Wednesday, February 5, 2025

Latest Posts

Sandalwood News: ಟಾಕ್ಸಿಕ್ ಗ್ಲಿಂಪ್ಸ್ ಮೈಲಿಗಲ್ಲು! ಪುಷ್ಪ2 ದಾಖಲೆ ಉಡೀಸ್

- Advertisement -

Sandalwood News: ಆರಂಭದಿಂದಲೂ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಪೂರಕ ಅನ್ನುವಂತೆ ಅವರ ಬರ್ತ್ ಡೇಗೆ ರಿಲಿಸ್ ಆದ ಗ್ಲಿಂಪ್ಸ್ ಸಾಕ್ಷಿ ಅನ್ನಬಹುದು. ಅದಷ್ಟೇ ಅಲ್ಲ, ಈಗ ಟಾಕ್ಸಿಕ್ ಗ್ಲಿಂಪ್ಸ್ ಹೊಸ ದಾಖಲೆ ಬರೆದಿದೆ ಅಂದರೆ ನಂಬಲೇಬೇಕು. ಒಂದು ನಿಮಿಷದ ಸಣ್ಣ ಝಲಕ್ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಧೂಳೆಬ್ಬಿಸಿದೆ. ರಿಲೀಸ್ ಆದ ಒಂದೇ ದಿನದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ಹಿಟ್ ಚಿತ್ರ KGF’-2 ನಂತರ ಯಶ್ ಕ್ಯಾಮೆರಾ ಮುಂದೆ ಬರುತ್ತಿರುವ ಸಿನಿಮಾ ಇದು. ಗೀತು ಮೋಹನ್ ದಾಸ್ ಆಕ್ಷನ್ ಕಟ್ ಇರುವ ಈ ಚಿತ್ರ ಸುಮಾರು 300 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗುತ್ತಿದೆ ಎನ್ನಲಾಗುತ್ತಿದ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಯಶ್ ಕೂಡ ಟಾಕ್ಸಿಕ್ ಸಿನಿಮಾಗೆ ಹಣ ಹಾಕಿದ್ದಾರೆ. ಅಂದಹಾಗೆ, ಇದು 70ರ ದಶಕದ ಕಥೆ ಹೊಂದಿರುವ ಸಿನಿಮಾ.

ಇನ್ನು, ಅವರ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿರುವ ಗ್ಲಿಂಪ್ಸ್ ನಲ್ಲಿ ಯಾವುದೇ ಡೈಲಾಗ್ ಇಲ್ಲ. ಹೀರೊ ವಿಂಟೇಜ್ ಕಾರ್ ನಿಂದ ಕೆಳಗಿದು ಕಲರ್ ಫುಲ್ ಆಗಿರುವ ಕ್ಲಬ್‌ವೊಂದರ ಒಳಗೆ ಎಂಟ್ರಿಯಾಗುವ ಸಖತ್ ಸೀನ್ ಗ್ಲಿಂಪ್ಸ್ ನಲ್ಲಿದೆ. ಇನ್ನು, ಯಶ್ ಅವರ ನ್ಯೂ ಲುಕ್, ಅವರ ಡ್ರೆಸ್ ಕೋಡ್, ಸಿಗಾರ್ ಮತ್ತು ಖಡಕ್ ಲುಕ್ ಗೆ ಫ್ಯಾನ್ಸ್ ಅಷ್ಟೇ ಅಲ್ಲ, ಸಿನಿಮಂದಿ ಕೂಡ ಫಿದಾ ಆಗಿದ್ದಾರೆ.

ನೀವು ನಂಬಲೇಬೇಕು, ಕೇವಲ 24 ಗಂಟೆಗಳಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ‘ಟಾಕ್ಸಿಕ್’ ಗ್ಲಿಂಪ್ಸ್ 3 ಕೋಟಿ 60 ಲಕ್ಷ ವೀವ್ಸ್ ಪಡೆದು ದಾಖಲೆ ಮಾಡಿದೆ. 5 ಲಕ್ಷದ 51 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಹಾಗಾಗಿ ಸದ್ಯ ಇದು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಎನ್ನಲಾಗುತ್ತಿದೆ. ಇದಕ್ಕೂ ಮುನ್ನ ‘ಪುಷ್ಪ-2’ ಚಿತ್ರದ ಗ್ಲಿಂಪ್ಸ್ 24 ಗಂಟೆಗಳಲ್ಲಿ 2 ಕೋಟಿ 70 ಲಕ್ಷ ವೀವ್ಸ್ ಸಾಧಿಸಿತ್ತು. ಕೇವಲ 13 ಗಂಟೆಗಳಲ್ಲಿ ‘ಟಾಕ್ಸಿಕ್’ ಗ್ಲಿಂಪ್ಸ್ ಅದನ್ನು ಮೀರಿಸಿದೆ.

