ಕಸದ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಹೊಸ ಪ್ಲಾನ್ : ಸೇವಾ ಶುಲ್ಕದ ಹೆಸರಲ್ಲಿ ಹಣ ವಸೂಲಿ

Bengaluru News: ಮೆಟ್ರೊ, ಬಸ್‌ ದರಗಳ ಹೆಚ್ಚಳದಿಂದ ತತ್ತರಿಸಿರುವ ಬೆಂಗಳೂರಿಗರಿಗೆ ಮತ್ತೊಂದು ಹೊರೆಯನ್ನು ಹೇರಲು ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಏಪ್ರಿಲ್‌ ತಿಂಗಳಿಂದ ಕಸದ ಜೊತೆಗೆ ಸೇವಾ ಶುಲ್ಕದ ಹೆಸರಿನಲ್ಲಿ ಹಣ ವಸೂಲಿಯ ಹೊಸ ಪ್ಲಾನ್‌ ರೂಪಿಸಲಾಗಿದೆ. ಇನ್ನೂ ಕಳೆದ ಕೆಲ ವರ್ಷಗಳಿಂದ ಘನತ್ಯಾಜ್ಯದ ಮೇಲೆ ಸೇವಾ ಶುಲ್ಕ ವಿಧಿಸುವ ಕುರಿತು ಪರ – ವಿರೋಧದ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಬೆಲೆ ಏರಿಕೆ ನೀತಿಯು ಬರೆ ಎಳೆದಿದೆ, ಇದೂ ಜಾರಿಯಾದರೆ ಹೊರೆಯಾಗಲಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ಅಲ್ಲದೆ ಈ ವಿಚಾರವನ್ನು ತಾತ್ಕಾಲಿಕವಾಗಿ ದೂರ ತಳ್ಳಲಾಗಿತ್ತು.

ಆದರೆ ನಗರದಲ್ಲಿನ ಕಸ ವಿಲೇವಾರಿಯ ಹೊಣೆ ಹೊತ್ತುಕೊಂಡಿರುವ ಘನ ತ್ಯಾಜ್ಯ ವಿಲೇವಾರಿ ನಿರ್ವಹಣಾ ಕಂಪನಿಯಾಗಿರುವ ಬಿಎಸ್‌ಡಬ್ಲ್ಯುಎಂಎಲ್‌ನ ಮೂಲಕ ಹೇಗಾದರೂ ಮಾಡಿ ಸೇವಾ ಶುಲ್ಕ ವಸೂಲಿ ಮಾಡಲು ಮುಂದಾಗಿದೆ. ಅಲ್ಲದೆ ಕಳೆದ ನವೆಂಬರ್‌ ತಿಂಗಳಲ್ಲಿಯೇ ಈ ಕುರಿತು ರಾಜ್ಯ ಸರ್ಕಾರಕ್ಕೆ ಕಂಪನಿಯು ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇನ್ನೂ ಈ ಪ್ರಪೋಸಲ್‌ಗೆ ಇತ್ತೀಚಿಗಷ್ಟೇ ರಾಜ್ಯ ಸರ್ಕಾರವು ಅನುಮೋದನೆ ನೀಡಿತ್ತು, ಅಲ್ಲದೆ ಈ ನೀತಿಯನ್ನು ಬರುವ ಏಪ್ರಿಲ್‌ ತಿಂಗಳಿನಿಂದ ಜಾರಿಗೆಗೊಳಿಸುವಂತೆಯೂ ನಿರ್ದೇಶನ ಮಾಡಿತ್ತು.

