ಹಿಂದೂ ಧರ್ಮದಲ್ಲಿ ಯಾರಾದರೂ ಸತ್ತರೆ ಅಥವಾ ಹುಟ್ಟಿದರೆ ಆ ಮನೆಯಲ್ಲಿ 12 ದಿನ ಸೂತಕವನ್ನು ಆಚರಿಸಲಾಗುತ್ತದೆ. ಈ ವೇಳೆ ಯಾರೂ ಬೇರೆಯವರ ಮನೆಗೆ ಹೋಗುವುದಿಲ್ಲ. ಮನೆಗೆ ಯಾರಾದರೂ ಬಂದರೆ, ಅವರನ್ನ ಮುಟ್ಟಿಸಿಕೊಳ್ಳುವುದಿಲ್ಲ. 12ನೇಯ ದಿನಕ್ಕೆ ತಲೆ ಸ್ನಾನ ಮಾಡಿ, ಶುದ್ಧವಾಗಿ, ನಂತರ ಪೂಜೆ ಮಾಡಿ, ಮೈಲಿಗೆ ಕೊನೆಗೊಳಿಸಲಾಗತ್ತೆ. ಯಾಕೆ ಹೀಗೆ ಮಾಡಲಾಗತ್ತೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ಮಗು ಹುಟ್ಟುವುದೆಂದರೆ, ಆ ಮನೆಯಲ್ಲಿ ಸಂತಸದ ಸಮಯವಿದ್ದಂತೆ. ಆದರೆ ಮಗು ಹುಟ್ಟಿ 10 ರಿಂದ 12 ದಿನಗಳ ಕಾಲ ಮನೆಯಲ್ಲಿ ಸೂತಕವಿರುತ್ತದೆ. ಈ ವೇಳೆ ಮನೆಯಲ್ಲಿ ಪೂಜೆ ಮಾಡುವಂತಿಲ್ಲ, ಹೊರಗಿನವರನ್ನು ಮುಟ್ಟುವಂತಿಲ್ಲ. ಬೇರೆಯವರ ಮನೆಗೆ ಹೋಗುವಂತಿಲ್ಲ. ಹೋಮ ಹವನಗಳಲ್ಲಿ ಭಾಗಿಯಾಗುವಂತಿಲ್ಲ. ಹೊಟೇಲ್ಗಳಿಗೆ ಹೋಗುವಂತಿಲ್ಲ. ಅವಶ್ಯಕತೆ ಇದ್ದಲ್ಲಿ ಮಾತ್ರ ಹೊರಗೆ ಹೋಗಿ ಬಂದು, ಸ್ನಾನ ಮಾಡಿದ ಬಳಿಕವೇ, ಮನೆ ಜನರನ್ನು ಮುಟ್ಟಬೇಕು.
ಇದೆಲ್ಲ ಪದ್ಧತಿ ಯಾಕೆ ಮಾಡಿರುವುದು ಎಂದರೆ, ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರಲಿ ಎಂಬ ಕಾರಣಕ್ಕೆ. ಯಾವುದೇ ಸೋಂಕಾಗಲಿ ಬಾಣಂತಿ ಮತ್ತು ಮಗುವಿಗೆ ಬಹುಬೇಗ ತಾಕುತ್ತದೆ. ಹಾಗಾಗಿ ಮನೆಜನ ಸ್ವಚ್ಛತೆಯನ್ನು ಕಾಪಾಡಬೇಕು. ಆದರೆ ಹೊರಗಿನವರು ಮನೆಗೆ ಬಂದರೆ, ಮತ್ತು ಮನೆಯವರು ಹೊರಗೆ ಹೋದರೆ ಬಹುಬೇಗ ಸೋಂಕು ಹರಡುತ್ತದೆ. ಈ ಕಾರಣಕ್ಕೆ ಇಂಥ ಪದ್ಧತಿಯನ್ನ ತರಲಾಗಿದೆ. ಅಲ್ಲದೇ ಗರುಡ ಪುರಾಣದ ಪ್ರಕಾರ, ಹಿಂದೂ ಧರ್ಮದಲ್ಲಿ, ಈ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ಹೇಳಲಾಗಿದೆ. ಇಲ್ಲದಿದ್ದಲ್ಲಿ, ಮನೆಗೆ ಒಳ್ಳೆಯದಾಗುವುದಿಲ್ಲ ಅಂತಲೂ ಹೇಳಲಾಗಿದೆ.

