Spiritual: ಭಗವದ್ಗೀತೆಯನ್ನು ಓದಿದವರು, ಅತ್ಯುತ್ತಮವಾಗಿ ಬದುಕುತ್ತಾರೆಂದು ಹಿರಿಯರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಅಂಥ ಅತ್ಯದ್ಭುತ ವಿಷಯವನ್ನು ವಿವರಿಸಲಾಗಿದೆ. ಇಂದು ನಾವು ಯಾವ ಅಂಶವನ್ನು ತಿಳಿದರೆ, ನಮ್ಮ ಭವಿಷ್ಯ ಉತ್ತಮವಾಗಿ ಇರುತ್ತದೆ ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಅಂಶವೆಂದರೆ, ನಿಮ್ಮ ಭವಿಷ್ಯ ಉತ್ತಮವಾಗಿರಬೇಕು ಅಂದ್ರೆ, ನಿಮ್ಮ ಆಲೋಚನೆ, ನೀವು ಮಾಡುವ ಕೆಲಸ ಉತ್ತಮವಾಗಿರಬೇಕು. ನಿಮ್ಮ ನಡುವಳಿಕೆ ಸರಿಯಾಗಿರಬೇಕು. ನಾವು ಉತ್ತಮವಾಗಿ ಆಲೋಚನೆ ಮಾಡುವವರಾಗಿದ್ದಲ್ಲಿ, ನಮ್ಮ ಭವಿಷ್ಯವೂ ಉತ್ತಮವಾಗಿರುತ್ತದೆ. ನಾವು ಒಳ್ಳೆ ಕೆಲಸಗಳನ್ನ ಮಾಡಿದರೆ, ಅದರ ಫಲವೂ ಒಳ್ಳೆಯದಾಗಿರುತ್ತದೆ. ಅದೇ ರೀತಿ ನಮ್ಮ ನಡುವಳಿಕೆ ಸರಿಯಾಗಿ ಇದ್ದರೆ, ನಾವು ಸುಂದರ ಜೀವನವನ್ನು ಜೀವಿಸುತ್ತೇವೆ.
ಎರಡನೇಯ ಅಂಶವೆಂದರೆ, ನಾವು ಯಾವುದಕ್ಕೂ ಆಸೆ ಮಾಡಬಾರದು. ಏಕೆಂದರೆ, ನಾವು ಬಯಸಿದ್ದೆಲ್ಲ ನಮಗೆ ಸಿಗುವುದಿಲ್ಲ. ಕೆಲವೊಂದು ಬಯಸದ ಭಾಗ್ಯವೂ ನಮ್ಮ ಪಾಲಾಗಿರುತ್ತದೆ. ಕೆಲವೊಮ್ಮೆ ನಿರಾಸೆಯಾಗುತ್ತದೆ. ನೀವು ಒಳ್ಳೆಯ ಮನಸ್ಸುಳ್ಳವರು, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವವರು, ದೇವರಲ್ಲಿ ಭಕ್ತಿ ಉಳ್ಳವರು ಆಗಿದ್ದರೆ, ನಿಮಗೆ ಉತ್ತಮವಾದುದ್ದೇ ಸಿಗುತ್ತದೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ.
ಮೂರನೇಯ ಅಂಶವೆಂದರೆ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಬೇಕು. ಭಗವದ್ಗೀತೆಯ ಪ್ರಕಾರ, ನಾವು ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿರಿಸಬೇಕು. ಅದು ಯಾವ ವಿಷಯದಲ್ಲೇ ಆಗಲಿ, ನಿಮ್ಮ ಮನೆಯಲ್ಲಿ ಕೆಲವರ ಮಾತಿನಿಂದ ನಿಮಗೆ ಕೋಪ ಬರಬಹುದು. ಆಗ ನೀವು ತಾಳ್ಮೆಯಿಂದ ಇರಬೇಕು. ಕಾಮ, ಮೋಹ, ಮದ, ಮತ್ಸರ ಎಲ್ಲ ವಿಷಯದಲ್ಲೂ ನಾವು ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿರಿಸದರೆ, ನಾವು ಜೀವನದಲ್ಲಿ ಗೆದ್ದಂತೆ.
ನಾಲ್ಕನೇಯ ಅಂಶ, ಯಾರು ದೇವರಲ್ಲಿ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾನೋ, ಅವನು ದುರಾಸೆ, ದುಃಖ, ಆತಂಕಗಳಿಂದ ದೂರವಾಗುತ್ತಾನೆ. ಮತ್ತು ನೆಮ್ಮದಿಯ ಬಾಳು ಬಾಳುತ್ತಾನೆ. ಹುಟ್ಟಿದವನು ಒಂದಲ್ಲ ಒಂದು ದಿನ ಸಾಯಲೇಬೇಕು ಎಂದು ಎಲ್ಲರಿಗೂ ಗೊತ್ತು. ಆದರೂ ಆಸೆಯೊಂದಿಗೆ ಜೀವನ ಸಾಗಿಸುತ್ತೇವೆ. ಆದರೆ ಶ್ರೀಕೃಷ್ಣನ ಪ್ರಕಾರ, ನಾವು ಬಂದುದ್ದನ್ನಷ್ಟೇ ಸ್ವೀಕರಿಸಬೇಕು. ಇರುವಷ್ಟು ದಿನ ಒಳ್ಳೆಯ ಮನಸ್ಸಿನಿಂದ ಜೀವಿಸಬೇಕು.
ಐದನೇಯ ಅಂಶ ಯಾರನ್ನೂ ಎಂದಿಗೂ ಕಡೆಗಣಿಸಬಾರದು. ಒಬ್ಬರ ಇಂದಿನ ಜೀವನವನ್ನು ನೋಡಿ ಹಂಗಿಸಬೇಡಿ. ಏಕೆಂದರೆ, ಅವರ ಮುಂದಿನ ಜೀವನ ಅತ್ಯುತ್ತಮವಾಗಿರಬಹುದು. ನಿಮಗಿಂತಲೂ ಶ್ರೀಮಂತಿಕೆಯಿಂದ, ನೆಮ್ಮದಿ, ಸುಖ ಸಂತೋಷದಿಂದ ಕೂಡಿರಬಹುದು. ಕಷ್ಟಪಟ್ಟು ಬದುಕುವವರಿಗೆ ಅದೃಷ್ಟ ಕೈ ಹಿಡಿಯಬಹುದು. ಹಾಗಾಗಿ ಎಂದಿಗೂ ಯಾರ ಜೀವನವನ್ನು ನೋಡಿ, ತಮಾಷೆ ಮಾಡಬಾರದು.