ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇಗುಲದಲ್ಲಿ ಭಾನುವಾರ ಒಂದು ಹೊಸ ದಾಖಲೆ ಬರೆಯಲಾಗಿದೆ. ಕೇವಲ ಏಳು ಗಂಟೆಗಳ ಅವಧಿಯಲ್ಲಿ ನೂರಾರು ಮದುವೆಗಳು ನೆರವೇರಿರುವುದು ಅಚ್ಚರಿಗೆ ಕಾರಣವಾಗಿದೆ.
ಎಸ್ ‘ಮಲಯಾಳಂ ತಿಂಗಳಾದ ‘ಚಿಂಗಂ’ ಮಾಸದ ಮೊದಲ ಭಾನುವಾರವನ್ನು ಕೇರಳದಲ್ಲಿ ಮದುವೆಗಳಿಗೆ ಅತ್ಯಂತ ಮಂಗಳಕರವಾದ ದಿನವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಗುರುವಾಯೂರು ದೇಗುಲದಲ್ಲಿ ಭಾರಿ ಸಂಖ್ಯೆಯಲ್ಲಿ ವಿವಾಹಗಳು ನಿಗದಿಯಾಗಿದ್ದವು. ಸ್ಪಾಟ್ ಬುಕ್ಕಿಂಗ್ ಸೇರಿದಂತೆ ಒಟ್ಟು 442 ಮದುವೆಗಳು ನಿಗದಿಯಾಗಿದ್ದು, ಅದರಲ್ಲಿ ಭಾನುವಾರ ಒಂದೇ ದಿನ ಕೇವಲ 7 ಗಂಟೆಗಳಲ್ಲಿ ದಾಖಲೆಯ 416 ಮದುವೆಗಳು ಯಶಸ್ವಿಯಾಗಿ ನೆರವೇರಿವೆ.
ಇದು ದೇಗುಲದ ಇತಿಹಾಸದಲ್ಲೇ ಒಂದೇ ದಿನ ನಡೆದ ಅತ್ಯಧಿಕ ಮದುವೆಗಳ ಸಂಖ್ಯೆಯಾಗಿದೆ ಎಂದು ದೇವಸ್ವಂ ಅಧಿಕಾರಿಗಳು ತಿಳಿಸಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮದುವೆಗಳನ್ನು ನಡೆಸಲು ದೇವಸ್ಥಾನದ ಪ್ರಾಂಗಣದಲ್ಲಿ ಒಟ್ಟು 6 ಮಂಟಪಗಳನ್ನು ಸಿದ್ಧಪಡಿಸಲಾಗಿತ್ತು. ಮುಂಜಾನೆ 4.10 ರಿಂದ ಮಧ್ಯಾಹ್ನ 12.45 ರವರೆಗೆ, ಉಷಾಪೂಜೆ ಮತ್ತು ಪಂತೀರಾಡಿ ಪೂಜೆಗಾಗಿ ದೇವಸ್ಥಾನ ಮುಚ್ಚಿದ ಸಮಯವನ್ನು ಹೊರತುಪಡಿಸಿ, ಪ್ರತಿ ಗಂಟೆಗೆ 60ಕ್ಕೂ ಹೆಚ್ಚು ಮದುವೆಗಳು ಅತ್ಯಂತ ವ್ಯವಸ್ಥಿತವಾಗಿ ಜರುಗಿದವು.
ಈ ಹಿಂದೆ 2024ರ ಸೆಪ್ಟೆಂಬರ್ 8ರಂದು 334 ಮದುವೆಗಳು ನಡೆದಿದ್ದೇ ಇದುವರೆಗಿನ ದಾಖಲೆಯಾಗಿತ್ತು, ಆದರೆ ಈಗ ಆ ದಾಖಲೆ ಮುರಿದುಹೋಗಿದೆ. ಗುರುವಾಯೂರು ದೇವರಿಗೆ ಮಾಡುವ ಹರಕೆ ಮತ್ತು ಈ ಪವಿತ್ರ ಮಾಸದಲ್ಲಿ ಮದುವೆಯಾಗುವುದನ್ನು ಭಕ್ತರು ಅತ್ಯಂತ ಶ್ರೇಷ್ಠವೆಂದು ಭಾವಿಸುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿಯು ಇಷ್ಟು ದೊಡ್ಡ ಸಂಖ್ಯೆಯ ಮದುವೆಗಳನ್ನು ಯಾವುದೇ ತೊಂದರೆಯಿಲ್ಲದೆ ನಿರ್ವಹಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಗುರುವಾಯೂರು ದೇಗುಲದಲ್ಲಿ ನಡೆದ ಈ ವಿಶೇಷ ಮದುವೆಗಳ ಮಹಾಪೂರ ಎಲ್ಲರ ಗಮನ ಸೆಳೆದಿದೆ.
