ನಾನು ಎಷ್ಟು ತಿಂದ್ರೂ ನನಗೆ ಶಕ್ತಿನೇ ಬರಲ್ಲ. ನನಗೆ ಸ್ವಲ್ಪ ಹೊತ್ತು ಕೆಲಸ ಮಾಡಿದ್ರೆ, ಸ್ವಲ್ಪ ಹೊತ್ತು ನಡೆದ್ರೆ ಸುಸ್ತಾಗತ್ತೆ ಅನ್ನೋದು ಹಲವರ ಸಮಸ್ಯೆ. ಯಾಕಂದ್ರೆ ಅವರು ತಿನ್ನುವ ಆಹಾರದಲ್ಲಿ ಪೌಷ್ಠಿಕತೆ ಪೂರ್ಣ ಪ್ರಮಾಣದಲ್ಲಿ ಇರುವುದಿಲ್ಲ. ಹಾಗಾಗಿ ನಾನು ದೇಹದಲ್ಲಿ ಶಕ್ತಿ ತುಂಬಲು, ಹಣ್ಣು- ತರಕಾರಿ, ಬೆಳೆ ಕಾಳುಗಳನ್ನೆಲ್ಲ ತಿನ್ನುವುದು ತುಂಬಾ ಅವಶ್ಯಕ. ಹಾಗಾಗಿ ಇಂದು ದೇಹದಲ್ಲಿ ಶಕ್ತಿ ಹೆಚ್ಚಿಸಲು ನಾವು ಯಾವ ಹಣ್ಣು ತಿನ್ನಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಶಕ್ತಿ ಬರಲು ತಿನ್ನಬೇಕಾದ ಮೊದಲನೇಯ ಹಣ್ಣು ನಿಂಬೆಹಣ್ಣು. ನೀವು ವಾರದಲ್ಲಿ ಎರಡರಿಂದ ಮೂರು ಬಾರಿಯಾದ್ರೂ ಜೇನುತುಪ್ಪ ಬೆರೆಸಿದ ನಿಂಬೆಹಣ್ಣಿನ ಜ್ಯೂಸ್ ಕುಡಿಯಿರಿ. ಅಂಗಡಿಯಲ್ಲಿ ಕುಡಿಯುವ ಬದಲು, ಮನೆಯಲ್ಲೇ ಮಾಡಿ ಕುಡಿದರೆ ಉತ್ತಮ. ಪ್ರತಿದಿನ ನಿಂಬೆ ಜ್ಯೂಸ್ ಕುಡಿಯಬೇಕೆಂದೇನೂ ಇಲ್ಲ. ಹಾಗಾಗಿ ವಾರಕ್ಕೆ ಎರಡರಿಂದ ಮೂರು ಬಾರಿ ನಿಂಬೆ ಶರ್ಬತ್ ಕುಡಿಯಿರಿ.
ಇನ್ನು ಎರಡನೇಯ ಹಣ್ಣು ಹಸಿ ಖರ್ಜೂರ. ಪ್ರತಿದಿನ ಎರಡರಿಂದ ಮೂರು ಖರ್ಜುರವನ್ನು ತಿಂದು ಬಿಸಿ ಬಿಸಿ ಹಾಲು ಕುಡಿಯಿರಿ. ತಿಂಡಿ ತಿನ್ನುವ ಸಮಯದಲ್ಲಿ ಇದನ್ನು ತಿಂದರೂ ಸಾಕು. ಹೀಗೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಅಲ್ಲದೇ ತುಪ್ಪದಲ್ಲಿ ಖರ್ಜೂರವನ್ನು ಅದ್ದಿಟ್ಟು, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡರಿಂದ ಮೂರು ಖರ್ಜುರ ಸೇವಿಸಬಹುದು. ಆದ್ರೆ ಪ್ರತಿದಿನ 4ಕ್ಕಿಂತ ಹೆಚ್ಚು ಖರ್ಜೂರ ಸೇವಿಸಬೇಡಿ. ಹೀಗೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಹೆಚ್ಚುತ್ತದೆ.
