ಹೋಟೇಲ್ಗೆ ಹೋದಾಗ, ನಾನ್ ಅಥವಾ ರೋಟಿ, ಕುಲ್ಚಾ ಜೊತೆ ಸಖತ್ ಟೇಸ್ಟಿಯಾಗಿ ಮ್ಯಾಚ್ ಆರೋ ಗ್ರೇವಿ ಅಂದ್ರೆ ಕಾಜು ಮಸಾಲಾ. ಖಾರ ಖಾರವಾಗಿ, ಕ್ರೀಮಿಯಾಗಿರುವ ಗ್ರೇವಿ ಮಧ್ಯೆ ಆಗಾಗ ಸಿಗುವ ಹುರಿದಿರುವ ಗೋಡಂಬಿ ಸಿಕ್ಕಾಗ, ಅದನ್ನು ಸವಿಯುವ ಮಜಾನೇ ಬೇರೆ. ಇದನ್ನ ನೀವು ಮನೆಯಲ್ಲೇ ತಯಾರಿಸಬಹುದು. ಹಾಗಾದ್ರೆ ಕಾಜು ಮಸಾಲ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 4 ಈರುಳ್ಳಿ, ಒಂದು ಕಪ್ ಗೇರುಬೀಜ, ನಾಲ್ಕು ಸ್ಪೂನ್ ತುಪ್ಪ, ಪಲಾವ್ ಎಲೆ- ಚಕ್ಕೆ-ಲವಂಗ-ಏಲಕ್ಕಿ-ಜೀರಿಗೆ ಮಿಶ್ರಣ, ಸಣ್ಣಗೆ ಕತ್ತರಿಸಿದ 6 ಎಸಳು ಬೆಳ್ಳುಳ್ಳಿ, 2 ಸಣ್ಣಗೆ ಕತ್ತರಿಸಿದ ಹಸಿಮೆಣಸು, ಒಂದು ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಚಿಟಿಕೆ ಅರಿಶಿನ, ಒಂದು ಸ್ಪೂನ್ ಖಾರದಪುಡಿ, ಒಂದು ಸ್ಪೂನ್ ಧನಿಯಾ ಪುಡಿ, ಒಂದು ಸ್ಪೂನ್ ಹುರಿದ ಜೀರಿಗೆ ಪುಡಿ, 2 ಸಣ್ಣಗೆ ಕತ್ತರಿಸಿದ ಟೋಮೆಟೋ, ಅರ್ಧ ಚಮಚ ಕಸೂರಿ ಮೇಥಿ, ಅರ್ಧ ಸ್ಪೂನ್ ಗರಂ ಮಸಾಲೆ, ಒಂದು ಕ್ಯೂಬ್ ಬೆಣ್ಣೆ, 2 ಸ್ಪೂನ್ ಫ್ರೆಶ್ ಕ್ರೀಮ್, ಕೊಂಚ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ, ಆ ಕುದಿಯುವ ನೀರಿಗೆ 2 ಉದ್ದುದ್ದಕ್ಕೆ ಕತ್ತರಿಸಿದ ಈರುಳ್ಳಿ, ಅರ್ಧ ಕಪ್ ಗೋಡಂಬಿ ಸೇರಿಸಿ ಮಿಕ್ಸ್ ಮಾಡಿ. ಅದು ಬೆಂದ ಬಳಿಕ, ನೀರು ಬೇರೆಯಾಗುವಂತೆ ಗಾಳಿಸಿ. ಈಗ ಬೆಂದ ಈರುಳ್ಳಿ ಮತ್ತು ಗೋಡಂಬಿಯನ್ನು ಮಿಕ್ಸಿ ಜಾರ್ಗೆ ಹಾಕಿ, ಪೇಸ್ಟ್ ಮಾಡಿ. ಈಗ ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಎರಡು ಸ್ಪೂನ್ ತುಪ್ಪ ಹಾಕಿ, ಇನ್ನುಳಿದ ಅರ್ಧ ಕಪ್ ಗೋಡಂಬಿ ಸೇರಿಸಿ, ಹುರಿಯಿರಿ.
ನಂತರ ಗೋಡಂಬಿಯನ್ನು ಪ್ಲೇಟ್ನಲ್ಲಿ ತೆಗೆದಿಟ್ಟು, ಇದೇ ಪ್ಯಾನ್ಗೆ ಮತ್ತೆರಡು ಸ್ಪೂನ್ ಎಣ್ಣೆ ಹಾಕಿ, ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಬೆಳ್ಳುಳ್ಳಿ, ಹಸಿ ಮೆಣಸು, 2 ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಚಿಟಿಕೆ ಅರಿಶಿನ, ಖಾರದಪುಡಿ ಸೇರಿಸಿ ಹುರಿಯಿರಿ. ನಂತರ ಇದಕ್ಕೆ ಧನಿಯಾ ಪುಡಿ, ಜೀರಿಗೆ ಪುಡಿ ಹಾಕಿ, ಒಂದು ಲೋಟ ನೀರು ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ.
ನಂತರ 5 ನಿಮಿಷ ಇದನ್ನು ಮಂದ ಉರಿಯಲ್ಲಿ ಕುದಿಸಿ. ಇದಾದ ಬಳಿಕ ಈ ಮಿಶ್ರಣಕ್ಕೆ ಎರಡು ಸಣ್ಣಗೆ ಕತ್ತರಿಸಿದ ಟೋಮೆಟೋ, ಉಪ್ಪು ಸೇರಿಸಿ, ಚೆನ್ನಾಗಿ ಹುರಿಯಿರಿ. ನಂತರ ಮಂದ ಉರಿಯಲ್ಲಿ 10 ನಿಮಿಷ ಕುದಿಯಲು ಬಿಡಿ. ಈಗ ಪೇಸ್ಟ್ ಮಾಡಿಟ್ಟುಕೊಂಡ, ಈರುಳ್ಳಿ ಮತ್ತು ಗೋಡಂಬಿ ಮಿಶ್ರಣವನ್ನು ಇದಕ್ಕೆ ಸೇರಿಸಿ. ನಂತರ ಹುರಿದಿಟ್ಟುಕೊಂಡ ಗೋಡಂಬಿ, ಕಸೂರಿ ಮೇಥಿ, ಗರಂ ಮಸಾಲೆ ಪುಡಿ, ಎರಡು ಸ್ಪೂನ್ ಕ್ರೀಮ್, ಬೆಣ್ಣೆ, ಫ್ರೆಶ್ ಕ್ರೀಮ್, ಕೊತ್ತೊಂಬರಿ ಸೊಪ್ಪನ್ನ ಸೇರಿಸಿ, ಮಿಕ್ಸ್ ಮಾಡಿದ್ರೆ, ಕಾಜು ಮಸಾಲೆ ರೆಡಿ. ಇದನ್ನ ಚಪಾತಿ, ರೋಟಿ, ನಾನ್ ಜೊತೆ ಸವಿಯಿರಿ.




