Bengaluru News: ಬೆಂಗಳೂರಿನ ಆಸ್ತಿ ಮಾಲೀಕರು ತಾವು ಬಾಕಿ ಉಳಿಸಿಕೊಂಡಿರುವ ಬಿಬಿಎಂಪಿಯ ಆಸ್ತಿ ತೆರಿಗೆಯನ್ನು ಇದೇ ಮಾರ್ಚ್ 31ರ ಒಳಗಾಗಿ 100 ರೂಪಾಯಿ ದಂಡದೊಂದಿಗೆ ಪಾವತಿಸಿ. ಇಲ್ಲವಾದರೆ ಏಪ್ರಿಲ್ 1ರಿಂದ ಬಾಕಿ ಇರುವ ತೆರಿಗೆ ಮೊತ್ತಕ್ಕೆ ಸಮನಾಗುವ ದಂಡವನ್ನು ಪಾವತಿ ಮಾಡಬೇಕಿದೆ. ಅದಕ್ಕಾಗಿ ಹೆಚ್ಚುವರಿ ದಂಡದಿಂದ ತಪ್ಪಿಸಿಕೊಳ್ಳಬೇಕೆನ್ನುವವರು ಮಾರ್ಚ್ ಮುಗಿಯುವವರೆಗೆ ಬಾಕಿ ತೆರಿಗೆಯನ್ನು ಪಾವತಿ ಮಾಡಬಹುದಾಗಿದೆ. ಇನ್ನೂ ಕಳೆದ ವರ್ಷದಲ್ಲಿ ರಾಜ್ಯ ಸರ್ಕಾರವು ಬಿಬಿಎಂಪಿ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ಅದರನ್ವಯ ಆಸ್ತಿ ತೆರಿಗೆಯ ಮೇಲಿನ ದಂಡವನ್ನು ಕಡಿಮೆ ಮಾಡಿತ್ತು. ಅಲ್ಲದೆ ಆಗ ಒಂದು ವರ್ಷದವರೆಗೆ 100 ರೂಪಾಯಿ ದಂಡದ ಮೊತ್ತವನ್ನು ನಿಗದಿಪಡಿಲಾಗಿತ್ತು. ಆ ಕಾಲ ಮಿತಿಯು ಇದೇ ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳಲಿದೆ.
ಅಂದಹಾಗೆ ಏಪ್ರಿಲ್ 1 ರಿಂದ ಬಾಕಿ ಪಾವತಿಯ ಮೊತ್ತದ ಸರಿಸಮನಾಗಿ ದಂಡವನ್ನು ನೀಡಬೇಕಿದೆ. ಅಂದರೆ 100 ರೂಪಯಿ ತೆರಿಗೆಗೆ 100 ರೂಪಾಯಿ ದಂಡವನ್ನು ವಿಧಿಸುವುದರ ಜೊತೆಗೆ ವಾರ್ಷಿಕ ಬಾಕಿ ಮೊತ್ತದ ಶೇಕಡಾ 9 ರಿಂದ 15 ರಷ್ಟು ದಂಡವನ್ನು ವಿಧಿಸುವ ಕಾಯ್ದೆಯು ಅನ್ವಯವಾಗಲಿದೆ. ಅಂದರೆ ನಾವು ಈ ತೆರಿಗೆಯನ್ನು ಊಹೆ ಮಾಡಿ ನೋಡಿದಾಗ.. 2022-23ನೇ ಸಾಲಿನ ಅಥವಾ ಅದಕ್ಕಿಂತ ಹಿಂದಿನ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವ ಮಾಲೀಕರು, 1 ಸಾವಿರ ರೂಪಾಯಿ ತೆರಿಗೆಯು ಬಾಕಿ ಇದ್ದರೆ ಅದಕ್ಕೆ 1 ಸಾವಿರ ದಂಡ ಸೇರಿಸಿ ಒಟ್ಟು 2 ಸಾವಿರ ರೂಪಾಯಿ ಬಿಬಿಎಂಪಿಗೆ ಪಾವತಿ ಮಾಡಬೇಕಾಗುತ್ತದೆ. ಅಲ್ಲದೆ ವಾರ್ಷಿಕ ಶೇಕಡಾ 9ರಷ್ಟು ಬಡ್ಡಿಯಯನ್ನು ನೀಡಬೇಕಿದೆ. ಅಂದಹಾಗೆ ಕಳೆದ 2023-24ನೇ ಸಾಲಿನ ಆಸ್ತಿ ತೆರಿಗೆಗೆ ಶೇಕಡಾ15ರಷ್ಟು ಬಡ್ಡಿ ಇರುತ್ತದೆ, ಆದರೆ ದಂಡವನ್ನು ಕಟ್ಟುವಂತಿಲ್ಲ.
