Spiritual: ಭಾರತದಲ್ಲಿರುವಷ್ಟು ವೈವಿಧ್ಯತೆ ಇನ್ಯಾವ ದೇಶದಲ್ಲಿಯೂ ಇಲ್ಲ. ಅಲ್ಲದೇ, ದಿಕ್ಕು ದಿಕ್ಕಿಗೂ ದೇವಸ್ಥಾನಗಳಿದೆ. ಇಂದು ನಾವು ಭಾರತದಲ್ಲಿರುವ 10 ಪ್ರಸಿದ್ಧ ದೇವಿ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕಾಮಾಕ್ಯ ದೇವಸ್ಥಾನ. ಅಸ್ಸಾಂನ ಗುವಾಹಟಿಯಲ್ಲಿ ಕಾಮಾಕ್ಯ ದೇವಸ್ಥಾನವಿದೆ. ಇದು ಸತಿಯ ಯೋನಿ ಬಿದ್ದ ಸ್ಥಳವಾಗಿದ್ದು, ಇಲ್ಲಿ ಯೋನಿಯನ್ನೇ ಪೂಜಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಮಂತ್ರ ತಂತ್ರ ಸಿದ್ಧಿಸಿಕೊಳ್ಳುವವರು, ಅಘೋರಿಗಳು ಹೆಚ್ಚು ಭೇಟಿ ನೀಡುತ್ತಾರೆ. ಏಕೆಂದರೆ ಕಾಮಾಕ್ಯ ದೇವಿಯ ಆಶೀರ್ವಾದ ಸಿಕ್ಕರೆ, ಮಂತ್ರ ತಂತ್ರ ಸಿದ್ಧಿಸಿಕೊಳ್ಳುವಲ್ಲಿ ಯಶಸ್ಸು ಕಾಣುತ್ತಾರೆಂಬ ನಂಬಿಕೆ ಇದೆ.
ವೈಷ್ಣೋದೇವಿ ಮಂದಿರ. ಜಮ್ಮು-ಕಾಶ್ಮೀರದ ಕಾತ್ರಾ ಜಿಲ್ಲೆಯಲ್ಲಿ ವೈಷ್ಣೋದೇವಿ ದೇವಸ್ಥಾನವಿದೆ. ಇಲ್ಲಿ ಬಂಡೆ ರೂಪದಲ್ಲಿ ದೇವಿಯನ್ನ ಪೂಜಿಸಲಾಗುತ್ತದೆ. 108 ಶಕ್ತಿ ಪೀಠಗಳಲ್ಲಿ ಒಂದಾದ ವೈಷ್ಣೋದೇವಿಯ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಜೈ ಮಾತಾದಿ ಎಂಬ ಜೈಕಾರದೊಂದಿಗೆ ಬಂದು, ಭಕ್ತರು ಇಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಇಲ್ಲಿ ಸಿಗುವ ಕೆಂಪು ಬಟ್ಟೆಯನ್ನು ಒಯ್ಯುತ್ತಾರೆ. ಇದನ್ನು ಧರಿಸಿದವರನ್ನ ದೇವಿ ಸದಾ ರಕ್ಷಿಸುತ್ತಾಳೆಂಬ ನಂಬಿಕೆ ಇದೆ.
ಕಾಳಿಘಾಟ್ ಮಂದಿರ. ಈ ದೇವಸ್ಥಾನ ಕೋಲ್ಕತ್ತಾದ ಪ್ರಸಿದ್ಧ ದೇವಿ ದೇವಸ್ಥಾನವಾಗಿದೆ. ಇಲ್ಲಿ ಸತಿ ದೇವಿಯ ಬಲ ಪಾದದ ಹೆಬ್ಬೆರಳು ಬಿದ್ದಿದ್ದು, ಎರಡು ಸಾವಿರ ವರ್ಷಗಳ ಹಿಂದಿನ ದೇವಸ್ಥಾನವಾಗಿದೆ. ಆದಿಗಂಗಾ ಎಂಬ ಸಣ್ಣ ಜಲಧಾರೆಯ ದಡದಲ್ಲಿರುವ ಕಾಳಿಘಾಟ್ ಮಂದಿರದಲ್ಲಿ, ನವರಾತ್ರಿ ಸಮಯದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದು ಬರೀ ದೇವಸ್ಥಾನವಷ್ಟೇ ಅಲ್ಲದೇ, ಪ್ರವಾಸ ತಾಣವೂ ಆಗಿದೆ.
ಮೈಸೂರು ಚಾಮುಂಡೇಶ್ವರಿ. ನಮ್ಮ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿ ನೆಲೆಸಿರುವ ಜಾಗವೇ, ಮೈಸೂರಿನ ಚಾಮುಂಡಿ ಬೆಟ್ಟ. ಇಲ್ಲಿ ಸತಿಯ ಕೂದಲು ಬಿದ್ದಿದೆ ಎಂದು ಹೇಳಲಾಗುತ್ತದೆ. ಹೊಯ್ಸಳ ರಾಜರು ಈ ಸ್ಥಳದಲ್ಲಿ, ಚಾಮುಂಡಿ ದೇವಸ್ಥಾನವನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಹಲವರು ಹೊಸ ಕೆಲಸ ಆರಂಭಿಸಲು, ಉದ್ಯೋಗಕ್ಕೆ ಹೋಗುವ ಮೊದಲು ಚಾಮುಂಡೇಶ್ವರಿಯ ಆಶೀರ್ವಾದ ಪಡೆಯುತ್ತಾರೆ. ರಾಜಕಾರಣಿಗಳು, ಸಿನಿಮಾ ನಟ ನಟಿಯರು ಚಾಮುಂಡೇಶ್ವರಿಯ ದರ್ಶನ ಪಡೆದು ಮುಂದಿನ ಹೆಜ್ಜೆ ಇಡುತ್ತಾರೆ. ಏಕೆಂದರೆ, ಈಕೆಯ ಆಶೀರ್ವಾದ ಸಿಕ್ಕರೆ, ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದು ಜನರ ನಂಬಿಕೆ.
ಕೋಲ್ಹಾಪುರ ಮಹಾಲಕ್ಷ್ಮೀ ಮಂದಿರ. ಸತಿಯ ಎಡಗೈ ಬಿದ್ದ ಜಾಗವೇ ಕೋಲ್ಹಾಪುರದ ಮಹಾಲಕ್ಷ್ಮೀ ದೇವಸ್ಥಾನ. ಕಪ್ಪು ಕಲ್ಲಿನ ಮೂರ್ತಿಯ ರೂಪದಲ್ಲಿ ಆಸೀನಳಾಗಿರುವ ಲಕ್ಷ್ಮೀ, ಎಲ್ಲರ ಮನೋಕಾಮನೆಗಳನ್ನು ಈಡೇರಿಸುತ್ತಾಳೆಂಬ ನಂಬಿಕೆ ಇದೆ. ಇಲ್ಲಿ ಭೇಟಿ ನೀಡಿದರೆ, ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ ಅನ್ನೋ ನಂಬಿಕೆ ಇದೆ. ಉಳಿದ ದೇವಸ್ಥಾನಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ.