ಪ್ರತೀ ಹಣ್ಣಿನಲ್ಲೂ ಒಂದೊಂದು ಆರೋಗ್ಯಕರ ಗುಣಗಳಿರುತ್ತದೆ. ಹಾಗಾಗಿ ಹಣ್ಣು ತಿನ್ನೋದು ನಮ್ಮ ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ನಾವು ಹಣ್ಣು ತಿನ್ನುವಾಗ ಹಲವು ತಪ್ಪುಗಳನ್ನ ಮಾಡ್ತೇವೆ. ಆದ್ರೆ ಅದು ತಪ್ಪು ಅನ್ನೋದು ಮಾತ್ರ ನಮಗೆ ಗೊತ್ತಾಗುವುದಿಲ್ಲ. ಹಾಗಾಗಿ ಹಣ್ಣುಗಳನ್ನ ತಿನ್ನುವಾಗ ನಾವು ಮಾಡಬಾರದ ತಪ್ಪುಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು, ಸಿಹಿ ಹಣ್ಣಿನೊಂದಿಗೆ ಹುಳಿ ಹಣ್ಣನ್ನು ಬೆರೆಸಿ ತಿನ್ನೋದು. ನಾವು ಬಾಳೆ ಹಣ್ಣಿನೊಂದಿಗೆ ಕಿತ್ತಳೆ ಹಣ್ಣನ್ನ ಬೆರೆಸಿ ತಿನ್ನಬಾರದು. ಯಾಕಂದ್ರೆ ಬಾಳೆಹಣ್ಣು ಸಿಹಿ ಹಣ್ಣು ಮತ್ತು ಕಿತ್ತಳೆ ಹಣ್ಣು ಹುಳಿ ಹಣ್ಣು. ಹಾಗಾಗಿ ಕಿತ್ತಳೆ, ಸ್ಟಾರ್ ಫ್ರೂಟ್, ಇನ್ನಿತರ ಹುಳಿ ಹಣ್ಣುಗಳನ್ನು ಸಿಹಿ ಹಣ್ಣಿನೊಂದಿಗೆ ತಿನ್ನಬಾರದು. ಬಾಳೆಹಣ್ಣು, ಚಿಕ್ಕು ಹಣ್ಣು, ಆ್ಯಪಲ್ ಇವುಗಳನ್ನ ಒಟ್ಟಿಗೆ ತಿನ್ನಬಹುದು.
ಎರಡನೇಯದಾಗಿ ನೀವು ಹಣ್ಣಿಗೆ ಚಾಟ್ ಮಸಾಲಾ, ಖಾರದ ಪುಡಿ ಅಥವಾ ಉಪ್ಪು ಬೆರೆಸಿ ತಿನ್ನಬಾರದು. ಯಾಕಂದ್ರೆ ನೀವು ಚಾಟ್ ಮಸಾಲಾ ಅಥವಾ ಉಪ್ಪು ಸೇರಿಸಿದಾಗ, ಆ ಹಣ್ಣು ನೀರು ಬಿಡುತ್ತದೆ. ಆಗ ಆ ಹಣ್ಣಿನ ರಸದ ಜೊತೆ, ಅದರಲ್ಲಿರುವ ಪೋಷಕಾಂಶಗಳು ಕೂಡ ಹೋಗುತ್ತದೆ. ಹಾಗಾಗಿ ಹಣ್ಣುಗಳಿಗೆ ಚಾಟ್ ಮಸಾಲ ಸೇರಿಸದೇ, ಹಾಗೆ ಸೇವಿಸಿದರೆ ಉತ್ತಮ.
ಮೂರನೇಯದಾಗಿ ಊಟ ಮಾಡಿದ ಬಳಿಕ ಹಣ್ಣು ತಿನ್ನುವ ತಪ್ಪನ್ನ ಎಂದಿಗೂ ಮಾಡಬೇಡಿ. ಕೆಲವರಿಗೆ ಊಟದ ಬಳಿಕ ಸಿಹಿ ತಿನ್ನಬೇಕು ಎನ್ನಿಸುತ್ತದೆ. ಹಾಗಾಗಿ ಕೆಲವರು ಹಣ್ಣನ್ನ ತಿನ್ನುತ್ತಾರೆ. ನೀವು ಊಟವಾದ ಬಳಿಕ ಬಾಳೆ ಹಣ್ಣನ್ನು ತಿನ್ನಬಹುದು. ಆದರೆ ನೀವು ಬೌಲ್ ತುಂಬ ಹಣ್ಣುಗಳನ್ನು ಹಾಕಿ ತಿನ್ನಬೇಕೆಂದಿದ್ದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದ್ರೆ ತುಂಬಾ ಒಳ್ಳೆಯದು. ಅಥವಾ ತಿಂಡಿ ತಿಂದ ಬಳಿಕ ಮತ್ತು ಊಟದ ಮಧ್ಯದ ಸಮಯದಲ್ಲಿ ತಿನ್ನಬಹುದು. ರಾತ್ರಿ ಹಣ್ಣು ತಿನ್ನುವುದು ಅಷ್ಟು ಉತ್ತಮವಲ್ಲ.
ಇನ್ನು ನಾಲ್ಕನೇಯದಾಗಿ ಹಣ್ಣು ತಿನ್ನುವ ಮೊದಲು ಅದನ್ನು ತೊಳೆದು ಸ್ವಚ್ಛಗೊಳಿಸಬೇಕು ನಿಜ. ಆದ್ರೆ ಹಣ್ಣು ಕತ್ತರಿಸಿದ ಬಳಿಕ ಅದನ್ನ ತೊಳೆದರೆ, ಅದರಲ್ಲಿರುವ ಪೋಷಕಾಂಶಗಳು ಕೂಡ ತೊಳೆದು ಹೋಗುತ್ತದೆ. ಹಾಗಾಗಿ ಕತ್ತರಿಸುವ ಮುನ್ನವೇ ಹಣ್ಣನ್ನು ಸ್ವಚ್ಛವಾಗಿ ತೊಳೆಯಿರಿ.