ಏಕರೂಪ ದಂಡ ನೀತಿ..
ಅಲ್ಲದೆ ಏಕರೂಪ ದಂಡಪದ್ದತಿಯನ್ನು ಪರಿಚಯಿಸಲು ಮುಂದಾಗಿರುವ ಬಿಬಿಎಂಪಿಯು, ತನ್ನ ವ್ಯಾಪ್ತಿಯಲ್ಲಿ ತಪ್ಪು ಮಾಹಿತಿಗಳನ್ನು ನೀಡಿ ಆಸ್ತಿಯ ಘೋಷಣೆ ಮಾಡಿಕೊಂಡವರಿಗೆ, ಅಲ್ಲದೆ ಇದುವರೆಗೂ ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡದ ಆಸ್ತಿಗಳಿಗೆ ಏಕರೂಪ ದಂಡವನ್ನು ವಿಧಿಸಲಾಗುತ್ತಿದೆ. ಇನ್ನೂ ತೆರಿಗೆಯನ್ನು ಪಾವತಿ ಮಾಡುವ ಆಸ್ತಿ ಮಾಲೀಕರಿಗೂ ಸಹ ಒಂದೇ ದಂಡ ಪದ್ಧತಿಯು ಜಾರಿಗೆ ಬರಲಿದೆ. ಅಲ್ಲದೆ ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 1,82,467 ಆಸ್ತಿಗಳ ಮಾಲೀಕರು ಸುಮಾರು 390 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲದೆ ಮಹದೇವಪುರ ಪೂರ್ವ ಹಾಗೂ ದಕ್ಷಿಣ ವಲಯದಲ್ಲಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡವರಿದ್ದಾರೆ.
ಇನ್ನೂ ಆಸ್ತಿದಾರರು ತಮಗೆ ನೀಡಲಾಗಿರುವ ಎಲ್ಲಾ ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಪಾವತಿಸಲು ಮಾರ್ಚ್ 31 ಕಡೆಯ ದಿನವಾಗಿದೆ, ಅದರ ಮೊದಲೇ ಪಾವತಿಸಿ. ಈಗಾಗಲೇ ಬಾಕಿ ಉಳಿಸಿಕೊಂಡವರಿಂದ ಕಟ್ಟಡ ಸೀಜ್ ಮಾಡುವುದು ಹಾಗೂ ಆಸ್ತಿ ಹರಾಜು ಹಾಕುವ ಕೆಲಸ ನಡೆಸಲಾಗುತ್ತಿದೆ. ಮಾರ್ಚ್ ತಿಂಗಳಲ್ಲಿ ಬಾಕಿ ಪಾವತಿ ಮಾಡದವರಿಂದ ಏಪ್ರಿಲ್ 1ರಿಂದ 100ಕ್ಕೆ ನೂರು ದಂಡದ ಹಾಕಲಾಗುವುದು. ಇದರಿಂದ ತಪ್ಪಿಸಿಕೊಂಡು ಎಲ್ಲ ಆಸ್ತಿದಾರರು ಲಾಭ ಪಡೆಯಬೇಕೆಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಕರೆ ನೀಡಿದ್ದಾರೆ. ಅಲ್ಲದೆ ಈ ಕುರಿತು ಬಿಬಿಎಂಪಿಯಿಂದ ಜನ ಜಾಗೃತಿಯನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.