Spiritual: ಓರ್ವ ಸ್ತ್ರೀ ಎರಡು ಮನೆಯನ್ನು ಬೆಳಗುವ ದೀಪವಾಗಿರುತ್ತಾಳೆ. ಹುಟ್ಟಿ ಬೆಳೆದು ತವರು ಮನೆಯನ್ನು ಬೆಳಗಿದರೆ, ವಿವಾಹವಾಗಿ ಹೋಗಿ, ಗಂಡನ ಮನೆಯನ್ನು ಬೆಳಗುತ್ತಾಳೆ. ತನ್ನದಲ್ಲದ ಮನೆಯನ್ನು ತನ್ನ ಮನೆ ಮಾಡಿಕೊಂಡು, ಅಲ್ಲಿ ಹೊಂದಿಕೊಂಡು ಹೋಗುವ ಯೋಗ್ಯತೆಯನ್ನು ದೇವರು, ಅದಾಗಲೇ ಹೆಣ್ಣಿಗೆ ಕೊಟ್ಟೇ ಹುಟ್ಟಿಸಿರುತ್ತಾನೆ. ಆಕೆ ತವರು ಮನೆಯಲ್ಲಿ ಎಷ್ಟೇ ಸುಖವಾಗಿದ್ದರೂ, ಗಂಡನ ಮನೆಯಲ್ಲಿ ತಾಳ್ಮೆಯೇ ಆಕೆಯ ಜೀವನದ ಅಸ್ತ್ರ. ಆದರೆ ಆಕೆಗೆ 4 ಖುಷಿ ಬೇಕೆ ಬೇಕು. ಇಲ್ಲವಾದಲ್ಲಿ ಅವಳ ಜೀವನ ವ್ಯರ್ಥ. ಹಾಗಾದರೆ ಮಹಿಳೆಗೆ ಬೇಕಾದ ಆ 4 ಖುಷಿ ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯ ಖುಷಿ, ಸೌಭಾಗ್ಯದ ಖುಷಿ. ಓರ್ವ ಹೆಣ್ಣು ಜೀವನದಲ್ಲಿ ಕಷ್ಟವನ್ನು ಅನುಭವಿಸುತ್ತಾಳಾ ಅಥವಾ ಸುಖವನ್ನು ಅನುಭವಿಸುತ್ತಾಳಾ ಅನ್ನುವುದು, ಅವಳ ಹಣೆಬರಹದ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಹೆಣ್ಣು ಉತ್ತಮ ಸೌಭಾಗ್ಯವನ್ನು ಬಯಸುತ್ತಾಳೆ. ತಾನು ಲಕ್ಕಿಯಾಗಿರಬೇಕು. ತನಗೆ ಒಳ್ಳೆಯ ಪತಿ, ಉತ್ತಮ ಕೆಲಸ, ಉತ್ತಮ ಸಂತಾನ ಸೇರಿ ಎಲ್ಲಾ ಸೌಭಾಗ್ಯಗಳು ದೊರೆಯಬೇಕು ಎಂದು ಹೆಣ್ಣು ಬಯಸುತ್ತಾಳೆ.
ಎರಡನೇಯ ಖುಷಿ ದುಡ್ಡು. ದುಡ್ಡು ಯಾರಿಗೆ ತಾನೇ ಬೇಡ ಹೇಳಿ..? ಹೆಣ್ಣಾಗಲಿ, ಗಂಡಾಗಲಿ, ಹಿರಿಯರಾಗಲಿ, ಕಿರಿಯರಾಗಲಿ ಎಲ್ಲರಿಗೂ ದುಡ್ಡೆಂದರೆ ಆಸೆ ಇದ್ದೇ ಇರುತ್ತದೆ. ಅದೇ ರೀತಿ ಹೆಣ್ಣು ಸಂಪತ್ತನ್ನ ಬಯಸುತ್ತಾಳೆ. ಕೆಲ ಹೆಣ್ಣು ಮಕ್ಕಳು, ಅಪ್ಪ ಮಾಡಿದ ಆಸ್ತಿಗೆ, ಗಂಡನ ಬಳಿ ಇರುವ ದುಡ್ಡಿಗೆ ಇಚ್ಛೆ ಪಟ್ಟರೆ, ಇನ್ನು ಕೆಲ ಹೆಣ್ಣು ಮಕ್ಕಳು ತಾವು ದುಡಿದು ಸಂಪಾದಿಸುವ ಹಣದಲ್ಲೇ ಖುಷಿಯಾಗಿರಲು ಬಯಸುತ್ತಾರೆ. ಇಂಥವರು ಯಾರ ಹಂಗನ್ನೂ ಬಯಸುವುದಿಲ್ಲ.
ಮೂರನೇಯ ಖುಷಿ ಧರ್ಮ. ಹಲವಾರು ಮನೆಯಲ್ಲಿ ಹೆಣ್ಣು ಮಕ್ಕಳೇ ಹೆಚ್ಚು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದು. ಹಬ್ಬ ಹರಿದಿನಗಳಲ್ಲಿ, ಹೋಮ-ಹವನ, ಪೂಜೆ ಹೀಗೆ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಹೆಣ್ಣು ಮಕ್ಕಳು ಭಾಗವಹಿಸಲು ಹೆಚ್ಚು ಖುಷಿ ಪಡುತ್ತಾರೆ. ನೀವೇ ನೋಡಿರುವ ಹಾಗೆ, ಮದುವೆ ಮನೆ, ಗೃಹಪ್ರವೇಶ ಕಾರ್ಯಕ್ರಮ ಎಲ್ಲ ಕಡೆಯೂ ಹೆಣ್ಣು ಮಕ್ಕಳದ್ದೇ ಕಾರುಬಾರು ಇರುತ್ತದೆ.
ನಾಲ್ಕನೇಯ ಖುಷಿ, ಉತ್ತಮ ಸಂತಾನ. ಪ್ರತೀ ಹೆಣ್ಣು ಪರಿಪೂರ್ಣಗೊಳ್ಳಲು ಬೇಕಾಗಿರುವುದು ಸಂತಾನ. ಹಾಗಾಗಿ ಆಕೆ ತಾಯಿಯಾಗುವ ಖುಷಿಯನ್ನು ಬಯಸುತ್ತಾಳೆ. ತಾಯ್ತನದ ಅನುಭವವೇ ಬೇರೆ. ಅದನ್ನು ಓರ್ವ ಹೆಣ್ಣು ತಾಯಿಯಾದಾಗಳಷ್ಟೇ ಅನುಭವಿಸುತ್ತಾಳೆ. ಹೊಟ್ಟೆಯಲ್ಲಿರುವ ಮಗು ಆಗಾಗ ಮುದ್ದಾಗಿ ಒದೆಯುವ ಅನುಭವ. ಅದನ್ನು ಮೊದಲ ಬಾರಿ ಅಪ್ಪಿಕೊಂಡಾಗ, ಅದು ಕೊಡುವ ನೆಮ್ಮದಿ ಅಪ್ಪುಗೆಯ ಸುಖವನ್ನು ಅನುಭವಿಸುವುದು ತಾಯಿಯೊಬ್ಬಳೇ. ಹಾಗಾಗಿ ತಾಯಿಯಾಗುವ ಖುಷಿಯನ್ನು ಹೆಣ್ಣು ಬಯಸುತ್ತಾಳೆ.