ಹಿಂದೂ ಪುರಾಣದಲ್ಲಿ ಕೇಳಿಬರುವ ಕಥೆಗಳಲ್ಲಿ ಸತಿ ಸಾವಿತ್ರಿಯ ಕಥೆಯೂ ಒಂದು. ಹಾಗಾಗಿ ಆಕೆಯಂಥ ಪತಿವೃತೆ ಯಾರಿಲ್ಲವೆಂದೂ ಹೇಳುತ್ತಾರೆ. ಇಂದು ನಾವು ಸಾವನ್ನಪ್ಪಿದ್ದ ತನ್ನ ಪತಿಯನ್ನು, ಸತಿ ಸಾವಿತ್ರಿ ಮರಳಿ ಪಡಿದ್ದು ಹೇಗೆ ಅನ್ನೋ ಬಗ್ಗೆ ಸಂಪೂರ್ಣ ಕಥೆಯನ್ನು ತಿಳಿಯೋಣ..
ಅಶುಪತಿ ಎಂಬ ಹೆಸರಿನ ಓರ್ವ ರಾಜನಿದ್ದ. ಅವನ ಮಗಳೇ ಸಾವಿತ್ರಿ. ಸಾವಿತ್ರಿ ಮದುವೆ ವಯಸ್ಸಿಗೆ ಬಂದಾಗ, ರಾಜ ಅವಳಲ್ಲಿ ವರನನ್ನು ಹುಡುಕಿಕೊಳ್ಳುವಂತೆ ಹೇಳುತ್ತಾನೆ. ಆಗ ಆಕೆ ವರನ ಹುಡುಕಾಟದಲ್ಲಿರುತ್ತಾರೆ. ಆ ಸಮಯದಲ್ಲಿ ಆಕೆಗೆ ಶಾಲ್ವದೇಶದ ರಾಜನ ಮಗ ಸತ್ಯವಾನ್ ಇಷ್ಟವಾಗುತ್ತಾನೆ. ಆಕೆ ಅಪ್ಪನ ಬಳಿ ಬಂದು, ನಾನು ಸತ್ಯಾವಾನ್ನನ್ನು ವಿವಾಹವಾಗಲು ಬಯಸುತ್ತೇನೆ ಎನ್ನುತ್ತಾಳೆ.
ಹೀಗೆ ಹೇಳುವಾಗ ಅಲ್ಲೇ ಇದ್ದ ನಾರದರು, ಈ ಬಗ್ಗೆ ದುಃಖಿಸುತ್ತಾರೆ. ಆಗ ರಾಜ, ಯಾಕೆ ಈ ವರನಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂದು ಕೇಳುತ್ತಾನೆ. ಆಗ ನಾರದರು, ಹೌದು, ಈತನ ಆಯಸ್ಸು ಕಡಿಮೆ ಇದೆ. ಅವನು ಇನ್ನು ಒಂದೇ ವರ್ಷದಲ್ಲಿ ಸಾವನ್ನಪ್ಪಲಿದ್ದಾನೆ ಎಂದು ಹೇಳುತ್ತಾರೆ. ಆದರೂ ಕೂಡ ಸಾವಿತ್ರಿ, ನಾನು ನನಗಾಗಿ ವರನನ್ನು ಹುಡುಕಿಯಾಗಿದೆ, ನಾನು ಸತ್ಯವಾನ್‌ನನ್ನೇ ವಿವಾಹವಾಗುತ್ತೇನೆ ಎಂದು ಹೇಳುತ್ತಾಳೆ.
ನಂತರ ಸಾವಿತ್ರಿ ಮತ್ತು ಸತ್ಯಾವನನ ವಿವಾಹವನ್ನು ರಾಜ ಅಶುಪತಿ ಅದ್ಧೂರಿಯಾಗಿ ಮಾಡಿ ಮುಗಿಸುತ್ತಾನೆ. ಹೀಗೆ ವರ್ಷ ಕಳೆಯುತ್ತ ಬರುತ್ತದೆ. ಸತ್ಯಾವನನ ಸಾವು ಸಮೀಪಿಸುತ್ತದೆ. ಇನ್ನೇನು ನಾಲ್ಕನೇ ದಿನಕ್ಕೆ ಸತ್ಯವಾನ್ ಸಾವನ್ನಪ್ಪುತ್ತಾನೆಂದು ಗೊತ್ತಾದ ಹಾಗೆ, ಸಾವಿತ್ರಿ ವೃತಧಾರಣೆ ಮಾಡುತ್ತಾಳೆ. ಹೀಗೆ ಮೂರನೇ ದಿನ ವೃತ ಮುಗಿಸುತ್ತಾಳೆ. ಆ ದಿನ ಸತ್ಯವಾನ್ ಕಟ್ಟಿಗೆ ತರಲೆಂದು ಕಾಡಿಗೆ ಹೋಗುತ್ತಾನೆ. ಆಗ ಸಾವಿತ್ರಿ ತಾನೂ ಬರುತ್ತೇನೆ ಎನ್ನುತ್ತಾಳೆ.
