- Advertisement -
ಭಾರತದಲ್ಲಿ ರಾಮಮಂದಿರದ ಬಗ್ಗೆ ಮಾತನಾಡಿದರೆ, ಎಲ್ಲರಿಗೂ ಮೊದಲು ನೆನಪಿಗೆ ಬರುವುದು, ಅಯೋಧ್ಯೆಯಲ್ಲಿ ತಯಾರಾಗುತ್ತಿರುವ ರಾಮಮಂದಿರ. ಆದ್ರೆ ನಾವಿಂದು ಭಾರತದಲ್ಲಿರುವ 8 ಪ್ರಸಿದ್ಧ ರಾಮಮಂದಿರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
- ರಾಮ ಜನ್ಮ ಭೂಮಿ ಅಯೋಧ್ಯೆಯ ರಾಮ ಮಂದಿರ. ಈ ಮಂದಿರ ಕಟ್ಟುವ ಕೆಲಸ ನಡೆಯುತ್ತಿದ್ದು, ಇನ್ನು ಕೆಲ ವರ್ಷಗಳಲ್ಲೇ, ಸುಂದರವಾದ, ರಾಮನ ಬೃಹತ್ ಮೂರ್ತಿ ಇರುವ ರಾಮ ಮಂದಿರ ನಿರ್ಮಾಣವಾಗುತ್ತದೆ. ಈಗಲೇ ಹಲವರು ಈ ರಾಮ ಮಂದಿರಕ್ಕೆ ಹೋಗಲು ಕಾತುರದಿಂದ ಕಾಯುತ್ತಿದ್ದಾರೆ.
- ಕೋದಂಡ ರಾಮ ದೇವಸ್ಥಾನ ಹಂಪಿ. ತುಂಗಭದ್ರಾ ನದಿ ತಟದಲ್ಲಿ ಇರುವ ಈ ದೇವಸ್ಥಾನದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣನನ್ನು ಪೂಜಿಸಲಾಗುತ್ತದೆ. ಹೊಯ್ಸಳ ಶೈಲಿ ಮತ್ತು ದ್ರಾವೀಡ ಶೈಲಿಯಲ್ಲಿ ಈ ದೇವಸ್ಥಾನವನ್ನ ನಿರ್ಮಾಣ ಮಾಡಲಾಗಿದೆ.
- ಕೋದಂಡ ರಾಮ ದೇವಸ್ಥಾನ. ಇದು ಆಂಧ್ರಪ್ರದೇಶದ ಒಂಟಿಮಿತ್ತಾ ಎಂಬಲ್ಲಿದೆ. ವಿಜಯನಗರ ಶೈಲಿಯಲ್ಲಿರುವ ಕೋದಂಡರಾಮ ದೇವಸ್ಥಾನದ ಶಿಲ್ಪ ಕಲೆ ಎಲ್ಲರ ಗಮನ ಸೆಳೆಯುವಂತಿದೆ. ಇಲ್ಲಿ ವರ್ಷಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಈ ದೇವಸ್ಥಾನವನ್ನ ಕೋದಂಡರಾಮನ ಭಕ್ತರಾದ ವೋಂತುಡು ಮತ್ತು ಮಿತ್ತುಡು ಎಂಬುವವರು ನಿರ್ಮಿಸಿದ್ದಾರೆ. ಇವರಿಬ್ಬರು ಮೊದಲು ಕಳ್ಳರಾಗಿದ್ದು, ನಂತರ ಕೋದಂಡ ರಾಮನ ಭಕ್ತರಾದರು. ಮಂದಿರ ಕಟ್ಟಿದ ಬಳಿಕ, ಇಲ್ಲೇ ಕಲ್ಲಾಗಿದ್ದಾರೆಂದು ಹೇಳಲಾಗುತ್ತದೆ.
