ನೀವು ಮನೆಯಲ್ಲಿ ಚಪಾತಿ, ರೊಟ್ಟಿ ತಯಾರಿಸಿದಾಗ, ಅದರ ಜೊತೆ ಯಾವ ಗ್ರೇವಿ ತಯಾರಿಸಬೇಕು ಅಂತಾ ಕನ್ಫ್ಯೂಷನ್‌ನಲ್ಲಿ ಇದ್ರೆ, ಒಮ್ಮೆ ಬದನೆ ಗ್ರೇವಿ ಟ್ರೈ ಮಾಡಿ ನೋಡಿ. ಹಾಗಾದ್ರೆ ಬದನೆ ಗ್ರೇವಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ನಾಲ್ಕು ಬದನೆಕಾಯಿ, ಎರಡು ಈರುಳ್ಳಿ, ಕೊಂಚ ಸಣ್ಣಗೆ ಹೆಚ್ಚಿದ ಕೊತ್ತೊಂಬರಿ ಸೊಪ್ಪು, ಒಂದು ಸ್ಪೂನ್ ಖಾರದ ಪುಡಿ, ಚಿಟಿಕೆ ಅರಿಶಿನ, ಚಿಟಿಕೆ ಇಂಗು, 2 ಸ್ಪೂನ್ ಜೀರಿಗೆ, 2 ಸ್ಪೂನ್ ಕೊತ್ತೊಂಬರಿ ಕಾಳು, ಅರ್ಧ ಸ್ಪೂನ್ ಮೆಂತ್ಯೆ ಕಾಳು, 2 ಸ್ಪೂನ್ ಉದ್ದಿನ ಬೇಳೆ, 2 ಸ್ಪೂನ್ ಕಡಲೆ ಬೇಳೆ, 4 ಒಣ ಮೆಣಸಿನಕಾಯಿ, ಒಂದು ಕಪ್ ತೆಂಗಿನತುರಿ, ಚಿಕ್ಕ ತುಂಡು ಬೆಲ್ಲ. ಕೊಂಚ ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ ಎರಡು ಸ್ಪೂನ್ ಎಣ್ಣೆ, ಚಿಟಿಕೆ ಸಾಸಿವೆ, ಅರ್ಧ ಸ್ಪೂನ್ ಜೀರಿಗೆ, ಕೊಂಚ ಉದ್ದಿನಬೇಳೆ, ಕಡಲೆಬೇಳೆ, 10 ಎಸಳು ಕರಿಬೇವು.
ಮಾಡುವ ವಿಧಾನ: ಮೊದಲು ಒಂದು ಪ್ಯಾನ್‌ಗೆ ಎಣ್ಣೆ ಹಾಕಿ, ಜೀರಿಗೆ, ಉದ್ದಿನ ಬೇಳೆ, ಕಡಲೆಬೇಳೆ, ಒಣಮೆಣಸು, ಮೆಂತ್ಯೆಕಾಳು, ಕೊತ್ತೊಂಬರಿಕಾಳು, ತೆಂಗಿನತುರಿ ಹಾಕಿ ಒಂದೊಂದಾಗಿ ಹುರಿದುಕೊಳ್ಳಿ. ಈ ಮಿಶ್ರಣವನ್ನ ಮಿಕ್ಸಿ ಜಾರ್‌ಗೆ ಹಾಕಿ, ಹುಣಸೆಹಣ್ಣು ಸೇರಿಸಿ ರುಬ್ಬಿ, ಗ್ರೇವಿ ರೆಡಿಮಾಡಿಕೊಳ್ಳಿ. ಈಗ ಪ್ಯಾನ್‌ಗೆ ನಾಲ್ಕು ಸ್ಪೂನ್ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ, ಅದಕ್ಕೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು ಹಾಕಿ ಹುರಿಯಿರಿ. ನಂತರ ಇದಕ್ಕೆ ಈರುಳ್ಳಿ ಹಾಕಿ ಹುರಿಯಿರಿ. ಈಗ ಇದಕ್ಕೆ ಇಂಗು ಸೇರಿಸಿ.
ಇದಾದ ಬಳಿಕ ಬದನೆಕಾಯಿ ಹಾಕಿ ಹುರಿದು, ಅರ್ಧ ಲೋಟ ನೀರು ಹಾಕಿ, ಮುಚ್ಚಳ ಮುಚ್ಚಿ 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಈಗ ರೆಡಿ ಮಾಡಿಕೊಂಡ ಗ್ರೇವಿ ಹಾಕಿ, ಮಿಕ್ಸ್ ಮಾಡಿ, ಇದಕ್ಕೆ ಕೊಂಚ ಬೆಲ್ಲ ಮತ್ತು ಉಪ್ಪು ಸೇರಿಸಿ. ಬೇಕಾದಲ್ಲಿ ಮತ್ತೆ ಚುರು ನೀರು ಸೇರಿಸಿ, ಮಂದ ಉರಿಯಲ್ಲಿ 10 ನಿಮಿಷ ಬೇಯಿಸಿ. ಈಗ ಗ್ರೇವಿ ರೆಡಿ. ಇದಕ್ಕೆ ಕೊತ್ತೊಂಬರಿ ಸೊಪ್ಪನಿಂದ ಗಾರ್ನಿಶ್ ಮಾಡಿ.
ಇದಕ್ಕೆ ಈರುಳ್ಳಿ ಮತ್ತು ಕೊತ್ತೊಂಬರಿ ಸೊಪ್ಪು ಬಳಸದೆಯೂ ಇದನ್ನು ತಯಾರಿಸಬಹುದು..