ಜ್ಯೂ. ಎನ್‌ಟಿಆರ್ ಅವರ ‘ದೇವರ’ ಚಿತ್ರದ ಗ್ಲಿಂಪ್ಸ್ 2 ಕೋಟಿ 17 ಲಕ್ಷ ವೀವ್ಸ್ ಪಡೆದು 3ನೇ ಸ್ಥಾನದಲ್ಲಿದೆ. ‘ಗುಂಟೂರು ಖಾರಂ’ ಚಿತ್ರದ ಝಲಕ್ ನಾಲ್ಕನೇ ಸ್ಥಾನದಲ್ಲಿದ್ದರೆ, ತಮಿಳಿನ ‘ಕಂಗುವ’ ಸಿನಿಮಾ ಗ್ಲಿಂಪ್ಸ್ 5ನೇ ಸ್ಥಾನದಲ್ಲಿದೆ. ಈ ಹಿಂದೆ ‘ಕೆಜಿಎಫ್’ ವರ್ಸಸ್ ‘ಪುಷ್ಪ’ ಎನ್ನುವ ಚರ್ಚೆ ನಡೆದಿತ್ತು. ಆದರೆ ಈಗ ‘ಟಾಕ್ಸಿಕ್’ ವರ್ಸಸ್ ‘ಪುಷ್ಪ’-2 ಎಂಬ ಮಾತುಗಳು ಚಾಲ್ತಿಯಲ್ಲಿವೆ.

ಅಲ್ಲು ಅರ್ಜುನ್ ಅವರ ‘ಪುಷ್ಪ’-2 ಬಾಕ್ಸಾಫೀಸ್ ಶೇಕ್ ಮಾಡುತ್ತಿದೆ. 1700 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸದ್ದು ಮಾಡಿದ್ದಾಗಿದೆ. ‘ಕೆಜಿಎಫ್‌-2’ ಹಾಗೂ ‘ಬಾಹುಬಲಿ’-2 ಬಾಕ್ಸಾಫೀಸ್‌ ಗಳಿಕೆಯನ್ನು ಹಿಂದಿಕ್ಕಿದೆ ಎಂದು ಹೇಳಲಾಗುತ್ತಿದೆ. ಟಿಕೆಟ್ ದರವನ್ನು ಗಣನೀಯವಾಗಿ ಹೆಚ್ಚಿಸಿದ್ದೇ ಇದಕ್ಕೆ ಕಾರಣ ಎನ್ನುವ ಚರ್ಚೆ ಕೂಡ ನಡೆದಿದೆ. ‘ಪುಷ್ಪ’-2 ದಾಖಲೆಯನ್ನು ‘ಟಾಕ್ಸಿಕ್’ ಮುರಿಯುತ್ತದೆ ಎಂಬ ಮಾತುಗಳು ಈಗ ಶುರುವಾಗುತ್ತಿವೆ. ‘ಟಾಕ್ಸಿಕ್’ ಚಿತ್ರವನ್ನು ಏಪ್ರಿಲ್ 10ಕ್ಕೆ ತೆರೆಗೆ ತರುವ ಪ್ರಯತ್ನವನ್ನು ಸಿನಿತಂಡ ಮಾಡಿತ್ತು. ಆದರೆ ಶೂಟಿಂಗ್ ಲೇಟ್ ಆಗಿದ್ದರಿಂದ ರಿಲೀಸ್ ಡೇಟ್ ಕೂಡ ಮುಂದಕ್ಕೆ ಹೋಗಿದೆ.

ಯಶ್ ಬರ್ತ್‌ಡೇ ಟೀಸರ್‌ನಲ್ಲೂ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನುವ ಮಾಹಿತಿ ಇಲ್ಲ. ಯಶ್ ನಟಿಸಿದ ಸಿನಿಮಾ ತೆರೆಗೆ ಬಂದು ಬರೋಬ್ಬರಿ 2 ವರ್ಷ ಕಳೆದಿದೆ. ಅಭಿಮಾನಿಗಳು ಆದಷ್ಟು ಬೇಗ ‘ಟಾಕ್ಸಿಕ್’ ಸಿನಿಮಾ ತೆರೆಮೇಲೆ ನೋಡಲು ಕಾಯ್ತಾ ಇದ್ದಾರೆ. ಡ್ರಗ್ಸ್ ಮಾಫಿಯಾ ಸುತ್ತಾ ‘ಟಾಕ್ಸಿಕ್’ ಕಥೆ ಇದೆ ಎಂದು ಹೇಳಲಾಗುತ್ತಿದೆ. ಇದು 60-70ರ ದಶಕದ ಕಥೆ ಅನ್ನುವುದಕ್ಕೆ ಗ್ಲಿಂಪ್ಸ್ ಝಲಕ್ ಕೂಡ ಹೇಳುತ್ತಿದೆ. ಇನ್ನು, ಅದೊಂದು ಗ್ಯಾಂಗ್ ಸ್ಟರ್ ಕಥೆ ಅನ್ನುವುದನ್ನೂ ಹೇಳುತ್ತಿದೆ.

ಇನ್ನು, ಚಿತ್ರದಲ್ಲಿ ನಯನತಾರ ಯಶ್ ಅವರ ಸಹೋದರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಕಿಯಾರಾ ಅಡ್ವಾಣಿ ‘ಟಾಕ್ಸಿಕ್’ ಗೆ ನಾಯಕಿ. ಇನ್ನುಳಿದಂತೆ ಹುಮಾ ಖುರೇಷಿ, ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹಾಲಿವುಡ್ ಆರ್ಟಿಸ್ಟ್ , ತಂತ್ರಜ್ಷರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಹುತೇಕ ವಿದೇಶದ ಭಾಷೆಗಳಲ್ಲೂ ಸಿನಿಮಾ ಡಬ್ ಆಗಲಿದೆ.

ವಿಜಯ್ ಭರಮಸಾಗರ್‌, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss