Sandalwood News: ಸಾಮಾನ್ಯವಾಗಿ ಸಿನಿಮಾ ಸ್ಟಾರ್ಸ್ ಅಂದರೆ, ಅವರಿಗೇ ಆದಂತಹ ಅಪಾರ ಅಭಿಮಾನಿಗಳಿರೋದು ಕಾಮನ್. ತಮ್ಮ ಪ್ರೀತಿಯ ಹೀರೋಗಳನ್ನು ತಲೆಮೇಲೆ ಹೊತ್ತು ಮೆರೆಯೋ ಅಭಿಮಾನಿಗಳಿದ್ದಾರೆ. ಮನಸ್ಸೊಳಗಷ್ಟೇ ಅಲ್ಲ, ಎದೆ ಮೇಲೂ ಅವರ ಭಾವಚಿತ್ರ, ಹೆಸರಿನ ಟ್ಯಾಟೋ ಹಾಕಿಸಿಕೊಂಡು ಪ್ರೀತಿಯ ಅಭಿಮಾನ ತೋರುವ ಫ್ಯಾನ್ಸ್ ಇದ್ದಾರೆ. ಎಲ್ಲದ್ದಕ್ಕೂ ಹೆಚ್ಚಾಗಿ ಆ ಹೀರೋಗಳ ಸಿನಿಮಾಗಳು ರಿಲೀಸ್ ಆಗುವ ದಿನದಂದು ಸ್ಟಾರ್ ಫೋಟೋ ಹಿಡಿದು ಜೈ ಕಾರ ಹಾಕ್ತಾರೆ, ಕಟೌಟ್ ಗೆ ಹಾರ ಹಾಕಿ ಹಾಲಿನ ಅಭಿಷೇಕ ಮಾಡ್ತಾರೆ. ಇದಿಷ್ಟೇ ಅಲ್ಲ, ಸಿನಿಮಾ ನೋಡುವ ಸಲುವಾಗಿ ಥಿಯೇಟರ್ ಮುಂದೆ ಕಿಕ್ಕಿರಿದ ಜನಜಂಗುಳಿ ಮಧ್ಯೆ ಕೆಲವು ಫ್ಯಾನ್ಸ್ ಕಾಲ್ತುಳಿತಕ್ಕೊಳಗಾಗಿ ಸಾವನ್ನಪ್ಪಿರೋ ಉದಾಹರಣೆಯೂ ಇದೆ. ಇದನ್ನು ಅಭಿಮಾನ ಅನ್ನಬೇಕೋ, ಹುಚ್ಚಾಭಿಮಾನ ಅನ್ನಬೇಕೋ ಗೊತ್ತಿಲ್ಲ.
ಆದರೆ, ಈ ಅಭಿಮಾನ ಇನ್ನೂ ಒಂದು ಹಂತಕ್ಕೆ ಹೋಗಿದೆ ಅಂದರೆ ನೀವು ನಂಬಲೇಬೇಕು. ಹೌದು, ಒಂದು ಕಾಲದಲ್ಲಿ ಸ್ಟಾರ್ ಪಟ್ಟ ಅಲಂಕರಿಸಿದ್ದ ಬಾಲಿವುಡ್ ಹೀರೋ ಒಬ್ಬರ ಅಭಿಮಾನಿಯೊಬ್ಬರು ಅವರ ಮೇಲಿನ ಅಭಿಮಾನದಿಂದಾಗಿ ತಮ್ಮ 72 ಕೋಟಿ ರೂ. ಆಸ್ತಿಯನ್ನೇ ಅವರ ಹೆಸರಿಗೆ ವಿಲ್ ಬರದಿಟ್ಟಿದ್ದಾರೆ ಅಂದರೆ ನಿಜಕ್ಕೂ ನಂಬಲೇಬೇಕು.
