Health Tips: ಸೋರಿಯಾಸಿಸ್ ಖಾಯಿಲೆಯ ಬಗ್ಗೆ ವೈದ್ಯರಾದ ಡಾ.ರವಿರಾಜ್ ಅವರು ನಿಮಗೆ ವಿವರಿಸಿದ್ದರು. ಇದರಿಂದ ಏನೇನು ಸಮಸ್ಯೆ ಬರುತ್ತದೆ. ನಾವು ಈ ರೋಗ ಬಾರದಿರಲು ಏನೇನು ಮಾಡಬೇಕು. ಈ ರೋಗ ಲಕ್ಷಣವೇನು ಅನ್ನೋ ಬಗ್ಗೆ ವಿವರಿಸಿದ್ದರು. ಇಂದು ಸೋರಿಯಾಸಿಸ್ ಬಗ್ಗೆ ಡಾ.ರವಿರಾಜ್ ಮತ್ತಷ್ಟು ಮಾಹಿತಿ ನೀಡಲಿದ್ದಾರೆ.
ವೈದ್ಯರು ಸೋರಿಯಾಸಿಸ್‌ನಲ್ಲಿ ಎಷ್ಟು ವಿಧಗಳಿದೆ ಎಂಬ ಬಗ್ಗೆ ವಿವರಿಸಿದ್ದಾರೆ. ಅಂಗೈ ಮತ್ತು ಅಂಗಾಲಲ್ಲಿ ಸೋರಿಯಾಸಿಸ್ ಆದಾಗ, ಪ್ಲಾಮಾರ್ ಮತ್ತು ಪ್ಲಾಂಟರ್ ಸೋರಿಯಾಸಿಸ್ ಎಂದು ಕೆರಯುತ್ತೇವೆ. ತೊಡೆ ಸಂಧಿಯಲ್ಲಿ ಸೋರಿಯಾಸಿಸ್ ಆದಾಗ, ಇದನ್ನು ಇನ್ವರ್ಸಿಸ್ ಎಂದು ಕರೆಯುತ್ತೇವೆ. ಇನ್ನು ಮೂಳೆಯ ಮಧ್ಯ ಭಾಗದಲ್ಲಿ ಸೋರಿಯಾಸಿಸ್ ಆದಾಗ, ಪ್ಲೇಗ್ ಸೋರಿಯಾಸಿಸ್ ಎನ್ನುತ್ತಾರೆ. ಕೆಂಪು ಕೆಂಪಾಗಿ ಗುಳ್ಳೆ ಗುಳ್ಳೆಗಳ ರೀತಿ ಕಂಡಾಗ ಇದನ್ನು ಗಟೇಟ್ ಸೋರಿಯಾಸಿಸ್ ಎಂದು ಕರೆಯಲಾಗುತ್ತದೆ.
ತಲೆಯಲ್ಲಿ ಸೋರಿಯಾಸಿಸ್ ಆದಾಗ, ಇದನ್ನು ಸ್ಕ್ಯಾಲ್ಫ್ ಸೋರಿಯಾಸಿಸ್ ಎನ್ನುತ್ತಾರೆ. ಕೆಲವರು ಇದನ್ನು ಹೊಟ್ಟಿನ ಸಮಸ್ಯೆ ಎಂದುಕೊಂಡು ಕಡೆಗಣಿಸುತ್ತಾರೆ. ಏಕೆಂದರೆ, ಸೋರಿಯಾಸಿಸ್ ಬಂದಾಗ, ಚರ್ಮ ಒಣಗಿ ಸಿಪ್ಪೆ ಸಿಪ್ಪೆಯಾಗುತ್ತದೆ. ಆಗ ಪುಡಿ ಪುಡಿ ಉದುರುತ್ತದೆ. ಹಾಗಾಗಿ ಸ್ಕಾಲ್ಫ್ ಸೋರಿಯಾಸಿಸ್ ಆದಾಗ, ಅದನ್ನು ಹೆಚ್ಚಿನವರು ಡ್ಯಾಂಡ್ರಫ್ ಸಮಸ್ಯೆ ಎಂದುಕೊಳ್ಳುತ್ತಾರೆ.
ಆಗ ಬೇರೆ ಬೇರೆ ವಿಧದ ಶ್ಯಾಂಪೂ, ಲೋಶನ್‌ಗಳನ್ನು ಬಳಸುತ್ತಾರೆ. ಹಾಗೆ ಮಾಡಿದಾಗ ಸೋರಿಯಾಸಿಸ್ ಕಡಿಮೆಯಾಗುತ್ತದೆ. ಆದರೆ ಕೆಲ ದಿನಗಳಲ್ಲೇ ಮತ್ತೆ ಬರುತ್ತದೆ. ಡ್ಯಾಂಡ್ರಫ್ ಮತ್ತು ಸೋರಿಯಾಸಿಸ್ ಮಧ್ಯೆ ಇರುವ ವ್ಯತ್ಯಾಸ ಅಂದ್ರೆ ಇದೇ. ಡ್ಯಾಂಡ್ರಫ್‌ಗೆ ನಾವು ಆರಾವಾಗಿ ಪರಿಹಾರ ಮಾಡಿಕೊಳ್ಳಬಹುದು. ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದು.
ಆದರೆ ಸೋರಿಯಾಸಿಸ್ ಬಂದರೆ, ಅಷ್ಟು ಸುಲಭವಾಗಿ ಹೋಗುವುದಿಲ್ಲ. ನೀವು ನಿರ್ಲಕ್ಷ ಮಾಡಿದಷ್ಟು ಸೋರಿಯಾಸಿಸ್ ಬೆಳೆಯುತ್ತ ಹೋಗುತ್ತದೆ. ಹಾಗಾಗಿ ಸೋರಿಯಾಸಿಸ್ ಬಂದಿದೆ ಎಂದು ಗೊತ್ತಾದಾಗ, ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ.