- ತಿರುವಾಂಗಡ ಶ್ರೀ ರಾಮಸ್ವಾಮಿ ದೇವಸ್ಥಾನ ಕೇರಳ. ಇದು ಕೇರಳದ ತಲಸ್ಸೆರಿ ಎಂಬಲ್ಲಿದೆ. ಇದನ್ನ ಬ್ರಾಸ್ ಪಗೋಡಾ ಅಂತಲೂ ಕರೆಯಲಾಗತ್ತೆ. ಪ್ರತಿವರ್ಷ ವಿಶು ಅಂದ್ರೆ ಸೌರಮಾನ ಯುಗಾದಿಯ ವೇಳೆ ಇಲ್ಲಿ ಜಾತ್ರೆ ನಡೆಯುತ್ತದೆ.
- ಶ್ರೀ ರಾಮಸ್ವಾಮಿ ದೇವಸ್ಥಾನ ತಮಿಳುನಾಡು. ದೇವಸ್ಥಾನಗಳ ಊರು ಅಂತಾನೇ ಕರೆಯಲ್ಪಡುವ ಕುಂಭಕೋಣಂನಲ್ಲಿ ಈ ದೇವಸ್ಥಾನವಿದೆ. ತಂಜಾವೂರು ರಾಜನಾದ ಅಚ್ಯುತಪ್ಪಾ ನಾಯಕನ ಅವಧಿಯಲ್ಲಿ ಈ ದೇವಸ್ಥಾನವನ್ನ ನಿರ್ಮಾಣ ಮಾಡಲು ಶುರು ಮಾಡಲಾಗಿತ್ತು. ರಘುನಾಥ ನಾಯಕನ ಅವಧಿಗೆ ನಿರ್ಮಾಣ ಸಂಪೂರ್ಣಗೊಂಡಿತು.
- ಕಾಲಾರಾಮ ದೇವಸ್ಥಾನ. ಇದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪಂಚವಟಿಯಲ್ಲಿದೆ. ಪಂಚವಟಿಯಲ್ಲಿರುವ ಪುರಾತನ ದೇವಸ್ಥಾನಗಳಲ್ಲಿ ಕಾಲಾರಾಮ ದೇವಸ್ಥಾನ ಕೂಡ ಒಂದು. ಇಲ್ಲಿ ರಾಮನ ಮೂರ್ತಿ ಕಪ್ಪಾಗಿದ್ದು, ಇದೇ ಕಾರಣಕ್ಕೆ ಈ ಮೂರ್ತಿಯನ್ನ ಕಾಲಾರಾಮ್ ದೇವಸ್ಥಾನವೆಂದು ಕರೆಯಲಾಗುತ್ತದೆ.
- ರಾಮ ಮಂದಿರ ಓಡಿಶಾ. ಓಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಈ ದೇವಸ್ಥಾನವಿದ್ದು, ಇಲ್ಲಿ ಬರೀ ರಾಮನಷ್ಟೇ ಅಲ್ಲದೇ, ಸೀತೆ, ಹನುಮ, ಲಕ್ಷ್ಮಣನನ್ನು ಕೂಡ ಪೂಜಿಸಲಾಗುತ್ತದೆ. ಇಲ್ಲಿನ ಶಿಲ್ಪಕಲೆ ಅತ್ಯದ್ಭುತವಾಗಿದೆ.
- ತೆಲಂಗಾಣದ ಭದ್ರಾಚಲಂ ರಾಮಮಂದಿರ. ಗೋದಾವರಿ ನದಿ ತೀರದಲ್ಲಿರುವ ಈ ದೇವಸ್ಥಾನವನ್ನ ರಾಮ- ಸೀತಾ ದೇವಸ್ಥಾನವೆಂದು ಕರೆಯಲಾಗತ್ತೆ. ಇದು ಬರೀ ದೇವಸ್ಥಾನವಷ್ಟೇ ಅಲ್ಲದೇ, ಪ್ರವಾಸಿ ತಾಣವೂ ಆಗಿದೆ.
- Advertisement -