ಅಷ್ಟಕ್ಕೂ ಅಂತಹ ಅಭಿಮಾನಿಯನ್ನು ಹೊಂದಿದ ಆ ಸ್ಟಾರ್ ನಟ ಬೇರಾರೂ ಅಲ್ಲ, ಬಾಲಿವುಡ್ ನ ಸಂಜಯ್ ದತ್. ಯೆಸ್, ಸಂಜಯ್ ದತ್ ಒಂದು ಕಾಲದ ಬಹು ಬೇಡಿಕೆಯ ಹೀರೋ. ಈಗಲೂ ಆ ಬೇಡಿಕೆ ಕಮ್ಮಿಯಾಗಿಲ್ಲ ಬಿಡಿ. ಬಾಲಿವುಡ್ ಅಂಗಳದಲ್ಲಿ ಸಂಜಯ್ ದತ್ ಅಂದರೆ ಅದೊಂಥರಾ ಬಿಗ್ ಕ್ರೇಜ್. ಬಾಲಿವುಡ್ ಜೊತೆ ಸ್ಯಾಂಡಲ್ ವುಡ್ ನಂಟು ಹೊಂದಿರುವ ಸಂಜಯ್ ದತ್ ಇದೀಗ ಕನ್ನಡದ ಸಿನಿಮಾಗಳಲ್ಲೂ ನಟಿಸಿದ್ದಾರೆ. ಅವರ ಹೀರೋಯಿಸಂ ಹೇಗಿತ್ತೋ, ಅವರ ವಿವಾದಗಳು ಕೂಡ ಹಾಗೆಯೇ ಇದ್ದವು. ಸಂಜಯ್ ದತ್ ಒಂದು ರೀತಿ ಬ್ಯಾಡ್ ಬಾಯ್ ಆಗಿದ್ದೂ ಉಂಟು. 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅವರ ಹೆಸರು ತಳಕು ಹಾಕಿಕೊಂಡಿತ್ತು. ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ ಸಂಜಯ್ ದತ್ ಜೈಲಿಗೂ ಹೋಗಿದ್ದರು. ಅದಷ್ಟೇ ಅಲ್ಲ, ಇತ್ತೀಚಿನ ವರ್ಷಗಳಲ್ಲಿ ಅವರು ಕ್ಯಾನ್ಸರ್ ವಿರುದ್ಧ ಹೋರಾಡಿಯೂ ಗೆದ್ದು ಬಂದವರು. ಇಂತಹ ಸಂಜಯ್ ದತ್ ಗೆ ಇಡೀ ಬಾಲಿವುಡ್ ಗೆ ಬಾಲಿವುಡ್ಡೇ ಸಲಾಂ ಅನ್ನುತ್ತದೆ. ಅಂಥ ಸಂಜಯ್ ದತ್ ಗೆ ಭಾರತ ಮಾತ್ರವಲ್ಲ, ವಿದೇಶದಲ್ಲೂ ಫ್ಯಾನ್ಸ್ ಇದ್ದಾರೆ.
ಅಂತಹ ಫ್ಯಾನ್ಸ್ ನಡುವೆ ಇಲ್ಲೊಬ್ಬ ವೀರಾಭಿಮಾನಿ ಬಗ್ಗೆ ಹೇಳಲೇಬೇಕು. ಅವರ ಮಹಿಳಾ ಅಭಿಮಾನಿಯೊಬ್ಬರು ತಮ್ಮ 72 ಕೋಟಿ ರೂ. ಆಸ್ತಿಯನ್ನೇ ತಮ್ಮ ಪ್ರೀತಿಯ ಹೀರೋ ಸಂಜಯ್ ದತ್ ಅವರ ಹೆಸರಿಗೆ ಬರೆದುಬಿಟ್ಟಿದ್ದರು. ಇದು ನಿಮಗೆ ಅಚ್ಚರಿ ಎನ್ನಿಸಿದರು ನಿಜ. ಅಭಿಮಾನ ಇರಬೇಕು. ಆದರೆ, ಇಂತಹ ಹುಚ್ಚಾಭಿಮಾನವೇ ಎಂಬ ಪ್ರಶ್ನೆ ಕೂಡ ಎದುರಾಗೋದು ಸಹಜ. ಇದು ನಿಜ ಕೂಡ. ಸಾಮಾನ್ಯವಾಗಿ ಮಹಿಳಾ ಫ್ಯಾನ್ಸ್ ಆ ಹೀರೋನ ಫೋಟೋ ಇಟ್ಟುಕೊಳ್ಳುತ್ತಾರೆ. ತಮ್ಮ ಬೆಡ್ ರೂಮ್ ನಲ್ಲಿ ಫೋಟೋ ಅಂಟಿಸಿಕೊಳ್ಳೋದು ಉಂಟು. ಆದರೆ, ಸಂಜಯ್ ದತ್ ಅವರ ಅಪ್ಪಟ್ಟ ಅಭಿಮಾನಿ ಮುಂಬೈ ಮೂಲದ ನಿಶಾ ಪಾಟೀಲ್ ಎಂಬ 62 ವರ್ಷದ ಅಭಿಮಾನಿ ಸಾಯುವ ಮೊದಲು 72 ಕೋಟಿ ರೂ. ಆಸ್ತಿಯನ್ನು ಸಂಜಯ್ ದತ್ ಅವರಿಗೆ ಸೇರಬೇಕು ಅಂತ ವಿಲ್ ಬರೆದಿಟ್ಟಿದ್ದರು.
