Monday, December 23, 2024

Latest Posts

ಮಹಾರಾಷ್ಟ್ರದ ಫೇಮಸ್ ಖಾದ್ಯ ವಡಾಪಾವನ್ನ ನೀವು ಮನೆಯಲ್ಲೇ ತಯಾರಿಸಬಹುದು..

- Advertisement -

ಮಹಾರಾಷ್ಟ್ರದ ತಿಂಡಿಯಾಗಿರುವ ವಡಾಪಾವ್‌ನ್ನ ಭಾರತದ ಎಲ್ಲೆಡೆ ಜನ ಇಷ್ಟಾಪಟ್ಟು ತಿಂತಾರೆ. ಕರ್ನಾಟಕದಲ್ಲೂ ವಡಾಪಾವ್ ಫ್ಯಾನ್ಸ್ ಇದ್ದಾರೆ. ನಿಮಗೂ ವಡಾಪಾವ್ ಇಷ್ಟಾ ಅಂದ್ರೆ, ನೀವು ಇದನ್ನ ಮನೆಯಲ್ಲೇ ತಯಾರಿಸಿ ತಿನ್ನಬಹುದು. ಹಾಗಾದ್ರೆ ವಡಾಪಾವ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಬನ್, ನಾಲ್ಕು ಬೇಯಿಸಿದ ಆಲೂಗಡ್ಡೆ, ಎರಡು ಈರುಳ್ಳಿ, 2 ಹಸಿ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, ಅರ್ಧ ಸ್ಪೂನ್ ಜೀರಿಗೆ, ಅರ್ಧಸ್ಪೂನ್ ಸೋಂಪು, ಅರ್ಧ ಸ್ಪೂನ್ ಗರಂ ಮಸಾಲೆ, ಅರ್ಧ ಸ್ಪೂನ್ ಜೀರಿಗೆ ಪುಡಿ, ಅರ್ಧ ಸ್ಪೂನ್ ಧನಿಯಾ, ಚಿಟಿಕೆ ಅರಿಶಿನ, ಕೊಂಚ ಕೊತ್ತೊಂಬರಿ ಸೊಪ್ಪು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಬ್ಯಾಟರ್ ತಯಾರಿಸಲು: ಎರಡು ಕಪ್ ಜರಡಿ ಮಾಡಿ ಕ್ಲೀನ್ ಮಾಡಿಕೊಂಡ ಕಡಲೆ ಹಿಟ್ಟು, ಕಾಲು ಸ್ಪೂನ್ ವೋಮ, ಕಾಲು ಸ್ಪೂನ್ ಖಾರದ ಪುಡಿ, ಚಿಟಿಕೆ ಇಂಗು, ನೀರು, ರುಚಿಗೆ ತಕ್ಕಷ್ಟು ಉಪ್ಪು.

ಚಟ್ನಿ ಮತ್ತು ಚಟ್ನಿ ಪುಡಿ ತಯಾರಿಸಲು: ಒಂದು ಕಪ್ ಖಾರಾ ಬೂಂದಿ, 15 ಬೆಳ್ಳುಳ್ಳಿ ಎಸಳು, ಒಂದು ಸ್ಪೂನ್ ಖಾರದ ಪುಡಿ, ಎರಡು ಹಸಿ ಮೆಣಸಿನಕಾಯಿ, 2 ಲವಂಗ, ಅರ್ಧ ಕಪ್ ಕೊತ್ತೊಂಬರಿ ಸೊಪ್ಪು, ಚಿಕ್ಕ ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಕಡಲೆ ಹಿಟ್ಟು, ವೋಮ, ಉಪ್ಪು, ಖಾರದ ಪುಡಿ, ಇಂಗು, ಉಪ್ಪು ಮತ್ತು ನೀರು ಹಾಕಿ, ಬೋಂಡಾಗೆ ಬೇಕಾಗಿರುವ ಬ್ಯಾಟರ್ ರೆಡಿ ಮಾಡಿಕೊಳ್ಳಿ. ನಂತರ ಎರಡು ರೀತಿಯ ಚಟ್ನಿ ತಯಾರಿಸಿಕೊಳ್ಳಿ. ಒದಲನೇಯದ್ದು ಕೊತ್ತೊಂಬರಿ ಸೊಪ್ಪಿನ ಚಟ್ನಿ. ಕೊತ್ತೊಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಲವಂಗ, ಶುಂಠಿ, 15 ಎಸಳು ಬೆಳ್ಳುಳ್ಳಿಯಲ್ಲಿ 5 ಎಸಳು ಬೆಳ್ಳುಳ್ಳಿ, ಉಪ್ಪು. ಇವಿಷ್ಟನ್ನು ಮಿಕ್ಸಿ ಜಾರ್‌ಗೆ ಹಾಕಿ, ಚಟ್ನಿ ರೆಡಿ ಮಾಡಿಕೊಳ್ಳಿ.

