Vidur Neeti: ನಿಮ್ಮ ಬಳಿ ಹಣವಿದೆ, ಹೆಸರಿದೆ, ಆಸ್ತಿ ಅಂತಸ್ತಿದೆ. ಅಂದ ಚೆಂದವಿದೆ. ಎಲ್ಲವೂ ಇದೆ. ಆದರೆ ಜೀವನದಲ್ಲಿ ಶಾಂತಿ, ನೆಮ್ಮದಿ, ಏನೂ ಇಲ್ಲದಿದ್ದಲ್ಲಿ ನಿಮ್ಮ ಬದುಕು ನಿಷ್ಪ್ರಯೋಜಕವಾಗಿರುತ್ತದೆ. ಹಾಗಾಗಿ ವಿದುರರು ಜೀವನದಲ್ಲಿ ನೆಮ್ಮದಿ, ಸುಖ-ಶಾಂತಿಯಿಂದ ಇರಬೇಕು ಅಂದ್ರೆ ಏನು ಮಾಡಬೇಕು ಎಂದು ವಿದುರ ನೀತಿಯಲ್ಲಿ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.
ಸಾಲಬಾಧೆ ಇರದಿರಲಿ: ಜೀವನದಲ್ಲಿ ಯಾರಿಗೆ ಸಾಲವಿರುತ್ತದೆಯೋ, ಆ ವ್ಯಕ್ತಿ ಎಂದಿಗೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಏಕೆಂದರೆ ಬೇಕಾದ್ದನ್ನು ಖರೀದಿಸಲು, ಅವಶ್ಯಕತೆ ಇರುವುದನ್ನಾದರೂ ಖರೀದಿಸಲು ಆತ ಹತ್ತು ಬಾರಿ ಯೋಚಿಸುತ್ತಾನೆ. ಆತ ಯಾವುದೇ ವಿಷಯದಲ್ಲಿ ನೆಮ್ಮದಿ ಇಂದ ಇರಲು ಸಾಧ್ಯವೇ ಇಲ್ಲ. ಹಾಗಾಗಿ ಸಾಲಬಾಧೆ ಇಲ್ಲದಿದ್ದರೆ ಜೀವನದಲ್ಲಿ ನೆಮ್ಮದಿಯಿಂದ ಇರಬಹುದು.
ಉತ್ತಮ ಆರೋಗ್ಯವಿರಲಿ: ಓರ್ವ ವ್ಯಕ್ತಿಯ ಬಳಿ, ಹಣ, ಆಸ್ತಿ, ಅಂತಸ್ತು, ಪ್ರೀತಿ ಪಾತ್ರರು ಎಲ್ಲವೂ ಇದ್ದು, ಐಷಾರಾಮಿ ಜೀವನವೂ ಇದ್ದು, ಆತ ಅನಾರೋಗ್ಯಕರ ಸ್ಥಿತಿಯಲ್ಲಿ ಇದ್ದರೆ, ಅಂಥ ವ್ಯಕ್ತಿ ಎಂದಿಗೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಏಕೆಂದರೆ ನಿಮ್ಮ ಬಳಿ ಏನೂ ಇಲ್ಲದಿದ್ದರೂ, ಉತ್ತಮ ಆರೋಗ್ಯ, ಆಹಾರವಿದ್ದಲ್ಲಿ, ನೀವು ಜೀವನದಲ್ಲಿ ನೆಮ್ಮದಿಯಿಂದ ಇರಬಹುದು. ಆದರೆ ಎಲ್ಲವೂ ಇದ್ದು ಆರೋಗ್ಯವೇ ಇಲ್ಲವೆಂದಲ್ಲಿ ನೀವು ನೆಮ್ಮದಿಯಿಂದರಲು ಸಾಧ್ಯವೇ ಇಲ್ಲ.
