Spiritual :ಅನ್ನಪೂರ್ಣೆಯ ಕೃಪೆ ಯಾರ ಮೇಲಿರುತ್ತದೆಯೋ, ಅವರು ಎಂದಿಗೂ ಹೊಟ್ಟೆ ಹಸಿವಿನಂದ ನರಳುವುದಿಲ್ಲ ಅನ್ನೋ ಮಾತಿದೆ. ಅಂಥ ಅನ್ನಪೂರ್ಣೆಯ ಕೃಪೆ ನಮಗೆ ಬೇಕಾದರೆ, ನಾವು ಹಲವು ಕೆಲಸಗಳನ್ನು ಮಾಡಬಾರದು. ಅಡುಗೆ ಕೋಣೆಯಲ್ಲಿ ಹಲವು ವಸ್ತುಗಳನ್ನು ಇಡಬಾರದು. ಹಾಗಾದ್ರೆ ನಾವು ಅಡುಗೆ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಅಂತಾ ತಿಳಿಯೋಣ ಬನ್ನಿ..
ಕಸದ ಬುಟ್ಟಿ. ಕೆಲವರು ಕಸ ಹಾಕಲು ಈಸಿಯಾಗಲಿ ಎಂದು ಕಸದ ಬುಟ್ಟಿಯನ್ನು ಅಡುಗೆ ಕೋಣೆಯೊಳಗೇ ಇಡುತ್ತಾರೆ. ಆದರೆ ಇದು ತಪ್ಪು. ಕಸದ ಬುಟ್ಟಿಯನ್ನು ಸದಾ ಹೊರಗೆ ಇಡಬೇಕು. ಏಕೆಂದರೆ, ಕಸ ಎಂದರೆ ದರಿದ್ರ ಇದ್ದ ಹಾಗೆ. ಅದು ನಕಾರಾತ್‌ಮಕ ಶಕ್ತಿಯನ್ನು ಸೆಳೆಯುತ್ತದೆ. ಹಾಗಾಗಿ ಕಸದ ಬುಟ್ಟಿ ಮನೆಯಲ್ಲಿ ಇದ್ದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ. ಆಗ ಮನೆಯಲ್ಲಿ ಮನಸ್ತಾಪ, ಆರ್ಥಿಕ ಪರಿಸ್ಥಿತಿ ಹದಗೆಡುವುದೆಲ್ಲ ಆಗುತ್ತದೆ. ಹಾಗಾಗಿ ಕಸದ ಬುಟ್ಟಿಯನ್ನು ಮನೆಯ ಹೊರಗೇ ಇರಿಸಿ.
ಒಡೆದ ಪಾತ್ರೆ. ಪಾತ್ರೆ ನೋಡಲು ಚೆಂದವಿದೆ, ಅಥವಾ ಅದಕ್ಕೆ ಹೆಚ್ಚು ದುಡ್ಡು ಕೊಟ್ಟಿದ್ದೇವೆ ಎಂದು ಒಡೆದ ಪಾತ್ರೆಯನ್ನು ನೀವು ಬಳಸಿದರೆ, ಅದರಿಂದ ದರಿದ್ರ ಬರುತ್ತದೆ. ಇದು ನೀವು ಅನ್ನಪೂರ್ಣೇಶ್ವರಿಗೆ ಮಾಡುವ ಅವಮಾನ. ಹೀಗಾಗಿ ಒಡೆದ ಪಾತ್ರೆ ಬಳಸಿದರೆ, ಅನ್ನಪೂರ್ಣೇಶ್ವರಿಗೆ ಅವಕೃಪೆಗೆ ಪಾತ್ರರಾಗುತ್ತೀರಿ.
ತೊಳೆಯದ ಪಾತ್ರೆ. ಕೆಲವರು ರಾತ್ರಿ ಮಲಗುವಾಗ ರಾಶಿ ರಾಶಿ ಪಾತ್ರೆಯನ್ನು ತೊಳೆಯಲು ಹಾಕುತ್ತಾರೆ. ಆದರೆ ರಾತ್ರಿ ಮಲಗುವುದರೊಳಗೆ ತೊಳೆಯಲು ಇರುವ ಪಾತ್ರೆಯನ್ನೆಲ್ಲ ತೊಳೆದೇ ಮಲಗಬೇಕು. ಇಲ್ಲವಾದಲ್ಲಿ ಮನೆಗೆ ಒಳ್ಳೆಯದಲ್ಲ. ಅಲ್ಲದೇ, ಕೆಲವರು ಉಂಡ ಬಟ್ಟಲನ್ನೂ ತೊಳೆಯದೇ ಹಾಗೆ ಇಡುತ್ತಾರೆ. ಇದು ಇನ್ನೂ ದರಿದ್ರ. ಹಾಗಾಗಿ ರಾತ್ರಿ ಮಲಗುವುದರೊಳಗೆ ಎಲ್ಲ ಪಾತ್ರೆಯನ್ನು ತೊಳೆದಿಟ್ಟು ಮಲಗುವುದು ಉತ್ತಮ.
ಪೊರಕೆ. ಅಡುಗೆ ಕೋಣೆಯೊಳಗೆ ಪೊರಕೆಯನ್ನು ಇಡಬಾರದು. ಪೊರಕೆಯನ್ನು ಲಕ್ಷ್ಮೀ ದೇವಿಯ ರೂಪ ಎನ್ನುತ್ತಾರೆ. ಆದರೆ ಪೊರಕೆ ಕಸವನ್ನು ಕ್ಲೀನ್ ಮಾಡುತ್ತದೆ. ಹಾಗಾಗಿ ಪೊರಕೆ ಅಡುಗೆ ಕೋಣೆಯಲ್ಲಿದ್ದರೆ, ನಕಾರಾತ್ಮಕತೆ ಹೆಚ್ಚುತ್ತದೆ. ಹಾಗಾಗಿ ಪೊರಕೆಯನ್ನು ಮನೆಯ ಹೊರಗೆ ಇಡಿ.
ಚಪ್ಪಲಿ. ಈ ಮಾತನ್ನು ನಾವು ನಿಮಗೆ ಹಲವು ಬಾರಿ ಹೇಳಿದ್ದೇವೆ. ಅದೇನೆಂದರೆ, ಚಪ್ಪಲಿ ಧರಿಸಿ, ಮನೆಯೊಳಗೆ, ಅಡುಗೆ ಕೋಣೆಯೊಳಗೆ ಓಡಾಡಬಾರದು ಎಂದು ಹೇಳಿದ್ದೇವೆ. ಆದರೂ ಕೂಡ ಕೆಲವು ಹೆಣ್ಣು ಮಕ್ಕಳು ಶೋಕಿಗಾಗಿ ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡುತ್ತಾರೆ. ಕೆಲವರು ಹೊರಗೆ ಧರಿಸಿ, ಓಡಾಡಿ ಬಂದ ಚಪ್ಪಲಿಯನ್ನೇ ಮನೆಯೊಳಗೆ ಧರಿಸುತ್ತಾರೆ. ಇದರಿಂದ ಆ ಮನೆ ಎಂದಿಗೂ ಉದ್ಧಾರವಾಗುವುದಿಲ್ಲ. ಇನ್ನು ಅಡುಗೆ ಕೋಣೆಗೆ ಚಪ್ಪಲಿ ಧರಿಸಿ ಹೋದರೆ, ಅನ್ನದ ಕೊರತೆ ಉಂಟಾಗುತ್ತದೆ.