ಎಲ್ಲಾ ಸರಿ, ಅಷ್ಟೊಂದು ಮೊತ್ತದ ಆಸ್ತಿಯನ್ನು ಸಂಜಯ್ ದತ್ ಮೇಲಿನ ಪ್ರೀತಿಗೆ ವಿಲ್ ಬರೆದಿಟ್ಟ ಆ ಅಭಿಮಾನಿ ಯಾರು ಅನ್ನೋದು ಸ್ವತಃ ಸಂಜಯ್ ದತ್ ಅವರಿಗೇ ಗೊತ್ತಿರಲಿಲ್ಲ. ಪ್ರೀತಿಯ ಅಭಿಮಾನಿಯೊಬ್ಬರು ಹೀಗೆ ತಮ್ಮ ಹೆಸರಿಗೆ 72 ಕೋಟಿ ರೂ. ಆಸ್ತಿ ಬರೆದಿರುವ ವಿಚಾರ ಗೊತ್ತಾದಾಗ ಸಂಜಯ್ ದತ್ ಗೆ ನಿಜವಾಗಿಯೂ ಅಚ್ಚರಿಯಾಗಿತ್ತು. ಅವರ ಪ್ರೀತಿಗೆ ಸಂಜು ಬಾಬಾ ಖುಷಿಗೊಂಡಿದ್ದೇನೋ ನಿಜ. ಆದರೆ, ಅಭಿಮಾನಿ ಬರೆದುಕೊಟ್ಟ ಕೋಟಿ ಬೆಲೆ ಬಾಳುವ ಆ ಆಸ್ತಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರು. ಅಷ್ಟಕ್ಕೂ ನಿಶಾ ಯಾರು ಅನ್ನುವುದೇ ನನಗೆ ಗೊತ್ತಿಲ್ಲ. ಆದರೂ ಆಕೆಯ ಪ್ರೀತಿಗೆ ನಾನು ಆಭಾರಿ. ಆದರೆ ಆಕೆಯ ಕುಟುಂಬಕ್ಕೆ ಆ ಆಸ್ತಿ ಸಿಗಬೇಕು ಎಂದಿದ್ದರು. ತಮ್ಮ ವಕೀಲರ ಮೂಲಕ ಅದಕ್ಕೆ ಬೇಕಾದ ವ್ಯವಸ್ಥೆಯನ್ನೂ ಮಾಡಿದ್ದರು.
ಸಂಜಯ್ ದತ್ ಅವರ ವಕೀಲರು, “ಸಂಜಯ್ ದತ್ ಅವರಿಗೆ ಆ 72 ಕೋಟಿ ರೂ. ಆಸ್ತಿ ಪಡೆಯುವ ಯಾವುದೇ ಉದ್ದೇಶ ವಿಲ್ಲ. ಅದನ್ನು ನಿಶಾ ಅವರ ಕುಟುಂಬಕ್ಕೆ ಹಿಂದಿರುಗಿಸಲು ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ” ಎಂದಿದ್ದರು. ಯಾವುದೇ ಫಲಾಪೇಕ್ಷೆ ಇಲ್ಲದೇ ಅಭಿಮಾನಿಗಳ ತಮ್ಮ ಅಭಿಮಾನ ಪ್ರದರ್ಶಿಸುತ್ತಾರೆ. ದುಡ್ಡು ಕೊಟ್ಟು ಸಿನಿಮಾ ನೋಡಿ ನೆಚ್ಚಿನ ನಟ, ನಟಿಯರನ್ನು ಆರಾಧಿಸುತ್ತಾರೆ. ಒಂದು ಬಾರಿ ಕೂಡ ಭೇಟಿ ಆಗದೇ ಕೇವಲ ತನ್ನ ನೆಚ್ಚಿನ ಹೀರೋ ಹೆಸರಿಗೆ 71 ಕೋಟಿ ರೂ. ಆಸ್ತಿ ಬರೆದಯುವುದು ಅಂದ್ರೆ ಸುಮ್ಮನೇನಾ? ನಿಜಕ್ಕೂ ಇಂತಹ ಅಭಿಮಾನಿ ಬಗ್ಗೆ ಬಾಲಿವುಡ್ ಮಂದಿ ಮಾತನಾಡಿಕೊಂಡಿದ್ದರು.
ಇಂತಹ ಅದೆಷ್ಟೋ ಅಭಿಮಾನಿಗಳು ಈಗಲೂ ಇದ್ದಾರೆ. ಇಂತಹ ವಿಷಯಗಳು ಆಗಾಗ ನಡೆಯುತ್ತಲೇ ಇರುತ್ತವೆ. ಸಂಜಯ್ ದತ್ ಗೆ ಇಂತಹ ಅಭಿಮಾನಿ ಇರೋದೇ ಗ್ರೇಟ್ ಅನ್ನೋ ಮಾತುಗಳೂ ಬರುತ್ತಿವೆ. ಅದಕ್ಕೆ ಹೇಳೋದು ಒಂದು ಸಿನಿಮಾ ಎಷ್ಟು ಜನರನ್ನು ಇಂಪ್ಯಾಕ್ಟ್ ಮಾಡುತ್ತೆ. ಹೀರೋ, ಎಷ್ಟೊಂದು ಪ್ರಬಾವ ಬೀರುತ್ತಾನೆ ಅನ್ನೋದಕ್ಕೆ ಇದು ಒಂದು ಉದಾಹರಣೆ ಸಾಕಲ್ಲವೇ?
ವಿಜಯ್ ಭರಮಸಾಗರ್, ಕರ್ನಾಟಕ ಟಿವಿ, ಫಿಲ್ಮ್‌ಬ್ಯೂರೋ