Spiritual News: ಬ್ರಾಹ್ಮಿ ಮುಹೂರ್ತ ಎಂದರೆ, ದೇವತೆಗಳ ಮುಹೂರ್ತವೆಂದು ಹೇಳಲಾಗುತ್ತದೆ. ಹಾಗಾಗಿ ಧಾರ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ, ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮುಗಿಸಿ, ದೇವರ ಧ್ಯಾನ ಮಾಡಿ, ಓದಲು ಕುಳಿತರೆ, ಅಥವಾ ನಮ್ಮ ಕೆಲಸ ಮಾಡಿದರೆ, ಆ ಕೆಲಸದಲ್ಲಿ ನಾವು ಯಶಸ್ಸು ಕಾಣುತ್ತೇವೆ ಅನ್ನೋ ನಂಬಿಕೆ ಇದೆ. ಆದರೆ ಬ್ರಾಹ್ಮಿ ಮುಹೂರ್ತದಲ್ಲಿ ಕೆಲವು ತಪ್ಪುಗಳನ್ನು ನಾವು ಮಾಡಬಾರದು. ಅದು ಯಾವ ತಪ್ಪು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು ಬ್ರಾಹ್ಮಿ ಮುಹೂರ್ತದಲ್ಲಿ ಮಲಗುವುದು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಸ್ನಾನಾದಿಗಳನ್ನು ಮಾಡಿ, ನಮ್ಮ ಕೆಲಸ ಶುರು ಮಾಡಿದರೆ, ನಾವು ಜೀವನದಲ್ಲಿ ಉದ್ಧಾರವಾಗುತ್ತೇವೆ ಎಂಬ ನಂಬಿಕೆ ಜ್ಯೋತಿಷ್ಯ ಶಾಸ್ತ್ರದಲ್ಲಿದೆ. ಆದರೆ ಬ್ರಾಹ್ಮಿ ಮುಹೂರ್ತದಲ್ಲಿ ನಿದ್ರಿಸುವವರು, ಜೀವನದಲ್ಲಿ ಏನೂ ಸಾಧನೆ ಮಾಡುವುದಿಲ್ಲ, ಅವರ ಜೀವನ ಅಷ್ಟಕ್ಕಷ್ಟೇ ಇರುತ್ತದೆ ಎಂಬ ನಂಬಿಕೆ ಇದೆ.
ಎರಡನೇಯ ತಪ್ಪು ಬ್ರಾಹ್ಮಿ ಮುಹೂರ್ತದಲ್ಲಿ ಆಹಾರ ಸೇವನೆ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಸ್ನಾನಾದಿಗಳನ್ನು ಮಾಡಿ, ದೇವರ ಧ್ಯಾನ, ಪೂಜೆ ಮಾಡಬೇಕು. ಬಳಿಕ ಆಹಾರ ತಯಾರಿಸಿಕೊಂಡು, ಆಹಾರ ಸೇವನೆ ಮಾಡಬೇಕು. ಆಹಾರ ಸೇವನೆ 7 ಗಂಟೆಯ ಸಮೀಪದಲ್ಲಿ ಮಾಡಿದರೆ ಉತ್ತಮ. ಇದು ಆರೋಗ್ಯಕ್ಕೂ ಒಳ್ಳೆಯದು. ಇನ್ನು ಧಾರ್ಮಿಕ ನಂಬಿಕೆಯ ಪ್ರಕಾರ, ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ದೇವರನ್ನು ನೆನೆಯುವುದು ಬಿಟ್ಟು, ಆಹಾರ ಸೇವನೆ ಮಾಡಿದರೆ, ಆ ಮನೆಗೆ ದರಿದ್ರ ಒಕ್ಕರಿಸುತ್ತದೆ ಎಂದು ಹೇಳಲಾಗುತ್ತದೆ.
ಮೂರನೇಯ ತಪ್ಪು ನಕಾರಾತ್ಮಕ ಯೋಚನೆ ಮತ್ತು ಜಗಳವಾಡುವುದು. ಬ್ರಾಹ್ಮಿ ಮುಹೂರ್ತದಲ್ಲೇ ದೇವತೆಗಳು ಪ್ರಸನ್ನರಾಗಿರುತ್ತಾರೆಂಬ ನಂಬಿಕೆ ಇದೆ. ಹಾಗಾಗಿ ಇಂಥ ಸಮಯದಲ್ಲಿ ನಾವು ನಮ್ಮ ಬಗ್ಗೆಯಾಗಲಿ, ಇನ್ನೊಬ್ಬರ ಬಗ್ಗೆಯಾಗಲಿ ಕೆಟ್ಟ ಯೋಚನೆ, ನಕಾರಾತ್ಮಕ ಯೋಚನೆ ಮಾಡಬಾರದು. ಇದರಿಂದ ನಮ್ಮ ಜೀವನ ಉತ್ತಮವಾಗಿ ಇರುವುದಿಲ್ಲ. ಹೀಗೆ ಮಾಡುವುದರಿಂದ ನಮ್ಮ ಜೀವನದಲ್ಲಿ ಬರೀ ಋಣಾತ್ಮಕತೆ ತುಂಬಿರುತ್ತದೆ.
ಅಲ್ಲದೇ, ಬ್ರಾಹ್ಮಿ ಮುಹೂರ್ತದಲ್ಲಿ ಜಗಳವಾಡುವುದರಿಂದ, ದೇವತೆಗಳ ಕೋಪಕ್ಕೆ ನೀವು ಗುರಿಯಾಗುತ್ತೀರಿ. ಅರ್ಥಾತ್ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿ, ಸಕಾರಾತ್ಮಕತೆ ಹೊಟು ಹೋಗುತ್ತದೆ. ಹಾಗಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಇಂಥ ತಪ್ಪುಗಳನ್ನು ಮಾಡಬಾರದು.