Spiritual: ಕರ್ನಾಟಕದಲ್ಲಿರುವ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕೂಡ ಒಂದು. ದಕ್ಷಿಣ ಕನ್ನಡದ ದೇವಸ್ಥಾನಗಳ ದರ್ಶನಕ್ಕೆಂದು ಬರುವವರು, ಕೊಲ್ಲೂರು ಮೂಕಾಂಬಿಕೆಯ ದರ್ಶನ ಮುಗಿಸಿಯೇ ಹೋಗಬೇಕು. ಆಗಲೇ ದಕ್ಷಿಣದ ದೇವಿಯರ ದರ್ಶನ ಪೂರ್ಣವಾಗುವುದು. ಇಂದು ಮೂಕಾಂಬಿಕೆ ಕೊಲ್ಲೂರಿಗೆ ಬಂದು ನೆಲೆಸಿದ್ದು ಹೇಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ದೇವಸ್ಥಾನ, ಬರೀ ಕರ್ನಾಟಕದಲ್ಲಿ ಮಾತ್ರವಲ್ಲದೇ, ಭಾರತದಲ್ಲೂ ಪ್ರಸಿದ್ಧವಾಗಿದೆ. ಎಷ್ಟೋ ಸೆಲೆಬ್ರಿಟಿಗಳು, ರಾಜಕಾರಣಿಗಳು, ಉದ್ಯಮಿಗಳು ರಾಜ್ಯ ಬಿಟ್ಟು ಹೊರ ರಾಜ್ಯಕ್ಕೆ ಹೋಗಿದ್ದರೂ ಕೂಡ, ವರ್ಷಕ್ಕೊಮ್ಮೆಯಾದರೂ, ಕೊಲ್ಲೂರಿಗೆ ಬಂದು ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿ ಹೋಗುತ್ತಾರೆ.
ಸರಿಯಾಗಿ ಮಾತು ಬಾರದವರು, ಅಥವಾ ಎರಡು ವರ್ಷವಾದರೂ ಸರಿಯಾಗಿ ಮಾತನಾಡಲು ಬರದ ಮಕ್ಕಳನ್ನು ತಾಯಿಯ ಸನ್ನಿಧಿಗೆ ಕರೆತಂದರೆ, ಆಕೆಯ ಆಶೀರ್ವಾದದಿಂದ ಅವರ ವಾಗ್ದೋಷ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೇ, ಹಲವರು ತಮ್ಮ ಮಕ್ಕಳನ್ನು ಅಕ್ಷರಾಭ್ಯಾಸಕ್ಕಾಗಿ ಕೊಲ್ಲೂರಿಗೆ ಕರೆತರುತ್ತಾರೆ.
ಅದ್ವೈತ ತತ್ವವನ್ನು ಸಾರಿದ ಆದಿ ಶಂಕರಾಚಾರ್ಯರು, ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನವನ್ನು ನಿರ್ಮಿಸಿದರೆಂದು ಹೇಳಲಾಗುತ್ತದೆ. ಇಲ್ಲಿನ ಮೂರ್ತಿಯನ್ನು ಪಂಚಲೋಹದಿಂದ ತಯಾರಿಸಲಾಗಿದ್ದು, 1200 ವರ್ಷ ಹಳೆಯ ದೇವಸ್ಥಾನ ಇದಾಗಿದೆ. ಶಂಕರಾಚಾರ್ಯರ ಧ್ಯಾನಕ್ಕೆ ಒಲಿದ ದೇವಿ, ಅವರ ಮುಂದೆ ಪ್ರತ್ಯಕ್ಷಳಾಗಿ ಆಶೀರ್ವದಿಸಿದಳಂತೆ. ಲೋಕ ಕಲ್ಯಾಣಕ್ಕಾಗಿ ತಾನು ಭೂಲೋಕದಲ್ಲಿ ನೆಲೆನಿಲ್ಲುತ್ತೇನೆ, ನನಗೊಂದು ದೇವಸ್ಥಾನ ನಿರ್ಮಿಸೆಂದು ಕೇಳಿದಳು. ಆಗ ಶಂಕರಾಚಾರ್ಯರು ಕೇರಳದತ್ತ ಹೊರಟರು. ನೀನು ಯಾವಾಗ ಹಿಂದಿರುಗಿ ನೋಡುತ್ತಿಯೋ, ಆ ಸ್ಥಳದಲ್ಲೇ ನಾನು ನೆಲೆ ನಿಲ್ಲುತ್ತೇನೆ ಎಂದು ದೇವಿ ಹೇಳದಳಂತೆ.
ಶಂಕರಾಚಾರ್ಯರು ಕೇರಳಕ್ಕೆ ಹೋಗುವ ದಾರಿಯಲ್ಲಿ ಕೊಲ್ಲೂರಿನಲ್ಲಿಯೇ ಹಿಂದಿರುಗಿ ದೇವಿಯನ್ನು ನೋಡಿದರು. ಆಗ ದೇವಿ ಮುಂದೆ ಬರಲು ನಿರಾಕರಿಸಿ, ನಾನು ಇಲ್ಲೇ ನೆಲೆ ನಿಲ್ಲುತ್ತೇನೆಂದು ಹೇಳಿದಳು. ಆಗ ಶಂಕರಾಚಾರ್ಯರು ಅಲ್ಲೇ ದೇವಿಗೆ ದೇವಸ್ಥಾನ ನಿರ್ಮಿಸಿದರೆಂದು ಇತಿಹಾಸವಿದೆ. ಇನ್ನು ಇಲ್ಲಿ ಕೌಮಾಸುರನೆಂಬ ರಾಕ್ಷಸನಿದ್ದ. ಅವನು ಸದಾ ಜನರಿಗೆ ಉಪಟಳ ನೀಡುತ್ತಿದ್ದ.
ಅವನು ಅಜೇಯನಾಗಬೇಕೆಂದು ದೇವಿಯಲ್ಲಿ ಪ್ರಾರ್ಥಿಸಿ, ತಪಸ್ಸು ಮಾಡಿದ. ಆದರೆ ಅವನ ದುಷ್ಟ ಪ್ರವೃತ್ತಿ ಗೊತ್ತಿದ್ದ ಪಾರ್ವತಿ, ಸರಸ್ವತಿಯಲ್ಲಿ ಆ ಅಸುರ ವರ ಕೇಳುವ ವೇಳೆ ಅವನನ್ನು ಮೂಕನನ್ನಾಗಿ ಮಾಡು ಎಂದು ಹೇಳುತ್ತಾರೆ. ಅಸುರನ ಮುಂದೆ ಪಾರ್ವತಿ ಪ್ರತ್ಯಕ್ಷಳಾದಾಗ, ಅವನಿಗೆ ವರ ಕೇಳಲಾಗದೇ, ಆಕೆಯನ್ನು ನೋಡುತ್ತ ಮೂಕನಂತೆ ನಿಂತುಬಿಡುತ್ತಾನೆ. ಆ ಮೂಕ ಅಸುರನನ್ನು ವಧಿಸಿದ ದೇವಿಯೇ ಮೂಕಾಂಬಿಕೆ. ಈಕೆ ಪಾರ್ವತಿಯ ರೂಪವಾಗಿದ್ದಾಳೆ.
ತಿರುಪತಿ ತಿರುಮಲನಿಗೆ ಯಾವ ನೈವೇದ್ಯ ಮಾಡಲಾಗುತ್ತದೆ..? ಯಾವ ಸಮಯಕ್ಕೆ ಮಾಡಲಾಗುತ್ತದೆ..?