ಮೂರನೇಯ ಹಣ್ಣು ಕಲ್ಲಂಗಡಿ ಹಣ್ಣು. ವಾರದಲ್ಲಿ ಮೂರು ದಿನವಾದ್ರೂ ನೀವು ಒಂದು ಬೌಲ್ ಕಲ್ಲಂಗಡಿ ಹಣ್ಣನ್ನ ತಿನ್ನಿ. ಆದ್ರೆ ನೆನಪಿರಲಿ ಕಲ್ಲಂಗಡಿ ತಿನ್ನುವಾಗ ಅದಕ್ಕೆ ಚಾಟ್ಮಸಾಲ, ಉಪ್ಪು, ಏನನ್ನೂ ಬೆರೆಸಬೇಡಿ. ಹಾಗೆ ತಿನ್ನಿ. ಯಾಕಂದ್ರೆ ನೀವು ಕಲ್ಲಂಗಡಿ ಹಣ್ಣನ್ನಷ್ಟೇ ತಿಂದ್ರೆ, ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಪೂರ್ತಿಯಾಗಿ ಸಿಗುತ್ತದೆ. ಚಾಟ್ ಮಸಾಲೆ ಸೇರಿಸಿ ತಿಂದ್ರೆ, ಕಲ್ಲಂಗಡಿ ನೀರು ಮತ್ತು ಚಾಟ್ ಮಸಾಲೆ ಸೇರಿ, ಅದರ ಪೋಷಕಾಂಶ ಒಡೆದುಹೋಗುತ್ತದೆ.
ನಾಲ್ಕನೇಯ ಹಣ್ಣು, ಬಾಳೆ ಹಣ್ಣು. ಎಲ್ಲ ಸೀಸನ್ನಲ್ಲೂ ಧಾರಾಳವಾಗಿ ಸಿಗುವ ಹಣ್ಣಂದ್ರೆ ಬಾಳೆಹಣ್ಣು. ಬಾಡಿ ಬಿಲ್ಡರ್ಗಳ ಸಿಕ್ರೇಟ್ ರೆಸಿಪಿ ಅಂದ್ರೆ ಬನಾನಾ ಮಿಲ್ಕ್ ಶೇಕ್. ಯಾಕಂದ್ರೆ ಬನಾನಾ ಶಕ್ತಿ ಕೊಡುವುದರ ಜೊತೆಗೆ, ನಮ್ಮ ದೇಹದ ವೇಟ್ ಗೇನ್ ಮಾಡಲು ಕೂಡ ಸಹಾಯ ಮಾಡುತ್ತದೆ. ಆದ್ರೆ ನಿಮಗೆ ಬಾಳೆಹಣ್ಣು ತಿಂದ್ರೆ, ಬೇಗ ಶೀತವಾಗುತ್ತದೆ ಎಂದಾದಲ್ಲಿ, ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.
ಐದನೇಯದಾಗಿ ಪೇರಲೆ ಹಣ್ಣು. ಪೇರಲೆ ಹಣ್ಣು ಸೇಬು ಹಣ್ಣಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಹಾಗಾಗಿ ಗರ್ಭಿಣಿಯರು ಸೇಬು ಹಣ್ಣು ತಿನ್ನಲಾಗದಿದ್ದರೂ ಕೂಡ, ಪೇರಲೆ ಹಣ್ಣು ತಿನ್ನಬೇಕು ಅಂತಾ ಹಿರಿಯರು ಹೇಳ್ತಾರೆ. ಪೇರಲೆ ಹಣ್ಣು ತಿನ್ನುವುದರಿಂದ ನಮ್ಮ ದೇಹಕ್ಕೆ ಪೂರ್ಣ ಪ್ರಮಾಣದ ಪೋಷಕಾಂಶಗಳು ದೊರಕಿ, ಶಕ್ತಿ ಸಿಗುತ್ತದೆ.