Spiritual: ನಾವು ದೇವಸ್ಥಾನಕ್ಕೆ ಹೋಗುವಾಗ, ದೇವರಿಗೆ ನೈವೇದ್ಯವಾಗಿ ಹಣ್ಣು, ಹಂಪಲು ತೆಗೆದುಕೊಂಡು ಹೋಗುತ್ತೇವೆ. ಮನೆಯಲ್ಲಿ ಪೂಜೆ ಮಾಡುವಾಗ, ದೇವರಿಗೆಂದೇ ಮಡಿಯಲ್ಲಿ ಸಸ್ಯಹಾರಿ ಖಾದ್ಯವನ್ನು ತಯಾರಿಸುತ್ತೇವೆ. ಆದರೆ ವೃದ್ಧೆಯೊಬ್ಬಳು, ಪುರಿ ಜಗನ್ನಾಥನಿಗೆ ಮೀನಿನ ಖಾದ್ಯ ತಯಾರಿಸಿ, ನೈವೇದ್ಯ ಮಾಡಲು ಹೋದಳಂತೆ. ಹಾಗಾದರೆ ಬಳಿಕ ಏನಾಯಿತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಮ್ಮೆ ಓರ್ವ ವೃದ್ಧೆ ಜಗನ್ನಾಥನ ದರ್ಶನಕ್ಕಾಗಿ ದೇವಸ್ಥಾನಕ್ಕೆ ಬರುತ್ತಾಳೆ. ಅವಳು ಜಗನ್ನಾಥನ ದರ್ಶನ ಮಾಡುತ್ತಿದ್ದಂತೆ, ಅವಳಿಗೆ ದೇವರ ಬಗ್ಗೆ ಭಕ್ತಿ ಹೆಚ್ಚಾಗುತ್ತದೆ. ಜಗನ್ನಾಥ ಅತ್ಯಂತ ಪ್ರಿಯನಾಗಿಬಿಡುತ್ತಾನೆ. ದರ್ಶನ ಮುಗಿಸಿ, ಮನೆಗೆ ಬಂದ ಅಜ್ಜಿಗೆ, ಜಗನ್ನಾಥನಿಗೆ ತಾನು ಏನಾದರೂ ನೀಡಬೇಕು. ಏನನ್ನಾದರೂ ನೈವೇದ್ಯ ಮಾಡಬೇಕು ಎನ್ನಿಸುತ್ತದೆ.
ಅವಳು ಮಾಂಸಹಾರಿಯಾದ ಕಾರಣ, ಅವಳು ಮನೆಗೆ ಮೀನು ತಂದು ಖಾದ್ಯ ಮಾಡಿ ತಿನ್ನುತ್ತಿದ್ದಳು. ಅಮಾಯಕ ಅಜ್ಜಿಗೆ, ಜಗನ್ನಾಥನಿಗೆ ಮಾಂಸಾಹಾರದ ನೈವೇದ್ಯ ನೀಡಬಾರದು ಎಂದು ಗೊತ್ತಿರಲಿಲ್ಲ. ಆಕೆಗೆ ಅವನ ಭಕ್ತಿ ಮಾಡುವುದಷ್ಟೇ ಗೊತ್ತಿತ್ತು. ಹಾಗಾಗಿ ತಾನು ಏನು ತಿನ್ನುತ್ತೇನೋ, ಅದನ್ನೇ ಜಗನ್ನಾಥನಿಗೆ ನೀಡೋಣವೆಂದು ಆಕೆ, ಮೀನಿನ ಖಾದ್ಯ ಮಾಡಿ, ಜಗನ್ನಾಥನ ಮಂದಿರಕ್ಕೆ ತೆಗೆದುಕೊಂಡು ಹೋದಳು.
ಆಕೆ ದೇವಸ್ಥಾನಕ್ಕೆ ಹೋಗುತ್ತಿದ್ದಂತೆ, ಅಲ್ಲಿದ್ದ ಅರ್ಚಕರಿಗೆ ಮೀನಿನ ವಾಸನೆ ಮೂಗಿಗೆ ಬಡಿದು, ಅವರೆಲ್ಲ ಓಡೋಡಿ ವೃದ್ಧೆಯ ಬಳಿ ಬಂದರು. ಮತ್ತು ದೇವರ ದರ್ಶನಕ್ಕೆ ಬರುವಾಗ, ಮೀನಿನ ಖಾದ್ಯ ತಂದಿದ್ದೀಯಲ್ಲ, ನಿನಗೆ ಬುದ್ಧಿ ಇಲ್ಲವೇ ಎಂದು ಬೈದರು. ಆಗ ಆಕೆ ನನಗೆ ಭಕ್ತಿ ಮಾಡುವುದಷ್ಟೇ ಗೊತ್ತು. ನಾನು ಜಗನ್ನಾಥನಿಗಾಗಿ ಏನನ್ನಾದರೂ ತರಬೇಕು ಎಂದುಕೊಂಡೆ. ನನ್ನ ಮನೆಯಲ್ಲಿ ನಾನು ಇಷ್ಟಪಟ್ಟು ತಿನ್ನುವ ಆಹಾರವೆಂದರೆ ಮೀನು. ಹಾಗಾಗಿ ಅದರಿಂದಲೇ ವಿಶೇಷ ಖಾದ್ಯ ಮಾಡಿ, ಅವನ ನೈವೇದ್ಯಕ್ಕೆ ತಂದಿದ್ದೇನೆ ಎಂದು ಹೇಳಿದಳು.
ಆಕೆ ತಾನು ತಂದ ಮೀನಿನ ಖಾದ್ಯ ತೆಗೆದು ಅರ್ಚಕರಿಗೆ ತೋರಿಸುವಾಗ, ಆ ಖಾದ್ಯ ಹಲಸಿನ ಕಾಯಿಯ ಪಲ್ಯವಾಗಿ ಮಾರ್ಪಾಡಾಗಿತ್ತು. ವೃದ್ಧೆಯ ಭಕ್ತಿಯನ್ನು ಮೆಚ್ಚಿದ್ದ ಜಗನ್ನಾಥ, ಮೀನಿನ ಖಾದ್ಯವನ್ನು, ಹಲಸಿನ ಪಲ್ಯವಾಗಿ ಮಾರ್ಪಾಡು ಮಾಡಿದ್ದ. ಅರ್ಚಕರು ಜಗನ್ನಾಥನ ಪವಾಡವನ್ನು ಮೆಚ್ಚಿ, ಜಗನ್ನಾಥನಿಗೆ ಹಲಸಿನಕಾಯಿ ಪಲ್ಯವನ್ನು ನೇವೈದ್ಯ ಮಾಡಿದರು.