Health Tips: ಇಂದಿನ ಕಾಲದ ಮಕ್ಕಳಿಗೆ ತರಹೇವಾರಿ ಜಂಕ್ ಫುಡ್, ಚಾಕೋಲೇಟ್ಸ್, ಬಿಸ್ಕೇಟ್ಸ್ ಲಭ್ಯವಿದೆ. ಮಕ್ಕಳು ಹಠ ಮಾಡಿದ ತಕ್ಷಣ, ಅಪ್ಪ ಅಮ್ಮ ಅದನ್ನು ತೆಗೆಸಿಕೊಡುತ್ತಾರೆ. ಆದರೆ ಇದರೊಂದಿಗೆ ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚುವುದು ಕೂಡ ಮುಖ್ಯವಾಗಿದೆ. ಬರೀ ಜಂಕ್ ಫುಡ್ ತಿನ್ನುವುದರಿಂದ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತ ಹೋಗುತ್ತದೆ. ಹಾಗಾಗಿ ಹೊರಗಿನ ತಿಂಡಿ ಮಿತವಾಗಿ ಮತ್ತು ಆರೋಗ್ಯಕರ ಆಹಾರ ಭರಪೂರ ಕೊಡಬೇಕು. ಹಾಗಾಗಿ ಇಂದು ನಾವು ಮಕ್ಕಳು ಯಾವ 5 ಆಹಾರಗಳನ್ನು ಸೇವಿಸಿದ್ದಲ್ಲಿ, ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಲಿದ್ದೇವೆ.
ಡ್ರೈಫ್ರೂಟ್ಸ್: ಯಾವುದೇ ಡ್ರೈಫ್ರೂಟ್ಸ್ ಕೊಡುವುದಿದ್ದರೂ ಅದನ್ನು ನೆನೆಸಿ ಕೊಡುವುದು ಉತ್ತಮ. ಯಾಕಂದ್ರೆ ಅದರಲ್ಲಿ ನೀರು ತುಂಬಿಕೊಂಡು, ಆ ಒಣಹಣ್ಣು ಇನ್ನೂ ಆರೋಗ್ಯಕರವಾಗಿರುತ್ತದೆ. ದ್ರಾಕ್ಷಿ, ಗೋಡಂಬಿ, ಬಾದಾಮಿ, ಅಖ್ರೋಟ್, ಅಂಜೂರ ಸೇರಿ ಇತರೆ ಒಣಹಣ್ಣುಗಳನ್ನು ನೆನೆಸಿಕೊಡಿ. ಇನ್ನು ಹುರಿದ ಪಿಸ್ತಾವನ್ನು ಹಾಗೆ ಕೊಡಿ.
ತರಕಾರಿ, ಹಣ್ಣು: ತರಕಾರಿ ಮತ್ತು ಹಣ್ಣಿನ ಸೇವನೆ ಮಕ್ಕಳಿಗೆ ಎಷ್ಟು ಮುಖ್ಯ ಅನ್ನೋದು ತಂದೆ ತಾಯಿಗೆ ಯಾರೂ ಹೇಳುವುದು ಬೇಡ. ಎಲ್ಲರಿಗೂ ಅದರ ಪೋಷಕಾಂಶದ ಬಗ್ಗೆ ಗೊತ್ತಿರುತ್ತದೆ. ನೀವು ಪ್ರತಿದಿನ ಒಂದೊಂದು ಹಣ್ಣುಗಳನ್ನು ತಿನ್ನಲು ಕೊಟ್ಟರೂ ಉತ್ತಮ. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಣ್ಣ ತುಂಡು ಕಲ್ಲಂಗಡಿ, ಸೇಬು, ದಾಳಿಂಬೆಯಂಥ ಹಣ್ಣನ್ನು ತಿನ್ನಲು ಕೊಡಬಹುದು. ಆದರೆ ಯಾವುದೇ ಕಾರಣಕ್ಕೂ ಚಿಕ್ಕು, ಬಾಳೆಹಣ್ಣಿನಂಥ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಕೊಡಬೇಡಿ. ಇದರಿಂದ ಮಕ್ಕಳಿಗೆ ನೆಗಡಿಯಾಗುತ್ತದೆ.
