Health Tips: ನಿಮ್ಮ ಮಗುವಿಗೆ ಎಷ್ಟೇ ಓದಿದರೂ, ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲವೇ..? ಅಥವಾ ಒಂದು ಬದಿ ಇಟ್ಟ ವಸ್ತುವನ್ನು ಹುಡುಕಲು ನೀವು ಹೆಚ್ಚು ಕಷ್ಟಪಡುತ್ತಿದ್ದೀರಾ..? ನಿಮಗೂ ನೆನಪಿನ ಶಕ್ತಿಯ ಸಮಸ್ಯೆ ಇದ್ದಲ್ಲಿ, ನಾವಿಂದು ಹೇಳುವ ಟಿಪ್ಸ್ ಅನುಸರಿಸಿ.
ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಬೇಕು ಅಂದ್ರೆ, ಅವರು ಕಲಿಯುವ ವಿದ್ಯೆಯಲ್ಲಿ ಅವರಿಗೆ ಆಸಕ್ತಿ ಬರುವ ಹಾಗೆ ಮಾಡಿ. ಪುಟ್ಟ ಮಕ್ಕಳಿಗೆ ನೀವು ಕಲರ್‌ಫುಲ್ ಆಗಿ ಕಥೆ ಹೇಳಿದಾಗ, ಆ ಮಗು ಅದನ್ನು ಬೇಗನೆ ಹಿಡಿದಿಟ್ಟುಕೊಳ್ಳುತ್ತದೆ. ಅದೇ ರೀತಿ ದೊಡ್ಡ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲು, ಟ್ರಿಕ್ಸ್ ಹೇಳಿಕೊಡಿ.
ಎರಡನೇದಾಗಿ ಮಕ್ಕಳಿಗೆ ಉತ್ತಮ ಪೋಷಕಾಂಶವುಳ್ಳ ಆಹಾರ ಕೊಡಿ. ನೆನೆಸಿ ಸಿಪ್ಪೆ ತೆಗೆದ ಬಾದಾಮಿ, ಅಖ್ರೋಟ್, ಶೇಂಗಾ, ಹೆಸರು ಕಾಳು, ಎಳನೀರು ಇತ್ಯಾದಿ ಆರೋಗ್ಯಕರ ಆಹಾರಗಳು ಮಕ್ಕಳ ಮಾನಸಿಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಸಾಧ್ಯವಾದಲ್ಲಿ ಹೆಚ್ಚು ಬ್ರಾಹ್ಮಿ ಎಲೆ ಬಳಸಿ.
ಇನ್ನು ದೊಡ್ಡವರಿಗೂ ಜೀವನದಲ್ಲಿ ತುಂಬಾ ಒತ್ತಡಗಳಿಗೆ ಎಂದಾಗ ಮಾತ್ರ ಮರೆವು ಶುರುವಾಗುತ್ತದೆ. ಹಾಗಾಗಿ ಸದಾ ಚೈತನ್ಯದಿಂದಿರುವಂತೆ ನೋಡಿಕೊಳ್ಳಿ. ಅಕ್ಕ ಪಕ್ಕದ ಮನೆಯವರು, ಸ್ನೇಹಿತರು, ಸಂಬಂಧಿಕರು ಹೀಗೆ ನಿಮ್ಮ ಆತ್ಮೀಯರೊಂದಿಗೆ ಸಮಯ ಕಳೆಯಿರಿ. ನಗು ನಗುತ್ತಲಿರಿ. ಮಕ್ಕಳಿದ್ದರೆ, ಅವರೊಂದಿಗೆ ಸಮಯ ಕಳೆಯಿರಿ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ನೆನಪಿನ ಶಕ್ತಿಯೂ ಚೆನ್ನಾಗಿರುತ್ತದೆ.
ಮನುಷ್ಯನಿಗೆ 8 ಗಂಟೆಗಳ ಕಾಲ ಉತ್ತಮ ನಿದ್ರೆ ಬೇಕು. ಹಾಗಾಗಿ 8 ಗಂಟೆಗಳ ಕಾಲ, ಚೆನ್ನಾಗಿ ನಿದ್ದೆ ಮಾಡಿ, ಬೆಳಿಗ್ಗೆ ಬೇಗ ಏಳಿ. ಎದ್ದು ಧ್ಯಾನಾದಿಗಳನ್ನು ಮಾಡಿದರೆ, ನಿಮ್ಮ ನೆನಪಿನ ಶಕ್ತಿ ಉತ್ತಮವಾಗಿರುತ್ತದೆ. ಧ್ಯಾನ ಯೋಗ, ನಿದ್ರೆ ಇವೆಲ್ಲವೂ ಮನುಷ್ಯನ ಆರೋಗ್ಯ ಅಭಿವೃದ್ಧಿಯಾಗುವಂತೆ ಮಾಡುತ್ತದೆ. ಮಲಗಿ ಎದ್ದ ಬಳಿಕ ಸೂರ್ಯನ ತಿಳಿ ಬಿಸಿಲಿಗೆ ನಿಂತು, ವಿಟಾಮಿನ್ ಡಿ ತೆಗೆದುಕೊಳ್ಳುವುದನ್ನು ಮರೆಯಬೇಡಿ. ನಿದ್ದೆ ಸರಿ ಇಲ್ಲದಿದ್ದರೆ, ನಿಮ್ಮ ದೇಹದಲ್ಲಿ ಚೈತನ್ಯವಿರುವುದಿಲ್ಲ. ನೆನಪಿನ ಶಕ್ತಿಯೂ ಕ್ಷೀಣಿಸುತ್ತದೆ.
ಈ ಮೊದಲೇ ಹೇಳಿದ ಹಾಗೆ ದೇಹದಲ್ಲಿ ಪೋಷಕಾಂಶಗಳ ಕೊರತೆ ಇದ್ದಾಗಲೇ, ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಹಿರಿಯರು ಕೂಡ ನೆನೆಸಿ ಸಿಪ್ಪೆ ತೆಗೆದ ಬಾದಾಮಿ, ಅಖ್ರೋಟ್, ಶೇಂಗಾ, ಹೆಸರು ಕಾಳು, ಎಳನೀರು ಇತ್ಯಾದಿ ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು.




