಗಳನ್ನು ಮತ್ತೆ ಪರಿಗಣಿಸಿ’ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಜನರು ಹೆಚ್ಚು ಜಾಗರೂಕರಾಗಿದ್ದು, ಮಾಸ್ಕ್ ಮತ್ತು ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಬೇಕು. ಅಂತರರಾಷ್ಟ್ರೀಯ ಆಗಮಿತರ ಪರಿವೀಕ್ಷಣೆ ಮತ್ತು ಪರೀಕ್ಷೆಗಳಿಗೆ, ಅಪಾಯ ಎದುರಿಸುತ್ತಿರುವ ದೇಶಗಳ ಬಗ್ಗೆ ಹೆಚ್ಚಿನ ಗಮನ ನೀಡಿ, ಕ್ರಮ ತೆಗೆದುಕೊಳ್ಳಬೇಕು. ಸೋಂಕಿತರ ಜಿನೋಮ್ ಸೀಕ್ವೇಂಸಿಂಗ್ ಪ್ರಕ್ರಿಯೆಗಳನ್ನು ವೇಗವಾಗಿ ನಡೆಸುವಂತಾಗಬೇಕು. ದೇಶಾದ್ಯಂತ ಎರಡನೇ ಡೋಸ್ ಕರೊನಾ ಲಸಿಕೆ ನೀಡುವ ಕಾರ್ಯಕ್ರಮ ವೇಗ ಪಡೆಯಬೇಕು ಎಂದು ಮೋದಿ ಹೇಳಿದರು ಎನ್ನಲಾಗಿದೆ.