ಪ್ರಮುಖವಾಗಿ ಈ ಮುಂಚೆ ಸರ್ಕಾರವು ಸಾರ್ವಜನಿಕರ ವಿರೋಧದ ಬಳಿಕ ಸ್ವಲ್ಪ ದಿನಗಳ ಕಾಲ ಸುಮ್ಮನಿದ್ದು, ಪುನಃ ಸೇವಾ ಶುಲ್ಕದ ವಿಚಾರವನ್ನು ಬೇರೆ ರೂಪದಲ್ಲಿಯೇ ಮುನ್ನೆಲೆಗೆ ತರಲು ಮುಂದಾಗಿತ್ತು. ಅಂದರೆ ವಿದ್ಯುತ್‌ ಬಿಲ್‌ ಜೊತೆಗೆಯೇ ಈ ಘನತ್ಯಾಜ್ಯದ ಸೇವಾ ಶುಲ್ಕ ಸಂಗ್ರಹಿಸುವ ಮಾತುಕತೆಗಳು ನಡೆದಿದ್ದವು. ಆದರೆ ಗೃಹ ಜ್ಯೋತಿ ಯೋಜನೆಯಿಂದಾಗಿ ಬಹತೇಕರು ವಿದ್ಯುತ್‌ ಬಿಲ್‌ ಪಾವತಿಯ ಪ್ರಶ್ನೆಯೇ ಉದ್ಭವಿಸಲಿಲ್ಲ. ಆದರೆ ಆ ಪ್ರಸ್ತಾವನೆಗೆ ಈಗ ಮರುಜೀವ ತುಂಬಲು ಸರ್ಕಾರ ಸಿದ್ದವಾಗಿದ್ದು, ಹೀಗೆ ವಸೂಲಿಯಾದ ಸೇವಾ ಶುಲ್ಕವನ್ನು ಬಿಬಿಎಂಪಿಯು ನಿರ್ವಹಣಾ ಕಂಪನಿಗೆ ನೀಡಲು ಯೋಜನೆ ರೂಪಿಸಲಾಗಿದೆ.

ವಾರ್ಷಿಕ 600 ರಿಂದ 800 ಕೋಟಿ ಸಂಗ್ರಹದ ಗುರಿ..

ಇನ್ನೂ ಸರ್ಕಾರದ ನೂತನ ಸೇವಾ ಶುಲ್ಕ ನೀತಿಯ ಪ್ರಕಾರ, ಒಂದು ತಿಂಗಳಿಗೆ ವಸತಿ ಕಟ್ಟದಿಂದ ವಾರ್ಷಿಕ 4,800 ರೂಪಾಯಿ ಘನತ್ಯಾಜ್ಯ ಸೇವಾ ಶುಲ್ಕ ವಸೂಲಿಗೆ ನಿರ್ಧರಿಸಲಾಗಿದೆ. ಅಲ್ಲದೆ ಹೀಗೆ ಸಂಗ್ರಹಿಸಲಾಗುತ್ತಿರುವ ಶುಲ್ಕದ ಗುರಿಯು ವಾರ್ಷಿಕವಾಗಿ 600 ರಿಂದ 800 ಕೋಟಿ ರೂಪಾಯಿಗಳಷ್ಟಿದೆ. ಮುಖ್ಯವಾಗಿ ಈ ಹಣದಲ್ಲಿ ನಗರದಲ್ಲಿ ತಲೆದೂರುವ ಕಸದ ಸಮಸ್ಯೆಯನ್ನು ನಿವಾರಿಸಿ, ಅದರ ಸಮರ್ಪಕ ವಿಲೇವಾರಿಗೆ ಸಾಧ್ಯವಾಗಲಿದೆ. ಈ ಕಾರ್ಯಕ್ಕಾಗಿ ಬಿಬಿಎಂಪಿಯಿಂದ ಯಾವುದೇ ಅನುದಾನದ ಅಗತ್ಯವಿರುವುದಿಲ್ಲ ಎಂಬ ಯೋಜನೆಯನ್ನು ಕಂಪನಿಯ ಅಧಿಕಾರಿಗಳು ರೂಪಿಸಿದ್ದಾರೆ.

