Beauty Tips: ಹಲವರಿಗೆ ತಾವು ಬೆಳಿಗ್ಗೆ ಬೇಗ ಏಳಬೇಕು. ಓದಬೇಕು. ಅಥವಾ ತಮ್ಮ ಕೆಲಸವನ್ನು ಬೇಗ ಮಾಡಬೇಕು ಅನ್ನೋ ಆಸೆ ಇರುತ್ತದೆ. ಅಥವಾ ಬೇಗ ಎದ್ದು ವಾಕಿಂಗ್ ಹೋಗಬೇಕು. ಯೋಗ ಮಾಡಬೇಕು, ಜಿಮ್ ಹೋಗಬೇಕು. ಹೀಗೆ ಹಲವು ಆಸೆಗಳಿರತ್ತೆ. ಆದ್ರೆ ಬೆಳಗ್ಗಿನ ಸಿಹಿ ನಿದ್ರೆ, ಆ ಆಸೆಗಳಿಗೆಲ್ಲಾ ತಣ್ಣೀರೆರೆಚಿ ಬಿಡತ್ತೆ. ಹಾಗಾದ್ರೆ ತಪ್ಪು ನಿಮ್ಮದಾ..? ನಿದ್ದೇದಾ..? ಖಂಡಿತ ತಪ್ಪು ನಿಮ್ಮದೇ. ನೀವು ಮಾಡುವ ಕೆಲ ತಪ್ಪುಗಳೇ ನೀವು ಲೇಟಾಗಿ ಏಳಲು ಕಾರಣವಾಗಿದೆ. ಹಾಗಾದ್ರೆ ಆ ತಪ್ಪುಗಳೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು, ಅಲಾಂ ಬಡೆದುಕೊಂಡರೂ, ಮತ್ತೆ ಅದನ್ನು ಸ್ನೂಜ್‌ಗೆ ಹಾಕಿ, ಮತ್ತೊಂದು 10 ನಿಮಿಷ ನಿದ್ರಿಸುವುದು. ಉದಾಹರಣೆಗೆ 6 ಗಂಟೆಗೆ ಅಲಾಂ ಇಟ್ಟು ಮಲಗಿರುತ್ತೀರಿ. ಅದು 6 ಗಂಟೆಗೆ ನಿಮ್ಮನ್ನು ಎಬ್ಬಿಸುತ್ತದೆ. ಜೊತೆಗೆ ಇನ್ನೊಂದು 10 ನಿಮಿಷ ಮಲಗಬಹುದು ಎಂಬ ಆಯ್ಕೆಯೂ ಕೊಡುತ್ತದೆ. ನೀವು ಅಲಾಂ ಸೌಂಡಿಗೆ ಏಳದೇ, ಇನ್ನೊಂದು 10 ನಿಮಿಷ ನಿದ್ದೆ ಮಾಡುವುದನ್ನೇ ಆಯ್ಕೆ ಮಾಡುತ್ತೀರಿ. ಈ ತಪ್ಪಿನಿಂದ ಎಷ್ಟೋ ಜನ, 6 ಗಂಟೆಗೆ ಏಳುವುದು ಬಿಟ್ಟು, 10 ನಿಮಿಷ 10 ನಿಮಿಷವೆಂದು ಹೇಳಿ, 7 ಗಂಟೆಗೆ ಏಳುತ್ತಾರೆ. ಹಾಗಾಗಿ ಅಲಾಂ ಬಡಿದ ತಕ್ಷಣ ಏಳಬೇಕೇ ಹೊರತು, 10 ನಿಮಿಷ ಮಲಗುವುದನ್ನು ಆಯ್ಕೆ ಮಾಡಿಕೊಳ್ಳಬಾರದು.
ಎರಡನೇಯ ತಪ್ಪು ನಿಮ್ಮ ಫೋನ್‌ನಲ್ಲಿ ಅಲಾಂ ಇಟ್ಟು, ಫೋನನ್ನ ನಿಮ್ಮ ಪಕ್ಕದಲ್ಲೇ ಇರಿಸಿಕೊಳ್ಳುವುದು. ನಿಮಗೆ ನಿಜವಾಗಲೂ ಬೆಳಿಗ್ಗೆ ಬೇಗ ಎದ್ದು, ನಿಮ್ಮ ಆಸೆಯನ್ನು ನೆರವೇರಿಸಿಕೊಳ್ಳಬೇಕು ಎಂದಲ್ಲಿ, ನೀವು ನಿಮ್ಮ ಮೊಬೈಲನ್ನು ದೂರದಲ್ಲಿ ಇಡಿ. ಬೆಳಿಗ್ಗೆ ಅಲಾಂ ಆದ ಬಳಿಕ, ನೀವು ಆ ಮೊಬೈಲ್‌ನಲ್ಲಿ ಅಲಾಂ ಆಫ್ ಮಾಡಲು ಎದ್ದು ಹೋಗುವಾಗ, ನಿಮ್ಮ ನಿದ್ದೆ ಹಾರಿಹೋಗಿರಬೇಕು. ಆದರೆ ನೀವು ದೂರವಿಟ್ಟ ಮೊಬೈಲ್‌ನ ಆಲಾಂ ಆಫ್ ಮಾಡಿ, ಮತ್ತೆ ಬಂದು ಮಲಗಿದರೆ, ನೀವು ಉದ್ಧಾರವಾಗಲು ಸಾಧ್ಯವೇ ಇಲ್ಲ.
ಮೂರನೇಯ ತಪ್ಪು ನೀವು ರಾತ್ರಿ ಮಲಗುವ ತನಕ ಫೋನ್ ಬಳಸೋದು. ಹೀಗೆ ಮಾಡುವುದರಿಂದ ಲೇಟ್ ಆಗಿ ನಿದ್ದೆ ಬರತ್ತೆ. ಆಗ ನಿದ್ದೆ ಕಡಿಮೆ ಅನ್ನಿಸುತ್ತೆ. ಹಾಗಾಗಿ ಬೆಳಿಗ್ಗೆ ಬೇಗ ಏಳಲು ಸಾಧ್ಯವಾಗುವುದಿಲ್ಲ. ಮಲಗಲು ಅರ್ಧ ಗಂಟೆ ಇರುವಾಗಲೇ, ಮೊಬೈಲ್ ದೂರವಿರಿಸಿ. ಪುಸ್ತಕ ಓದಿ. ಅಥವಾ ಹರಟೆ ಹೊಡೆಯಿರಿ. ಬಳಿಕ ಮಲಗಿ.