Health Tips: ತಮ್ಮ ಮಕ್ಕಳು ಬುದ್ಧಿವಂತರಾಗಿರಬೇಕು, ಚೆಂದವಾಗಿರಬೇಕು, ಅರಳು ಹುರಿದಂತೆ ಮಾತನಾಡಬೇಕು ಅಂತಾ ಯಾವ ತಂದೆ ತಾಯಿಗೆ ತಾನೇ ಮನಸ್ಸಿರುವುದಿಲ್ಲ ಹೇಳಿ..? ಅದಕ್ಕಾಗಿಯೇ ತಾಯಿಯಾದವಳು ಸಂಪೂರ್ಣ ಕಾಳಜಿ ವಹಿಸಿ, ಉತ್ತಮ ಆಹಾರ ಸೇವನೆ ಮಾಡುತ್ತಾಳೆ. ತಂದೆಯಾದವನು ತನ್ನ ಮಗುವಿನ ಬೆಳವಣಿಗೆಗಾಗಿ ಆರೋಗ್ಯಕರ ಆಹಾರಗಳನ್ನು ಪತ್ನಿಗೆ ತಂದು ಕೊಡುತ್ತಾನೆ.
ಆದರೆ ಮಗು ಹುಟ್ಟಿದ ಬಳಿಕ, ಅದಕ್ಕೆ ತಿಂಡಿ ಕೇಳುವಷ್ಟು ಬುದ್ಧಿ ಬಂದಾಗ, ನಾವು ಎಲ್ಲ ಆಹಾರ ಕಾಳಜಿಯನ್ನು ಮರೆತು, ಮಗುವಿನ ಮೇಲಿನ ಪ್ರೀತಿಯಿಂದ, ಅದು ಕೇಳಿದ್ದನ್ನೆಲ್ಲ ಕೊಟ್ಟುಬಿಡುತ್ತೇವೆ. ಆದರೆ ಹೀಗೆ ಮಾಡುವುದು ತಪ್ಪು. ಹಾಗಾಗಿ ನಾವಿಂದು ಮಕ್ಕಳು ಬುದ್ಧಿವಂತರಾಗಿರಬೇಕು, ದಡ್ಡರಾಗಬಾರದು ಅಂದ್ರೆ ಅವರಿಗೆ ಏನನ್ನು ಸೇವಿಸಲು ಕೊಡಬಾರದು ಅಂತಾ ಹೇಳಲಿದ್ದೇವೆ.
ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್ ಹೀಗೆ ಚಿತ್ರ ವಿಚಿತ್ರ ತಿಂಡಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇವೆಲ್ಲವೂ ವಿದೇಶಿ ತಿಂಡಿಗಳು. ಅವರು ಬಳಸುವಂಥ ಅರ್ದಂಬರ್ಧ ಹುರಿದ, ಕರಿದ, ಬೇಯಿಸಿದ ಪದಾರ್ಥಗಳು, ಇಂದಿನ ಮಕ್ಕಳಿಗೆ ತುಂಬಾ ಇಷ್ಟವಾಗುತ್ತಿದೆ. ಮತ್ತು ತಂದೆ ತಾಯಿ ಮಕ್ಕಳಗೆ ಏನೇನು ಇಷ್ಟವೋ ಅದನ್ನೆಲ್ಲ ಕೊಡಿಸುತ್ತಿದ್ದಾರೆ.
