Spiritual Stories: ಪ್ರತೀ ತಂದೆ ತಾಯಿ ತಮ್ಮ ಮಕ್ಕಳನ್ನು ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಅವರ ಆರೋಗ್ಯ ಅಭಿವೃದ್ಧಿ ಪಡಿಸಲು ಬೇಕಾಗುವ ಆಹಾರ, ಅವರಿಗೆ ಆಟಿಕೆ, ಸಿಹಿ ತಿಂಡಿ ಎಲ್ಲವನ್ನೂ ಕೊಡಿಸುತ್ತಾರೆ. ಜೊತೆಗೆ ತಮ್ಮ ಮಗು ಚುರುಕಾಗಿರಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಬಯಸುತ್ತಾರೆ. ಹೀಗೆ ಬಯಸುವವರು ಮಗುವಿಗೆ ಸರಿಯಾದ ದಿನ,ಸಮಯ ಕಂಡು ಅಕ್ಷರಾಭ್ಯಾಸ ಮಾಡಿಸಬೇಕು. ಮಗುವಿಗೆ ವಿದ್ಯಾರಂಭ ಮಾಡುವಾಗ ಯಾವ ಯಾವ ನಿಯಮ ಅನುಸರಿಸಬೇಕು ಅಂತಾ ತಿಳಿಯೋಣ ಬನ್ನಿ..
ವಿದ್ಯಾರಂಭ ಮಾಡುವಾಗ ಮಗುವಿಗೆ 3 ವರ್ಷ ಆಗಿರಬೇಕು. ಮೊದಲೆಲ್ಲ 5 ವರ್ಷ ತುಂಬಿದ ಬಳಿಕ, ಅಕ್ಷರಾಭ್ಯಾಸ ಮಾಡಿ, ಶಾಲೆಗೆ ಸೇರಿಸುತ್ತಿದ್ದರು. ಆದರೆ ಈಗ ಮಕ್ಕಳಿಗೆ 3 ವರ್ಷಕ್ಕೆ ಶಾಲೆಗೆ ಸೇರಿಸುತ್ತಿದ್ದಾರೆ. ಹಾಗಾಗಿ 3 ವರ್ಷ ಆದಾಗ, ಮಗುವಿಗೆ ಅಕ್ಷರಾಭ್ಯಾಸ ಮಾಡಿಸುತ್ತಾರೆ. ಇಂದಿನ ಮಕ್ಕಳು ಮೂರು ವರ್ಷಕ್ಕೆ ಜಾಣರಾಗುತ್ತಿದ್ದಾರೆ. ಹೀಗಾಗಿ 3 ವರ್ಷಕ್ಕೆ ಅಕ್ಷರಾಭ್ಯಾಸ ಮಾಡಿಸಬಹುದು.
ಹಿಂದೂ ಧರ್ಮದಲ್ಲಿ ಮಗುವಿಗೆ ಪದ್ಧತಿ ಪ್ರಕಾರ, ವಿದ್ಯಾರಂಭ ಮಾಡಿಸಿ, ದೇವರಲ್ಲಿ ಮಗುವಿಗೆ ಉತ್ತಮ ಭವಿಷ್ಯ ಸಿಗಲಿ ಎಂದು ಪ್ರಾರ್ಥಿಸಲಾಗುತ್ತದೆ. ಸರಸ್ವತಿ ದೇವಿಗೆ ಪ್ರಾರ್ಥಿಸಿ, ಬಟ್ಟಲಲ್ಲಿ ಅಕ್ಕಿ ಹಾಕಿ. ಅದರಲ್ಲಿ ಮಗುವಿಗೆ ಅಕ್ಷರವನ್ನು ಬರೆಸುವ ಮೂಲಕ, ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಮನೆಯಲ್ಲಿ ಅಥವಾ ದೇವಿಯ ದೇವಸ್ಥಾನದಲ್ಲಿ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ.
ಕರ್ನಾಟಕದಲ್ಲಿ ಜನ ಹೆಚ್ಚಾಗಿ ದಕ್ಷಿಣ ಕನ್ನಡದ ದೇವಸ್ಥಾನಗಳಿಗೆ ಬಂದು ಅಕ್ಷರಾಭ್ಯಾಸ ಮಾಡಿಸಿಕೊಂಡು ಹೋಗುತ್ತಾರೆ. ಶೃಂಗೇರಿಯಲ್ಲಿ ಶಾರದೆ ನೆಲೆಸಿರುವ ಕಾರಣ, ಹೆಚ್ಚಿನವರು ಇಲ್ಲಿ ಬಂದು ವಿದ್ಯಾರಂಭ ಮಾಡುತ್ತಾರೆ. ಇನ್ನು ಕೆಲವರು ಕಟೀಲು, ಪೊಳಲಿ ಕ್ಷೇತ್ರಕ್ಕೆ ಬಂದು, ದೇವಿಯ ಆಶೀರ್ವಾದ ಪಡೆದು, ಪದ್ಧತಿ ಪ್ರಕಾರ ವಿದ್ಯಾರಂಭ ಮಾಡುತ್ತಾರೆ.
ಈ ದಿನ ಮಗು ಮತ್ತು ಮಗುವಿ ತಂದೆ ತಾಯಿ ಸ್ನಾನಾದಿಗಳನ್ನು ಮಾಡಿ, ಹೊಸ ವಸ್ತ್ರಗಳನ್ನು ಧರಿಸಿ, ಅಕ್ಷರಾಭ್ಯಾಸ ಪೂಜೆಗೆ ಕೂರುವುದು ಪದ್ಧತಿ. ಪ್ರಥಮ ಪೂಜಿತನಾದ ಮಹಾಗಣಪತಿ ಮತ್ತು ಶಾರದೆ ದೇವಿಯ ಮುಂದೆ ಹಣ್ಣು ಕಾಯಿ, ಸ್ಲೇಟು ಬಳಪ, ಪುಸ್ತಕ ಇಟ್ಟು, ಪೂಜೆ ಮಾಡಿ, ಅಕ್ಷರಾಭ್ಯಾಸ ಶುರು ಮಾಡಲಾಗುತ್ತದೆ. ಹೀಗೆ ಮಾಡಿದರೆ, ಮಗು ವಿದ್ಯಾವಂತೆಯಾಗಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತದೆ ಅನ್ನೋ ನಂಬಿಕೆ ಇದೆ.

