ಇಂದಿನ ಕಾಲದಲ್ಲಿ ಜನರು ಸೇವಿಸುತ್ತಿರುವ ಆಹಾರಗಳಿಂದಲೇ, ತರಹೇವಾರಿ ರೋಗಗಳು ಬರುತ್ತಿದೆ. ಇಂದಿನ ಕಾಲದ ಯುವ ಪೀಳಿಗೆಯವರಂತೂ, ಮದುವೆಗೂ ಮುನ್ನವೇ ಕೀಲು ನೋವು ಎಂದು ಒದ್ದಾಡುತ್ತಿದ್ದಾರೆ. ಹಾಗಾದ್ರೆ ಕೀಲು ನೋವು ಬರಲು ಕಾರಣವೇನು..? ಮತ್ತು ಇದಕ್ಕೆ ಹೇಗೆ ಪರಿಹಾರ ಮಾಡಿಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ..
ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದಲ್ಲಿ, ಹೊಟ್ಟೆಯ ಸಮಸ್ಯೆ, ಗ್ಯಾಸ್ಟಿಕ್ ಸಮಸ್ಯೆ ಇದ್ದಲ್ಲಿ, ಕೀಲು ನೋವು ಬರುತ್ತದೆ. ದೇಹದಲ್ಲಿ ವಾಯುವಿನ ಪ್ರಮಾಣ ಹೆಚ್ಚಾದಾಗ, ಕೀಲು ನೋವು ಸಂಭವಿಸುತ್ತದೆ. ಹಾಗಾಗಿ ಕೀಲು ನೋವು ಬರಬಾರದು ಎಂದಲ್ಲಿ, ನೀವು ಗ್ಯಾಸ್ಟಿಕ್ ಆಗದಂತೆ ನೋಡಿಕೊಳ್ಳಿ. ಸಮಯಕ್ಕೆ ತಕ್ಕಂತೆ ಆಹಾರ ಸೇವಿಸಿ. ಹೊಟ್ಟೆ ಖಾಲಿ ಇದ್ದಾಗ, ಮೊದಲು ನೀರು ಕುಡಿಯಿರಿ, ನಂತರ ಆರೋಗ್ಯಕರ ಆಹಾರ ಸೇವಿಸಿ. ಖಾಲಿ ಹೊಟ್ಟೆಯಲ್ಲಿ ಜಂಕ್ ಫುಡ್ ಸೇವನೆ ಮಾಡುವುದರಿಂದ, ಗ್ಯಾಸ್ಟಿಕ್ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಅನಾರೋಗ್ಯಕರ ಆಹಾರ ಸೇವನೆ ಮಾಡಬೇಡಿ.
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಇದು ಎಲ್ಲ ರೀತಿಯ ರೋಗಗಳಿಗೂ ಮದ್ದಾಗಿದೆ. ಹೀಗೆ ಮಾಡುವುದರಿಂದ ಆರೋಗ್ಯಕರವಾಗಿ, ಹೊಟ್ಟೆ ಕ್ಲೀನ್ ಆಗುತ್ತದೆ. ಹೊಟ್ಟೆ ಸರಿಯಾಗಿ ಕ್ಲೀನ್ ಆದಾಗ, ಜೀರ್ಣಕ್ರಿಯೆ ಸರಿಯಾಗಿ ಇರುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆದಾಗ, ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ.
ವಾರದಲ್ಲಿ ಒಂದು ದಿನ ಪೂರ್ತಿ ಆರೋಗ್ಯಕರ ಆಹಾರವನ್ನೇ ಸೇವಿಸಿ. ಆ ದಿನ ನೀವು ಅನ್ನ, ಸಾರು, ಚಪಾತಿ, ಪಲ್ಯ, ಜಂಕ್ ಫುಡ್, ಟೀ, ಕಾಫಿ ಇದ್ಯಾವೂದನ್ನೂ ಸೇವಿಸಬಾರದು. ಬರೀ ಹಣ್ಣು, ಹಣ್ಣಿನ ರಸ, ಎಳನೀರು, ಹಾಲು, ಮೊಸರು, ಮಜ್ಜಿಗೆ, ರಾಗಿ ಅಂಬಲಿ, ಗಂಜಿ. ಇಂಥದ್ದನ್ನೇ ಸೇವಿಸಬೇಕು. ಆ ದಿನ ನಿಮ್ಮ ಆಹಾರದ ಲೀಸ್ಟ್‌ನಲ್ಲಿ ಬರೀ ಆರೋಗ್ಯಕರ ಊಟವೇ ಇರಬೇಕು ಹೊರತು, ಮಸಾಲೆ ಪದಾರ್ಥ, ರುಚಿಕರ ಪದಾರ್ಥ ಯಾವುದೂ ಇರಬಾರದು. ಇದು ಕೀಲು ನೋವು ಕಡಿಮೆ ಮಾಡುವುದರ ಜೊತೆಗೆ, ಇನ್ನಿತರ ಸಮಸ್ಯೆಗಳನ್ನ ಕೂಡ ತೊಡೆದು ಹಾಕುತ್ತದೆ.
ಸೀಸನಲ್ ಫ್ರೂಟ್ಸ್, ಚೆನ್ನಾಗಿ ತಿನ್ನಿ. ವಾರಕ್ಕೆ ಎರಡು ಬಾರಿಯಾದರೂ, ಹರಳೆಣ್ಣೆಯಿಂದ ನಿಮ್ಮ ದೇಹಕ್ಕೆ ಮಸಾಜ್ ಮಾಡಿ, ಬೆಳಗ್ಗಿನ ಸೂರ್ಯನ ತಿಳಿ ಬಿಸಿಲಿಗೆ ಮೈಯೊಡ್ಡಿ ನಿಲ್ಲಿ. ಇದರಿಂದ ಕೀಲು ನೋವು ಕಡಿಮೆಯಾಗುವುದಲ್ಲದೇ, ನಿಮ್ಮ ದೇಹಕ್ಕೆ ವಿಟಾಮಿನ್ ಡಿ ಕೂಡ ಸಿಗುತ್ತದೆ. ಯಾವ ಆಹಾರ ತಿಂದರೆ, ನಿಮ್ಮ ದೇಹದಲ್ಲಿ ವಾಯು ಹೆಚ್ಚುತ್ತದೆ ಎಂದು ನಿಮಗೆ ಅನ್ನಿಸುತ್ತದೆಯೋ, ಆ ಆಹಾರವನ್ನು ಸೇವಿಸಬೇಡಿ. ಟೀ, ಕಾಫಿ ಸೇವನೆಗಿಂತ, ಕಶಾಯ, ಹಾಲಿನ ಸೇವನೆ ಅತ್ಯುತ್ತದೆ.