ರಾಮ ಭೂಲೋಕವನ್ನು ಬಿಟ್ಟು ಹೋದದ್ದು ಹೇಗೆ..?

ಶ್ರೀ ರಾಮ ಹುಟ್ಟಿದ್ದರ ಬಗ್ಗೆ, ಆತನ ಬಾಲ್ಯದ ಜೀವನದ ಬಗ್ಗೆ, ವೈವಾಹಿಕ ಜೀವನ, ಕಾಡಿಗೆ ಹೋದ ಬಗ್ಗೆ ಮತ್ತು ಮತ್ತೆ ಪಟ್ಟಕ್ಕೇರಿದ ಬಗ್ಗೆ ಹಲವರಿಗೆ ಗೊತ್ತು. ಆದ್ರೆ ರಾಮ ಹೇಗೆ ಭೂಲೋಕ ಬಿಟ್ಟು ಹೋದ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ರಾಮ ಭೂಲೋಕವನ್ನು ಬಿಟ್ಟು ಹೋದದ್ದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಒಮ್ಮೆ ಓರ್ವ ವೃದ್ಧ ಶ್ರೀರಾಮನ ಆಸ್ಥಾನಕ್ಕೆ ಬಂದು, ಶ್ರೀರಾಮನ ಬಳಿ ಏಕಾಂತದಲ್ಲಿ ಮಾತನಾಡಬೇಕೆಂದು ಕೇಳಿಕೊಂಡ. ಆತನ ಮಾತಿಗೆ ಒಪ್ಪಿದ ರಾಮ, ಆತನನ್ನು ಕೋಣೆಗೆ ಕರೆದುಕೊಂಡು ಹೋಗಿ, ಬಾಗಿಲ ಬಳಿ ಲಕ್ಷ್ಮಣನನ್ನು ನಿಲ್ಲಿಸಿದ. ಮತ್ತು ಲಕ್ಷ್ಮಣ, ನಾನು ಇವರೊಂದಿಗೆ ಮಾತು ಮುಗಿಸಿ, ಬರುವ ತನಕ, ನೀನು ಒಳಗೆ ಯಾರೂ ಬರದಂತೆ ನೋಡಿಕೋ ಎಂದು ಹೇಳಿದ.

ನಂತರ ವೃದ್ಧ ಮತ್ತು ರಾಮ ಕೋಣೆಯೊಳಗೆ ಹೋದರು. ಆ ವೃದ್ಧ ಬೇರೆ ಯಾರೂ ಇಲ್ಲ. ಬದಲಾಗಿ, ಕಾಲನಾಗಿದ್ದ. ಪ್ರಭು ಶ್ರೀ ರಾಮ ಭೂಮಿಯ ಮೇಲೆ ನಿಮ್ಮ ಜೀವನ ಇಂದಿಗೆ ಮುಕ್ತಾಯವಾಗಿದೆ. ಹಾಗಾಗಿ ನಿಮ್ಮನ್ನು ಕರೆದೊಯ್ಯಲು ನಾನು ಬಂದಿದ್ದೇನೆ ಎಂದು ಹೇಳಿದ. ಇತ್ತ ಹೊರಗೆ ದೂರ್ವಾಸ ಮುನಿಗಳು ಬಂದು, ಲಕ್ಷ್ಮಣನ ಬಳಿ, ರಾಮನನ್ನು ಭೇಟಿಯಾಗಬೇಕೆಂದು ಕೇಳಿದರು.

ಆಗ ಲಕ್ಷ್ಮಣ, ಈಗ ಸಾಧ್ಯವಿಲ್ಲ ಎನ್ನುತ್ತಾನೆ. ಅದಕ್ಕೆ ದೂರ್ವಾಸ ಮುನಿಗಳು, ನೀನು ನನ್ನನ್ನು ರಾಮನ ಬಳಿ ಬಿಡದಿದ್ದಲ್ಲಿ, ನಾನು ರಾಮನಿಗೆ ಶಾಪ ನೀಡುವೆ ಎನ್ನುತ್ತಾರೆ. ಆಗ ಗೊಂದಲಕ್ಕೆ ಬಿದ್ದ ಲಕ್ಷ್ಮಣ, ನಾನು ಇವರನ್ನು ಒಳಗೆ ಬಿಡದಿದ್ದಲ್ಲಿ, ಇವರು ಅಣ್ಣನಿಗೆ ಶಾಪ ನೀಡುತ್ತಾರೆ. ನಾನು ಇವರನ್ನು ಒಳಗೆ ಬಿಟ್ಟರೆ, ಅಣ್ಣನಿಗೆ ಕೊಟ್ಟ ಮಾತು ಮುರಿದಂತಾಗುತ್ತದೆ. ಶಿಕ್ಷೆ ಏನಿದ್ದರೂ ನನಗೆ ಸಿಗಲಿ, ನಾನೇ ಅಣ್ಣನಲ್ಲಿಗೆ ಹೋಗುತ್ತೇನೆಂದು, ಲಕ್ಷ್ಮಣ ಶ್ರೀರಾಮನ ಬಳಿ ಹೊರಟ.

ಇದನ್ನು ಕಂಡ ರಾಮ, ಲಕ್ಷ್ಮಣನಿಗೆ ಮೃತ್ಯುದಂಡ ನೀಡಲು ಸಾಧ್ಯವಾಗದೇ, ಅವನನ್ನು ರಾಜ್ಯ ಬಿಟ್ಟು ತೆರಳುವಂತೆ ಆಜ್ಞೆ ನೀಡಿದ. ಅಣ್ಣನನ್ನು ಕ್ಷಣಮಾತ್ರ ಬಿಟ್ಟಿರದ ಲಕ್ಷ್ಮಣ ಈ ಶಿಕ್ಷೆಯಿಂದ ಬೇಸರಗೊಂಡು, ರಾಜ್ಯವನ್ನಷ್ಟೇ ಅಲ್ಲ, ಈ ಭೂಮಿಯನ್ನೇ ಬಿಟ್ಟು ಹೋಗಬೇಕೆಂದು ನಿರ್ಧರಿಸಿದ. ಸರಯೂ ನದಿ ದಡಕ್ಕೆ ಹೋಗಿ, ಅಲ್ಲಿ ಶೇಷನಾಗನ ರೂಪ ಧರಿಸಿ, ವಿಷ್ಣು ಲೋಕಕ್ಕೆ ಹೋದ.

ತಮ್ಮ ತನ್ನನ್ನು ಬಿಟ್ಟು ಹೋದ ಕಾರಣ, ಬೇಸರಗೊಂಡಿದ್ದ ರಾಮನೂ ಕೂಡ, ತನ್ನದೂ ಇಂದು ಕಡೆಯ ದಿನ. ತಾನೂ ಭೂಲೋಕ ಬಿಡಬೇಕೆಂದು ನಿರ್ಧರಿಸಿ, ಸರಯೂ ನದಿಯ ಬಳಿ ನಡೆದ. ಅಲ್ಲಿ ನೀರಿನಲ್ಲಿ ಮುಳುಗುತ್ತ, ಮಾಯವಾದ.  ತದನಂತರ ಶೇಷನಾಗನೊಂದಿಗೆ, ಭಕ್ತರಿಗೆ ದರ್ಶನ ನೀಡಿ, ವೈಕುಂಠಕ್ಕೆ ತೆರಳಿದ.

About The Author