Tumakuru News: ತಿಪಟೂರು: ರಂಜಾನ್ ಹಬ್ಬದಂದೆ ತಾಲ್ಲೂಕಿನ ಹಾಸನ ರಸ್ತೆಯ ಸಮೀಪದ ಕೆರಗೋಡಿ ರಸ್ತೆ ಬಸವನಪುರ ಗ್ರಾಮದ ಬಳಿ ಅಕ್ರಮವಾಗಿ ಜಾನುವಾರು ಸಾಗಾಟದ ವಿಚಾರವಾಗಿ ಉದ್ಭವಿಸಿದ ಗಲಾಟೆಯಲ್ಲಿ ಬಜರಂಗದಳದ ಸಂಘಟನೆಯ ಕಾರ್ಯಕರ್ತರು ಗಾಯಗೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ನಡೆದಿದೆ.
ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆಯ ಕೆಲ ಕಾರ್ಯಕರ್ತರು ವಾಹನವನ್ನು ತಡೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆಯಲ್ಲಿ ಮತ್ತೊಂದು 50ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಗುಂಪು ಆಗಮಿಸಿ ಬಜರಂಗದಳದ ಸಂಘಟನೆಯ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಇಬ್ಬರ ಗುಂಪುಗಳ ನಡುವೆ ಹಲ್ಲೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆಯಲ್ಲಿ ಗೌತಮ್, ಆನಂದ್, ಶ್ರೇಯಸ್, ಸಚಿನ್ ಹಾಗೂ ಪ್ರಜ್ವಲ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಿಪಟೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಸನ ಜಿಲ್ಲೆಯ ಚನ್ನಾಪುರ ಗ್ರಾಮದ ದಿಂದ ಹಸುವನ್ನು ವಾಹನದಲ್ಲಿ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಕರ್ತರು ವಾಹನವನ್ನು ತಪಾಸಣೆ ಮಾಡಲು ಮುಂದಾದಾಗ ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಚಂದ್ರಶೇಖರ್ ಹಾಗೂ ನಗರ ಠಾಣೆಯ ಪೊಲೀಸ್ ಇನ್ ಪೆಕ್ಟರ್ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಕರಣವನ್ನು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ವಿಷಯ ತಿಳಿದು ಹಿಂದೂ ಪರ ನೂರಾರು ಸಂಘಟನೆ ಕಾರ್ಯಕರ್ತರು ಆಸ್ವತ್ರೆ ಆಗಮಿಸಿದ್ದಾರೆ.