ಸತ್ಯವಾನ್ ಎಷ್ಟೇ ಬೇಡವೆಂದರೂ ಕೇಳದೇ, ಸಾವಿತ್ರಿ ಅವನೊಂದಿಗೆ ಹೋಗುತ್ತಾಳೆ. ಸತ್ಯವಾನ್ ಕಟ್ಟಿಗೆ ಕಡಿಯುತ್ತಿರಬೇಕಾದರೆ, ಅನಾರೋಗ್ಯಕ್ಕೀಡಾಗುತ್ತಾನೆ. ಆಗ ಸಾವಿತ್ರಿ ಅವನನ್ನು ತನ್ನ ತೊಡೆಯ ಮೇಲೆ ಮಲಗಿಸುತ್ತಾಳೆ. ಕೆಲ ಕ್ಷಣಗಳಲ್ಲೇ ಬಂದ ಯಮರಾಜ, ನಾನು ನಿನ್ನ ಪತಿಯನ್ನು ಕೊಂಡೊಯ್ಯಲು ಬಂದಿದ್ದೇನೆ. ನೀನು ಇದಕ್ಕೆ ಯಾವುದೇ ಅಡ್ಡಿ ಪಡಿಸುವಂತಿಲ್ಲ ಎಂದು ಹೇಳುತ್ತಾನೆ.
ಆಗ ಸಾವಿತ್ರಿ ಸರಿ, ನಾನು ಅಡ್ಡಿ ಪಡಿಸುವುದಿಲ್ಲ. ನನಗೆ ಕೆಲ ವರಗಳು ಬೇಕು ಎಂದು ಕೇಳುತ್ತಾಳೆ. ಆಗ ಯಮ, ಸರಿ, ನಿನ್ನ ಪತಿಯ ಪ್ರಾಣ ಬಿಟ್ಟು, ಬೇರೆ ಯಾವ ವರ ಬೇಕೋ ಕೇಳಿಕೋ ಎನ್ನುತ್ತಾನೆ. ಆಗ ಸಾವಿತ್ರಿ, ನನ್ನ ಮಾವನ ದೃಷ್ಟಿ ವಾಪಸ್ ಬರಲಿ ಎನ್ನುತ್ತಾಳೆ. ಯಮ ತಥಾಸ್ತು ಎನ್ನುತ್ತಾನೆ. ನನ್ನ ಮಾವನ ಆಸ್ತಿ, ರಾಜ್ಯವೆಲ್ಲ ಅವರಿಗೆ ವಾಪಸ್ ಸಿಗಲಿ ಎಂದು ಬೇಡುತ್ತಾಳೆ. ಯಮ ತಥಾಸ್ತು ಎನ್ನುತ್ತಾನೆ. ಮೂರನೇಯದಾಗಿ, ನನಗೆ ಸತ್ಯವಾನ್‌ನಿಂದ ನೂರು ಯಶಸ್ವಿ ಪುತ್ರರು ಬೇಕು ಎನ್ನುತ್ತಾಳೆ. ಆಗಲೂ ಯಮ ತಥಾಸ್ತು ಎಂದು ಹೇಳಿ, ಸತ್ಯವಾನನ ಆತ್ಮವನ್ನ ಕೊಂಡೊಯ್ಯುತ್ತಾನೆ.
ಆಗ ಸಾವಿತ್ರಿ, ನನ್ನ ಪತಿಯ ಆತ್ಮವನ್ನು ಯಾಕೆ ಕೊಂಡೊಯ್ಯುತ್ತಿದ್ದೀರಿ. ಅದನ್ನ ಇಲ್ಲೇ ಬಿಟ್ಟು ಹೋಗಿ ಎನ್ನುತ್ತಾಳೆ. ಆಗ ಯಮ, ನಾನು ನಿನಗೆ ಮೊದಲೇ ಹೇಳಿದ್ದೆ, ಪತಿಯ ಪ್ರಾಣವನ್ನು ಬಿಟ್ಟು ಬೇರೆ ಯಾವ ವರ ಬೇಕೋ ಕೇಳು ಎಂದು. ಇನ್ನು ನೀನು ನಿನಗೆ ಬೇಕಾದ ವರ ಕೇಳಿಯೂ ಆಯಿತು. ನಾನು ಕೊಟ್ಟೂ ಆಯಿತು. ಇನ್ನು ನೀನು ನನ್ನ ಕಾರ್ಯಕ್ಕೆ ಅಡ್ಡಿಪಡಿಸದೇ, ಹೊರಡು ಎನ್ನುತ್ತಾನೆ. ಆಗ ಸಾವಿತ್ರಿ, ಅದು ಹೇಗೆ ಸಾಧ್ಯ..? ನಾನು ಸತ್ಯವಾನನಿಂದ ನನಗೆ ನೂರು ಮಕ್ಕಳು ಬೇಕೆಂದಿದ್ದಕ್ಕೆ, ನೀನು ತತಾಸ್ತು ಎಂದಿರಿ. ಈಗ ನೀವು ನನ್ನ ಪತಿಯ ಆತ್ಮವನ್ನು ತೆಗೆದುಕೊಂಡು ಹೋಗುವಂತಿಲ್ಲ ಎನ್ನುತ್ತಾಳೆ. ಸಾವಿತ್ರಿಗೆ ಕೊಟ್ಟ ವರವನ್ನ ಹಿಂಪಡೆಯಲಾಗದೇ, ಸತ್ಯವಾನನ ಆತ್ಮವನ್ನು ಯಮ ಬಿಟ್ಟು ಹೋಗುತ್ತಾನೆ. ಸತ್ಯವಾನ್ ಬದುಕಿ, ಮತ್ತೆ ಮೊದಲಿನಂತಾಗುತ್ತಾನೆ.