ಜೀವನ ಸಂಗಾತಿ ಉತ್ತಮರಾಗಿರಲಿ: ನಿಮ್ಮ ಬಳಿ ಎಲ್ಲವೂ ಇದ್ದು, ನಿಮ್ಮ ಜತೆ ಕೊನೆಯ ತನಕ ಬಾಳಿ ಬದುಕಬೇಕಾದ ಜೀವನ ಸಂಗಾತಿಯ ಬುದ್ಧಿ ಸರಿ ಇಲ್ಲದಿದ್ದಲ್ಲಿ ನೀವು ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಪರ ಪುರುಷ ಅಥವಾ ಪರ ಸ್ತ್ರೀ ಸಹವಾಸ, ಎಲ್ಲರೆದರು ನಿಮ್ಮನ್ನು ನಂದಿಸುವ, ನಿಮ್ಮ ಕಾಳಜಿ ಮಾಡದೇ ನಿರ್ಲಕ್ಷಿಸುವ, ಕೊಂಕು ಮಾತನಾಡುವ, ಹಂಗಿಸುವ, ಸದಾ ಕಾಲ ಕೋಪ ಮಾಡುವ ಜೀವನ ಸಂಗಾತಿ ಇರುವವರು ಎಂದಿಗೂ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ.
ನಿಯತ್ತಿನ ಜೀವನ: ಯಾವ ವ್ಯಕ್ತಿ ಬದುಕುವುದಕ್ಕಾಗಿ ನಿಯತ್ತಿನಿಂದ ದುಡಿಯುವುದಿಲ್ಲವೋ, ಅಂಥ ವ್ಯಕ್ತಿ ಎಂದಿಗೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ನಾವು ಜೀವನದಲ್ಲಿ ಯಶಸ್ವಿಯಾಗಬೇಕು, ಗೌರವಾನ್ವಿತರಾಗಬೇಕು ಅಂದ್ರೆ ಕಠಿಣ ಪರಿಶ್ರಮ ಅತ್ಯಗತ್ಯ. ಹಾಗಾಗಿ ಸರಿಯಾದ ಮಾರ್ಗದಲ್ಲಿ ದುಡಿಮೆ ಮಾಡಿದರೆ ಮಾತ್ರ ನಮ್ಮ ಜೀವನದಲ್ಲಿ ನೆಮ್ಮದಿ ಇರುತ್ತದೆ.
ಮನೆಯ ಜನರಲ್ಲಿ ಪ್ರೀತಿ-ಮಮತೆಯ ಗುಣವಿರಲಿ: ನೀವು ಕಠಿಣ ಪರಿಶ್ರಮದಿಂದ ದುಡಿಯುತ್ತೀರಿ, ಜೀವನದಲ್ಲಿ ಯಶಸ್ಸು ಗಳಿಸಿದ್ದೀರಿ, ಆರೋಗ್ಯವಾಗಿದ್ದೀರಿ, ಎಲ್ಲವೂ ಇದ್ದು, ನಿಮ್ಮ ಮನೆಯಲ್ಲಿ ಇರುವವರು ನಿಮ್ಮ ಬಳಿ ಎಂದಿಗೂ ಪ್ರೀತಿ, ವಾತ್ಸಲ್ಯದಿಂದ ಮತನಾಡುವುದಿಲ್ಲ. ನಿಮ್ಮ ಕಾಳಜಿಯ ಬಗ್ಗೆ ಯಾರೂ ಕೇರ್ ಮಾಡುವುದಿಲ್ಲ ಎಂದಾಗ, ಅಂಥ ಮನುಷ್ಯನಿಗೆ ಎಂದಿಗೂ ನೆಮ್ಮದಿ ಸಿಗುವುದಿಲ್ಲ. ಅಂಥವರಿಗೆ ಮನೆಗೆ ಹೋಗಲು ಸಹ ಮನಸ್ಸಾಗುವುದಿಲ್ಲ. ಹಾಗಾಗಿ ನಿಮ್ಮ ಜೀವನದಲ್ಲಿ ನೆಮ್ಮದಿ ಇರಬೇಕು ಅಂದ್ರೆ, ಹಣ, ಹೆಸರಿನ ಜೊತೆ ಮನೆಯವರ ಪ್ರೀತಿ, ಕಾಳಜಿಯೂ ಬಹುಮುಖ್ಯ.