ಸೊಪ್ಪು: ಪಾಲಕ್ ಸೊಪ್ಪು, ಮೆಂತ್ಯೆ ಸೊಪ್ಪು, ನುಗ್ಗೆಸೊಪ್ಪು, ಒಂದೆಲಗ, ಹರಿವೆ ಸೊಪ್ಪು ಹೀಗೆ ತರಹೇವಾರಿ ಸೊಪ್ಪುಗಳು ಸಿಗುತ್ತದೆ. ಇದನ್ನು ಚೆನ್ನಾಗಿ ತೊಳೆದು, ಸಾರು, ಸಾಂಬಾರ್, ಪಲ್ಯ, ಸೂಪ್ ಮಾಡಿ ಮಕ್ಕಳಿಗೆ ಕೊಡಿ. ಇವುಗಳು ಟೇಸ್ಟಿಯಾಗಿಯೂ, ಹೆಲ್ದಿಯಾಗಿಯೂ ಇರುತ್ತದೆ. ಹಾಗಾಗಿ ಮಕ್ಕಳಿಗೆ ಇಷ್ಟವಾಗುತ್ತದೆ. ಅಲ್ಲದೇ, ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹ ಇದು ಸಹಕಾರಿಯಾಗಿದೆ.
ಮೊಳಕೆ ಕಾಳು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಳಕೆ ಕಾಳುಗಳನ್ನು ಮಕ್ಕಳಿಗೆ ತಿನ್ನಲು ಕೊಡುವುದರಿಂದ ಅವರ ಆರೋಗ್ಯ ಮತ್ತು ಕೂದಲು, ಉಗುರು ಎಲ್ಲವೂ ಚೆನ್ನಾಗಿ ಬೆಳೆಯುತ್ತದೆ. ನಿಮ್ಮ ಮಗು ಆರೋಗ್ಯವಂತವಾಗಿರಬೇಕು ಮತ್ತು ಗುಂಡು ಗುಂಡಾಗಿ ಚೆಂದವಾಗಿರಬೇಕು ಅಂದ್ರೆ ಮೊಳಕೆ ಕಾಳುಗಳನ್ನು ತಿನ್ನಿಸಿ.
ಮಸಾಲೆ ಪದಾರ್ಥಗಳು: ವಾರಕ್ಕೆ ಒಮ್ಮೆಯಾದರೂ ಅಡುಗೆಯಲ್ಲಿ ಚಕ್ಕೆ, ಲವಂಗದಂಥ ಮಸಾಲೆ ಪದಾರ್ಥ ಬಳಸಿ. ವಾರದಲ್ಲಿ ಮೂರು ಬಾರಿಯಾದರೂ ಬೆಳ್ಳುಳ್ಳಿ, ಶುಂಠಿ ಬಳಸಿ. ಮತ್ತು ಪ್ರತಿದಿನ ಕೊಂಚ ಕೊಂಚವೇ ಕಾಳುಮೆಣಸನ್ನು ಆಹಾರದಲ್ಲಿ ಬಳಸಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೇ, ಕ್ಯಾನ್ಸರ್ ಬರುವುದನ್ನು ಕೂಡ ತಡೆಗಟ್ಟಬಹುದು.
ವಿಶೇಷ ಸೂಚನೆ ಎಂದರೆ, ಈ ಮೇಲಿನ ಯಾವುದಾದರೂ ಆಹಾರ ತಿಂದರೆ ಮಗುವಿಗೆ ಅಲರ್ಜಿ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ಬಳಿಕ ಸೇವಿಸುವುದು ಉತ್ತಮ.
ಗರ್ಭಿಣಿಯರಿಗೆ ವೈಟ್ ಡಿಸ್ಚಾರ್ಜ್ ಆಗಲು ಕಾರಣವೇನು..? ಇದು ಸಹಜನಾ..? ಅಸಹಜನಾ..?


