Political News: ಛಲವಾದಿ ನಾರಾಯಣಸ್ವಾಮಿ ಅವರದ್ದು ಬಚ್ಚಲುಬಾಯಿ – ಕೊಲೆಗಡುಕರ ಮಾತು: ಆಂಜನೇಯ

Political News: ಕರ್ನಾಟಕ ರಾಜಕಾರಣದಲ್ಲಿ ಈಗ ಮತ್ತೊಂದು ತೀವ್ರ ವಾಗ್ದಾಳಿ ಹಾಗೂ ವಿವಾದ ಭುಗಿಲೆದ್ದಿದೆ. ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿವಾದಾತ್ಮಕ ಹೇಳಿಕೆ ವಿರುದ್ಧ ಕೆಪಿಸಿಸಿ ಎಸ್‌ಸಿ ಘಟಕದ ಅಧ್ಯಕ್ಷ ಧರ್ಮಸೇನಾ ಹಾಗೂ ಮಾಜಿ ಸಚಿವ ಎಚ್. ಆಂಜನೇಯ ಜಂಟಿ ಸುದ್ದಿಗೋಷ್ಠಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್. ಆಂಜನೇಯ, ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸಿಗರನ್ನು ತುಂಡುತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುವುದಾಗಿ ಅತ್ಯಂತ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು. ಇದು ಶಾಂತಿಪ್ರಿಯ ಕಾಂಗ್ರೆಸ್ಸಿಗರನ್ನು ಕೆಣಕುವ ಯತ್ನವಾಗಿದ್ದು, ಅವರದ್ದು ಸಂಪೂರ್ಣ ಬಚ್ಚಲುಬಾಯಿ ಹಾಗೂ ಕೊಲೆಗಡುಕರ ಮಾತು. ಸಂವಿಧಾನಕ್ಕೆ ಅಪಚಾರ ಎಸೆಯುವ ರೀತಿಯಲ್ಲಿ ಭಯೋತ್ಪಾದಕರಂತೆ ಅವರು ಮಾತನಾಡಿದ್ದಾರೆ” ಎಂದು ಹರಿಹಾಯ್ದರು.

ಛಲವಾದಿ ನಾರಾಯಣಸ್ವಾಮಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿರುವ ಅವರು, ಈಗಾಗಲೇ ಕೋಲಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಹಾಗೂ ಬೆಂಗಳೂರಿನಲ್ಲೂ ಕಾನೂನು ತಜ್ಞರ ಸಲಹೆ ಪಡೆದು ಯಾವ ಯಾವ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ಹಾಕಬೇಕು ಎಂದು ಚರ್ಚೆ ನಡೆಸುತ್ತಿದ್ದೇವೆ ಎಂದರು.

ದೇಶದ ಏಕತೆ ಹಾಗೂ ಸಮಾನತೆಗಾಗಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಕೇವಲ ಪ್ರಚಾರಕ್ಕಾಗಿ ಇಂತಹ ಭಯೋತ್ಪಾದಕ ಹೇಳಿಕೆಗಳನ್ನು ನೀಡುವ ಬಿಜೆಪಿ ನಾಯಕರಿಗೆ ನೈತಿಕತೆಯಿದ್ದರೆ ಕೂಡಲೇ ಅವರನ್ನು ವಿರೋಧ ಪಕ್ಷದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ರಾಜಕಾರಣಿಗಳಿಗೆ ಕವಿ ಅಥವಾ ನಾಯಕರಂತೆ ಮಾತನಾಡುವ ಸಂಸ್ಕೃತಿ ಇರಬೇಕೇ ಹೊರತು, ಗೂಂಡಾಗಳಂತೆ ಮಾತನಾಡುವುದಲ್ಲ ಎಂದಿರುವ ಕಾಂಗ್ರೆಸ್ ಮುಖಂಡರು, ಮುಂದಿನ ದಿನಗಳಲ್ಲಿ ಇದಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

About The Author