ಚಟ್ನಿಪುಡಿ ತಯಾರಿಸಲು ಖಾರಾ ಬೂಂದಿ ಬೇಕು. ಅಥವಾ ನೀವು ತಯಾರಿಸಿರುವ ಬಜ್ಜಿ ಬ್ಯಾಟರ್‌ನಿಂದಾನೇ ಖಾರಾ ಬೂಂದಿ ತಯಾರಿಸಿಕೊಳ್ಳಿ. ನಂತರ 10 ಬೆಳ್ಳುಳ್ಳಿ ಎಸಳನ್ನ ಕೂಡ ಕರಿದುಕೊಳ್ಳಿ. ಇವೆರಡನ್ನು ಮಿಕ್ಸಿ ಜಾರ್‌ಗೆ ಹಾಕಿ, ಚಿಟಿಕೆ ಉಪ್ಪು, ಮತ್ತು ಅರ್ಧ ಸ್ಪೂನ್ ಖಾರದಪುಡಿಯೊಂದಿಗೆ ಪುಡಿ ಮಾಡಿದ್ರೆ, ಚಟ್ನಿ ಪುಡಿ ರೆಡಿ.

ಈಗ ಬೇಯಿಸಿದ ಆಲೂಗಡ್ಡೆಯನ್ನು ಸ್ಮ್ಯಾಶ್ ಮಾಡಿಟ್ಟುಕೊಳ್ಳಿ. ಒಂದು ಮಸಾಲೆ ಕುಟ್ಟುವ ಬೌಲ್‌ನಲ್ಲಿ ಹಸಿಮೆಣಸಿನಕಾಯಿ, ಶುಂಠಿ, ಕೊತ್ತೊಂಬರಿ ಸೊಪ್ಪು, ಜೀರಿಗೆ, ಸೋಂಪು, ಹಾಕಿ ಕುಟ್ಟಿ ತರಿತರಿಯಾಗಿ ಪುಡಿ ಮಾಡಿ. ಈಗ ಅವಶ್ಯಕತೆ ಇದ್ದಲ್ಲಿ ಮಾತ್ರ ಈರುಳ್ಳಿ ಬಳಸಿ. ಈರುಳ್ಳಿ ಇಲ್ಲದೆಯೂ ವಡಾಪಾವ್‌ಗೆ ಬೇಕಾಗಿರುವ ಬೋಂಡಾ ತಯಾರಿಸಬಹುದು. ಸ್ಮ್ಯಾಶ್ ಮಾಡಿಕೊಂಡ ಬಟಾಟೆಗೆ, ಸಣ್ಣಗೆ ಕತ್ತರಿಸಿದ ಈರುಳ್ಳಿ, ಪುಡಿ ಮಾಡಿದ ಮಸಾಲೆ ಮಿಶ್ರಣ, ಅರಿಶಿನ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆ ತಯಾರಿಸಿ.

ಇದಕ್ಕೆ ಕಟ್ಲೇಟ್ ಶೇಪ್ ಕೊಟ್ಟು ಹಿಟ್ಟಿನಲ್ಲಿ ಅದ್ದಿ, ಎಣ್ಣೆಯಲ್ಲಿ ಕರೆದು ವಡಾ ರೆಡಿ ಮಾಡಿಕೊಳ್ಳಿ. ನಂತರ ಬನ್ ಎರಡು ಭಾಗಗಳಾಗಿ ಕತ್ತರಿಸಿ ನೀವು ತಯಾರಿಸಿಟ್ಟುಕೊಂಡ ಗ್ರೀನ್ ಚಟ್ನಿ ಮತ್ತು ಚಟ್ನಿ ಪುಡಿಯನ್ನ ಬನ್‌ಗೆ ಹಚ್ಚಿ. ಅದರ ಮಧ್ಯೆ ಬಟಾಟೆ ವಡಾ ಇಟ್ಟು ವಡಾಪಾವ್ ಸವಿಯಿರಿ. ನೀವು ಇದರೊಂದಿಗೆ ಕರಿದ ಹಸಿಮೆಣಸಿನಕಾಯಿಯನ್ನ ಕೂಡ ಬಳಸಬಹುದು.

- Advertisement -

Latest Posts

Don't Miss