Spiritual: ಶ್ರೀರಾಮ ಅಖಂಡ ಭಾರತಕ್ಕೆ ರಾಜನಾಗಿದ್ದವನು. ಅಂದರೆ ಏಷ್ಯಾ ಖಂಡದ ರಾಜ. ಹಾಗಾಗಿ ಇಂದಿಗೂ ಬಾಲಿ, ನೇಪಾಳ, ಶ್ರೀಲಂಕಾ, ಮಲೇಶಿಯಾ, ಇಂಡೋನೆಷಿಯಾ ಇಲ್ಲೆಲ್ಲಾ ರಾಮನನ್ನು ಬೇರೆ ಬೇರೆ ರೂಪದಲ್ಲಿ ಪೂಜಿಸಲಾಗುತ್ತದೆ. ನಾವಿಂದು ರಾಮನ ಜನ್ಮ ರಹಸ್ಯ ತಿಳಿಸುವ 3 ಕಥೆಯನ್ನು ನಿಮಗೆ ಹೇಳಲಿದ್ದೇವೆ.
ಈ ಪ್ರಪಂಚದಲ್ಲಿ ಮೊದಲು ಜನಿಸಿದ ಮನುಷ್ಯರು ಯಾರು ಎಂಬ ಪ್ರಶ್ನೆಗೆ ಹಿಂದೂ ಧರ್ಮದಲ್ಲಿ ಇರುವಂಥ ಉತ್ತರ, ಮನು ಮತ್ತು ಶತರೂಪಾ. ಇವರು ಮೊದಲ ಮನುಷ್ಯರಷ್ಟೇ ಅಲ್ಲದೇ, ಮೊದಲ ದಂಪತಿಯೂ ಆಗಿದ್ದರು. ಇವರಿಗೆ ಓರ್ವ ಪುತ್ರನಿದ್ದ. ಅವನಿಗೆ ಇಡೀ ರಾಜ್ಯದ ರಾಜ್ಯಭಾರ ನೀಡಿ, ಮನು ಮತ್ತು ಶತರೂಪಾ ವನವಾಸಕ್ಕೆ ಹೋದರು. ಅಲ್ಲಿ ಬರೀ ಜಲಗ್ರಹಣ ಮಾಡುತ್ತಾ, ವಿಷ್ಣುವಿಗಾಗಿ ತಪಸ್ಸು ಮಾಡಿದರು.
ಇವರ ತಪಸ್ಸಿಗೆ ಮೆಚ್ಚಿ ವಿಷ್ಣು ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳಿದ. ಅದಕ್ಕೆ ಅವರು ನಿನ್ನ ಸಮಾನನಾದ ಮಗನನ್ನು ನಮಗೆ ಕರುಣಿಸು ಎಂದು ಕೇಳಿದರು. ಅದಕ್ಕಾಗಿ ಶ್ರೀವಿಷ್ಣು ಮುಂದಿನ ಜನ್ಮದಲ್ಲಿ ನಾನು ನಿಮ್ಮಿಬ್ಬರ ಮಗನಾಗಿ ಜನಿಸುವೆ ಎಂದು ಹೇಳುತ್ತಾನೆ. ಹಾಗಾಗಿ ಮನು ಮತ್ತು ಶತರೂಪಾ ದಶರಥ ಮತ್ತು ಕೌಸಲ್ಯಾ ರೂಪದಲ್ಲಿ ಜನಿಸಿ ರಾಮನೆಂಬ ಮಗನನ್ನು ಪಡೆದರು.