ಇಂಥ ತಿಂಡಿಗಳ ಸೇವನೆಯಿಂದಲೇ, ಮಕ್ಕಳ ದೇಹದಲ್ಲಿ ಬೊಜ್ಜು ಬೆಳೆದು, ಅವರ ಚೈತನ್ಯವೆಲ್ಲ ಕುಂದಿಹೋಗುತ್ತಿದೆ. ಬರೀ ಸೋಂಬೇರಿತನ ಬೆಳೆಯುತ್ತಿದೆ.ಅಲ್ಲದೇ ಇಂಥ ತಿಂಡಿಗಳನ್ನೆಲ್ಲ ಒಮ್ಮೆ ತಿಂದರೆ, ಪದೇ ಪದೇ ತಿನ್ನಬೇಕು ಎನ್ನುವಂತೆ ಇರುತ್ತದೆ. ಹಾಗಾಗಿ ಮಕ್ಕಳು ಇದಕ್ಕೆ ಅಡಿಕ್ಟ್ ಆಗುವ ಕಾರಣಕ್ಕೆ, ಇಂಥ ಆಹಾರಗಳ ಸೇವನೆಯಿಂದ ಮಕ್ಕಳು ಸೋಮಾರಿತನಕ್ಕೆ ಈಡಾಗುತ್ತಿದ್ದಾರೆ.
ಇಷ್ಟೇ ಅಲ್ಲದೇ, ಕೂಲ್ ಡ್ರಿಂಕ್ಸ್, ಕಾಫಿ ಅಂಶ ಹೊಂದಿರುವ ಚಾಕೋಲೇಟ್ಸ್, ಪ್ರಿಸರ್ವೇಟಿವ್ಸ್ ಬಳಸಿ, ಪ್ಯಾಕ್ ಮಾಡಿ ಮಾರುವ ತಿಂಡಿಗಳು. ಕಲರ್ ಬಳಸಿ ತಯಾರಿಸಿದ ತಿಂಡಿಗಳ ಸೇವನೆಯಿಂದ ಮಕ್ಕಳ ಬುದ್ಧಿವಂತಿಕೆಗೆ ಧಕ್ಕೆ ಬರುತ್ತಿದೆ. ಇಂಥ ತಿಂಡಿಗಳನ್ನೆಲ್ಲ ಮಕ್ಕಳನ್ನು ಸೆಳೆಯಲೆಂದೇ ಮಾಡುತ್ತಾರೆ. ಅದನ್ನು ನೋಡಿಯೇ, ಮಕ್ಕಳು ಅಂಥ ಕಲರ್‌ಫುಲ್ ತಿಂಡಿ ತಿನ್ನಲು ಆಸೆಪಡುತ್ತಾರೆ. ಮತ್ತು ಅನಾರೋಗ್ಯಕ್ಕೀಡಾಗುತ್ತಾರೆ.
ಇನ್ನು ಸಕ್ಕರೆ ಬಳಸಿ ಮಾಡಿದ ತಿಂಡಿ, ಮಿಠಾಯಿಗಳನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸುವುದರಿಂದಲೂ ಮಕ್ಕಳ ಬುದ್ಧಿವಂತಿಕೆಗೆ ಕುತ್ತು ಬರುತ್ತಿದೆ. ಹಾಗಾಗಿ ಮಕ್ಕಳಿಗೆ ಪಿಜ್ಜಾ, ಬರ್ಗರ್, ಚಿಪ್ಸ್, ಕುರ್‌ಕುರೆ, ಲೇಸ್, ಚಾಕೋಲೆಟ್ಸ್, ಸ್ವೀಟ್ಸ್ ಸೇರಿ ಜಂಕ್ ಫುಡ್‌ಗಳನ್ನು ಹೆಚ್ಚು ತಿನ್ನಲು ಕೊಡಲೇಬೇಡಿ. ಇಂಥವುಗಳನ್ನು ತಿಂಗಳಿಗೊಮ್ಮೆ, ಅದರಲ್ಲೂ ಲಿಮಿಟಿನಲ್ಲಿ ಕೊಡಿ. ನಿಮ್ಮ ಮಗುವಿಗೆ ಮನೆಯಲ್ಲೇ ರುಚಿಯಾದ, ಆರೋಗ್ಯಕರ ತಿಂಡಿಗಳನ್ನು ಮಾಡಿಕೊಡಿ. ಮಗು ಮನೆ ತಿಂಡಿಗೆ ಅಡಿಕ್ಟ್ ಆದರೆ, ಇನ್ನೂ ಉತ್ತಮ.