Spiritual Story: ದೇವರ ಪೂಜೆಗೆ ನಾವು ಮಲ್ಲಿಗೆ, ಗುಲಾಬಿ, ದಾಸವಾಳ, ಸೇರಿ ಹಲವು ಹೂವುಗಳ ಬಳಕೆ ಮಾಡುತ್ತೇವೆ. ಆದರೆ ಹೆಚ್ಚಾಗಿ ಹಬ್ಬ ಹರಿದಿನಗಳಲ್ಲಿ, ವಿಶೇಷ ಪೂಜೆ ಇರುವ ದಿನಗಳಲ್ಲಿ ದೇವರಿಗೆ ಚೆಂಡು ಹೂವಿನಿಂದಲೇ ಅಲಂಕಾರ ಮಾಡಲಾಗುತ್ತದೆ. ಹಾಗಾದ್ರೆ ದೇವರಿಗೆ ಚೆಂಡು ಹೂವು ಶ್ರೇಷ್ಠ ಅಂತಾ ಹೇಳುವುದೇಕೆ ಅಂತಾ ತಿಳಿಯೋಣ ಬನ್ನಿ..
ಚೆಂಡು ಹೂವನ್ನು ಬರೀ ಪೂಜೆಗಷ್ಟೇ ಅಲ್ಲ, ಅಲಂಕಾರಕ್ಕೂ ಬಳಸಲಾಗುತ್ತದೆ. ನೀವು ಮನೆಗೆ ಎಷ್ಟೇ ಚಂದದ ಬೇರೆ ಹೂವು, ಲೈಟಿಂಗ್ ಅಲಂಕಾರ ಮಾಡಿದರೂ ಕೂಡ, ಚೆಂಡು ಹೂವಿನ ಅಲಂಕಾರದ ಮುಂದೆ ಅವು ವಿಜೃಂಭಿಸುವುದಿಲ್ಲ. ಏಕೆಂದರೆ, ಚೆಂಡು ಹೂವಿನ ಮಾತೇ ಹಾಗೆ. ಹಳದಿ ಮತ್ತು ಗಾಢ ಕೇಸರಿ ಬಣ್ಣದ ಹೂವು, ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಇನ್ನು ಪೂಜೆಗೂ ಕೂಡ ಚೆಂಡು ಹೂವು ಶ್ರೇಷ್ಠವಾಗಿದೆ. ಏಕೆಂದರೆ, ಹಳದಿ ಬಣ್ಣದ ಹೂವು ದೇವರಿಗೆ ಇಷ್ಟವಾಗುವ ಹೂವಾಗಿದೆ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ, ನಕಾರಾತ್ಮಕತೆ ಹೋಗಲಾಡಿಸುತ್ತದೆ. ಹಾಗಾಗಿ ಚೆಂಡು ಹೂವನ್ನು ಪೂಜೆಗೆ ಬಳಸುತ್ತಾರೆ. ಆದರೆ ನೀವು ಯಾವುದೇ ಬಾಡಿದ ಹೂವನ್ನು ಎಂದಿಗೂ ದೇವರ ಪೂಜೆಗೆ ಬಳಸಬಾರದು. ಇದರಿಂದ ಪೂಜೆಯ ಫಲ ದೊರಕುವುದಿಲ್ಲ. ಅಲ್ಲದೇ, ಬಾಡಿದ ಹೂವನ್ನುಮನೆಯಲ್ಲಿ ಇರಿಸುವುದರಿಂದ, ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ.
ಇನ್ನು ದೇವರಿಗೆ ಯಾವುದೇ ಹೂವು ಹಾಕುವಾಗ, ಅದರ ಪರಿಮಳ ಕಂಡು ಹಾಕುವಂತಿಲ್ಲ. ನೆಲಕ್ಕೆ ಬಿದ್ದ ಹೂವನ್ನು ದೇವರಿಗೆ ಹಾಕುವಂತಿಲ್ಲ. ಇಂಥ ಹೂವುಗಳು ಪೂಜೆಗೆ ಯೋಗ್ಯವಾದುದಲ್ಲ. ಪೂಜೆಗೆ ಬಳಸುವ ಹೂವು ಪರಿಶುದ್ಧವಾಗಿರಬೇಕು. ಅದನ್ನು ಮೊದಲು ದೇವರೇ ಅನುಭವಿಸಬೇಕು. ಹಾಗಾಗಿ ಪರಿಮಳ ಕಂಡ ಹೂವು, ನೆಲಕ್ಕೆ ಬಿದ್ದ ಹೂವು, ಋತುಮತಿಯಾದ ಹೆಣ್ಣು ಮಕ್ಕಳು ಮುಟ್ಟಿದ ಹೂವು ಪೂಜೆಗೆ ಬಳಸುವಂತಿಲ್ಲ.