ಎರಡನೇ ಕಥೆಯ ಪ್ರಕಾರ, ತ್ರೇತಾ ಯುಗದಲ್ಲಿ ರಾಕ್ಷಸರ ಕಾಟ ಹೆಚ್ಚಾದ ಕಾರಣ, ಋಷಿಮುನಿಗಳೆಲ್ಲ ಈ ಉಪಟಳದಿಂದ ಮುಕ್ತಿ ಕೊಡಿಸೆಂದು ವಿಷ್ಣುವಿನಲ್ಲಿ ಕೇಳಿದರು. ಆಗ ವಿಷ್ಣು ನಾನು ಭೂಮಿಯ ಮೇಲೆ ಮನುಷ್ಯನ ರೂಪ ತಾಳಿ, ರಾಕ್ಷಸರನ್ನು ಕೊಂದು ನಿಮ್ಮೆಲ್ಲರ ಕಷ್ಟವನ್ನು ಪರಿಹರಿಸುತ್ತೇನೆ ಎಂದು ಹೇಳುತ್ತಾನೆ. ಅದರಂತೆ ಶ್ರೀವಿಷ್ಣು ಶ್ರೀರಾಮನಾಗಿ ಜನ್‌ಮ ತಾಳುತ್ತಾನೆ. ಮುಂದೆ ಕೈಕೆ ಕಾರಣಕ್ಕೆ 14 ವರ್ಷ ವನವಾಸಕ್ಕೆ ಹೋಗಿ, ರಕ್ಕಸರನ್ನೆಲ್ಲ ಸಂಹರಿಸಿ, ಕೊನೆಗೆ ರಾವಣನ ಸಂಹಾರ ಮಾಡಿ, ಲೋಕ ಕಲ್ಯಾಣ ಮಾಡುತ್ತಾನೆ.
ಮೂರನೇಯ ಕಥೆಯೆಂದರೆ ನಾರದರ ಶಾಪ. ಲಕ್ಷ್ಮೀ ದೇವಿಯನ್ನು ಕಂಡ ನಾರದರು, ತಾನು ಆಕೆಯನ್ನು ವರಿಸಬೇಕು. ನಾನು ಸ್ವಯಂವರದಲ್ಲಿ ಭಾಗವಹಿಸಬೇಕು. ನನ್ನನ್ನು ಸುಂದರನನ್ನಾಗಿ ಮಾಡು ಎಂದು ಶ್ರೀವಿಷ್ಣುವಿನಲ್ಲಿ ಕೇಳಿಕೊಳ್ಳುತ್ತಾರೆ. ತಾನು ವರಿಸಬೇಕಾದ ಲಕ್ಷ್ಮೀಯ ಮೇಲೆ ಬ್ರಹ್ಮಚಾರಿಯಾದ ನಾರದರು ಕಣ್ಣು ಹಾಕಿದ್ದನ್ನು ಕಂಡ ವಿಷ್ಣುವಿಗೆ ಕೋಪ ಬರುತ್ತದೆ. ಆದರೆ ಕೋಪವನ್ನು ಮನದಲ್ಲೇ ಇಟ್ಟುಕೊಂಡು, ಸರಿ ನೀವು ಸ್ವಯಂವರಕ್ಕೆ ಹೋಗಿ, ನಿಮ್ಮ ರೂಪ ಬದಲಾಗಿರುತ್ತದೆ ಎಂದು ವಿಷ್ಣು ವರ ನೀಡುತ್ತಾನೆ.
ಅದರಂತೆ ನಾರದರ ಸುಂದರ ಮುಖ, ವಾನರನ ಮುಖದಂತಾಗಿರುತ್ತದೆ. ಸ್ವಯಂವರದಲ್ಲಿ ಅವರಿಗೆ ಅವಮಾನವಾಗುತ್ತದೆ. ಅದಕ್ಕೆ ನಾರದರು ನೀನು ಮುಂದಿನ ಜನ್ಮದಲ್ಲಿ ನಿನ್ನ ಪ್ರೀತಿ ಪಡೆಯಲು ಹಪಹಪಿಸುವಂತಾಗಲಿ. ನಿನ್ನ ಸಹಾಯಕ್ಕೆ ವಾನರರೇ ಬರುವಂತಾಗಲಿ ಎಂದು ಶಾಪ ನೀಡುತ್ತಾರೆ. ಆದ್ದರಿಂದಲೇ, ಶ್ರೀವಿಷ್ಣು ತ್ರೇತಾಯುಗದಲ್ಲಿ ಶ್ರೀರಾಮನಾಗಿ ಜನ್ಮ ಪಡೆದು, ಸೀತೆಯನ್ನು ಪಡೆಯಲು , ಹನುಮನ ಸಹಾಯ ಪಡೆಯಬೇಕಾಯಿತು.