ಅಲ್ಲದೆ ಕಟ್ಟಡದ ವಿಸ್ತೀರ್ಣದ ಆಧಾರದ ಮೇಲೆ ಬಳಕೆದಾರರ ಶುಲ್ಕ ನಿರ್ಧರಿಸಲಾಗುತ್ತದೆ. ಇದರಲ್ಲಿ ಒಟ್ಟು ಆರು ವಿಭಿನ್ನ ಶ್ರೇಣಿಗಳಿವೆ. 600 ಚದರ ಅಡಿ ವರೆಗಿನ ಕಟ್ಟಡಗಳು ತಿಂಗಳಿಗೆ 10 ರೂ. ವರ್ಷಕ್ಕೆ 120 ರೂ. ಪಾವತಿಸಬೇಕು. 4,000 ಚದರ ಅಡಿಗಿಂತ ದೊಡ್ಡ ಕಟ್ಟಡಗಳಿಗೆ ತಿಂಗಳಿಗೆ ಗರಿಷ್ಠ 400 ರೂ. ವರ್ಷಕ್ಕೆ 4,800 ರೂ. ಪಾವತಿಸಬೇಕು. ಇದರಿಂದ ವಾರ್ಷಿಕ ಆಸ್ತಿ ತೆರಿಗೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ತ್ಯಾಜ್ಯ ಸಂಸ್ಕರಣೆ ಮಾಡದ ಅಪಾರ್ಟ್‌ಮೆಂಟ್‌ಗಳು ಅಥವಾ ದೊಡ್ಡ ವಾಣಿಜ್ಯ ಸಂಸ್ಥೆಗಳಂತಹ ಬೃಹತ್ ತ್ಯಾಜ್ಯ ಉತ್ಪಾದಕರಿಂದ ಪ್ರತಿ ಕೆ.ಜಿ. ತ್ಯಾಜ್ಯಕ್ಕೆ 12 ರೂ. ಬಳಕೆದಾರ ಶುಲ್ಕ ವಿಧಿಸಲು ಸರ್ಕಾರವು ಅವಕಾಶ ನೀಡಿದೆ.

ಅಲ್ಲದೆ ಒಂದು ಕಟ್ಟಡದಲ್ಲಿ ಇರುವ ಮನೆಗಳ ಘನತ್ಯಾಜ್ಯ ಸೇವಾ ಶುಲ್ಕವನ್ನು ಆಯಾ ಕಟ್ಟಡದ ಮಾಲೀಕರೇ ಭರಿಸಬೇಕು. ಅಲ್ಲದೆ ಆ ಶುಲ್ಕವನ್ನು ಅವರ ಆಸ್ತಿಗಳೊಂದಿಗೆ ಹೊಂದಿಕೆ ಮಾಡಲಾಗುತ್ತದೆ. ಇನ್ನೂ ನಗರದಲ್ಲಿ ಎಷ್ಟು ಕಟ್ಟಡಗಳಿವೆ, ಅವುಗಳಲ್ಲಿ ಎಷು ಮನೆಗಳಿವೆ ಎಂಬ ಸರ್ವೇ ಕಾರ್ಯವನ್ನು ಘನತ್ಯಾಜ್ಯ ನಿರ್ವಹಣಾ ಕಂಪನಿಯು ನಡೆಸಲಿದೆ.

ಒಟ್ನಲ್ಲಿ.. ಈಗಾಗಲೇ ಬೆಲೆ ಏರಿಕೆಯ ಹೊಡೆತಕ್ಕೆ ನಲುಗಿರುವ ಸಿಲಿಕಾನ್‌ ಸಿಟಿ ಮಂದಿಗೆ ಈ ಶುಲ್ಕ ವಸೂಲಿ ನೀತಿಯು ಇನ್ನಷ್ಟು ಹೊರೆಯಾಗಲಿದೆ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ಸರಿಯಾಗಿ ಕಸದ ವಿಲೇವಾರಿ ಮಾಡದ, ಸಮರ್ಪಕ ತ್ಯಾಜ್ಯ ನಿರ್ವಹಿಸದೆ ಇರುವ ಬಿಬಿಎಂಪಿಗೆ ಯಾಕೆ ಈ ಶುಲ್ಕವನ್ನು ನೀಡಬೇಕು? ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅದೇನೆ ಇರಲಿ.. ಸಾರ್ವಜನಿಕರ ವ್ಯಾಪಕ ವಿರೋಧದ ನಡುವೆಯೂ ಕಸದ ಮೇಲೆ ತೆರಿಗೆ ವಿಧಿಸಲು ಹೊರಟಿರುವ ಬಿಬಿಎಂಪಿಯ ಪ್ಲಾನ್‌ ಸಕ್ಸಸ್‌ ಆಗುತ್ತಾ..? ಅದರಲ್ಲೂ ತೀವ್ರವಾಗಿ ಉಲ್ಭಣಗೊಂಡಿರುವ ಕಸದ ಸಮಸ್ಯೆಗೆ ಮುಕ್ತಿ ಸಿಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

About The Author