ಹಿರಿಯೂರಿನಲ್ಲಿ ಸರಕಾರದ ಕ್ಯಾಂಪ್ – ಡಿಕೆಶಿ ರಣತಂತ್ರಕ್ಕೆ ಸಜ್ಜಾದ ಮೈತ್ರಿ!

ವಿಧಾನ ಪರಿಷತ್ ಚುನಾವಣೆಯ ಸೋಲಿನ ಮುಖಭಂಗದಿಂದ ಹೊರಬರಲು ಹವಣಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ, ಈಗ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಗ್ನಿಪರೀಕ್ಷೆಯಾಗಿ ಎದುರಾಗಿದೆ. ಈ ಎಲೆಕ್ಷನ್ ಅನ್ನು ಕಾಂಗ್ರೆಸ್ ಹೈಕಮಾಂಡ್ ಎಷ್ಟು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ ಅಂದ್ರೆ, ಎಲೆಕ್ಷನ್ ಡೇಟ್ ಅನೌನ್ಸ್ ಆಗೋದಕ್ಕೂ ಮುನ್ನವೇ ಇಡೀ ಸಚಿವ ಸಂಪುಟವೇ ಹಿರಿಯೂರಿನಲ್ಲಿ ಬೀಡುಬಿಟ್ಟಿದೆ.

ಹೌದು, ದಿವಂಗತ ಶಾಸಕ ಡಿ.ಸುಧಾಕರ್ ನಿಧನದ ನಂತರ ಹಿರಿಯೂರು ಕ್ಷೇತ್ರವನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂಚೂಣಿಯಲ್ಲಿ ನಿಂತು ರಣತಂತ್ರ ಹೆಣೆಯುತ್ತಿದ್ದಾರೆ. ಸುಧಾಕರ್ ಅವರಿಗೆ ನುಡಿನಮನ, ಬರ ಪರಿಶೀಲನೆ, ಗಂಗಾಪೂಜೆ ಹಾಗೂ ಭದ್ರಾ ಮೇಲ್ದಂಡೆ ನೀರು ಹರಿಸಿದ್ದಕ್ಕೆ ಅಭಿನಂದನೆ ಸ್ವೀಕರಿಸುವ ನೆಪದಲ್ಲಿ ಡಿಕೆಶಿ ಈಗಾಗಲೇ ಐದಾರು ಬಾರಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಕೇವಲ ಭೇಟಿ ಅಷ್ಟೇ ಅಲ್ಲ, ಬರೋಬ್ಬರಿ 2,500 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೂ ಶಂಕುಸ್ಥಾಪನೆ ನೆರವೇರಿಸಿ ಮತದಾರರ ಸೆಳೆಯುವ ಭರ್ಜರಿ ಕಸರತ್ತು ನಡೆಸಿದ್ದಾರೆ.

ಇನ್ನು ಚುನಾವಣೆ ಘೋಷಣೆಯಾಗದಿದ್ದರೂ, ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಹಾಗೂ ಶಾಸಕ ಎಚ್.ಡಿ. ರಂಗನಾಥ್ ಸೇರಿದಂತೆ ಹಲವು ನಾಯಕರು ಹಿರಿಯೂರಿನ ಹಳ್ಳಿಹಳ್ಳಿಗೆ ಭೇಟಿ ನೀಡಿ ಅಹವಾಲು ಆಲಿಸ್ತಿದ್ದಾರೆ. ‘ನಾನೇ ಅಭ್ಯರ್ಥಿ ಅಂತ ಭಾವಿಸಿ ವೋಟ್ ಹಾಕಿ’ ಅಂತ ಡಿಕೆಶಿ ಭಾವನಾತ್ಮಕವಾಗಿ ಅಲೆ ಎಬ್ಬಿಸುತ್ತಿದ್ದಾರೆ. ಸುಧಾಕರ್ ಅವರ ಮಗ ಸುಹಾಸ್ ಅವರಿಗೆ ಟಿಕೆಟ್ ಸಿಗುವುದು ಬಹತೇಕ ಖಚಿತವಾಗಿದ್ದು, ತಂದೆಯ ಮೇಲಿನ ಅನುಕಂಪ, ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿ ಮಂತ್ರವೇ ಕಾಂಗ್ರೆಸ್‌ನ ಬ್ರಹ್ಮಾಸ್ತ್ರವಾಗಿದೆ.

ಆದರೆ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸುಮ್ಮನೆ ಕೂತಿಲ್ಲ. ಸುಧಾಕರ್ ಅನುಪಸ್ಥಿತಿಯಲ್ಲಿ ಹಿರಿಯೂರಿನಲ್ಲಿ ಈಗ ಜಾತಿಯ ಲೆಕ್ಕಾಚಾರಗಳು ಜೋರಾಗಿವೆ. ಕ್ಷೇತ್ರದಲ್ಲಿ ಒಕ್ಕಲಿಗ ಹಾಗೂ ಕಾಡುಗೊಲ್ಲ ಸಮುದಾಯದ ತಲಾ 50 ಸಾವಿರಕ್ಕೂ ಅಧಿಕ ಮತಗಳಿವೆ. ಕಾಡುಗೊಲ್ಲ ಸಮುದಾಯದ ಮುಖಂಡ ರಾಜಣ್ಣ ಅವರನ್ನು ಬಿಜೆಪಿಗೆ ಸೆಳೆದುಕೊಂಡು, ಅವರನ್ನೇ ಕಣಕ್ಕಿಳಿಸಲು ಕಸರತ್ತು ನಡೆಯುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಟಿಕೆಟ್‌ಗಾಗಿ ಆಂತರಿಕ ಪೈಪೋಟಿಯೂ ಶುರುವಾಗಿದೆ.

ಭದ್ರಾ ನೀರು ಹಾಗೂ ಅನುದಾನದ ಹೊಳೆಯನ್ನು ಮೈತ್ರಿ ಪಕ್ಷಗಳು ‘ಚುನಾವಣಾ ಗಿಮಿಕ್’ ಅಂತ ಟೀಕಿಸುತ್ತಿದ್ರೆ, ಕಾಂಗ್ರೆಸ್ ಮಾತ್ರ ಕಮಾಲ್ ಮಾಡಲು ಸಜ್ಜಾಗಿದೆ. ಹಿರಿಯೂರಿನ ಈ ಹೈವೋಲ್ಟೇಜ್ ಕದನದಲ್ಲಿ ಗೆಲುವು ಯಾರ ತೆಕ್ಕೆಗೆ ಬರುತ್ತೆ ಅಂತ ಕಾದು ನೋಡಬೇಕು.

About The Author